ಇಂದಿರಾ ಮೋಟೆಬೆನ್ನೂರ-ಅವಳ ಅಂತರಂಗ

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ.

ಅವಳ ಅಂತರಂಗ

ಇಂದು ಅವಳ ಮುದ್ದು
ಕೃಷ್ಣನ ಆಗಮನ..
ಮನ ಮಲ್ಲಿಗೆಯ
ಹಂದರದ ತುಂಬಾ
ಬಿರಿದ ನೆನಪ ಮೊಗ್ಗೆಗಳ
ಗೊಂಚಲ ಸವಿ ಸಂಚಲನ…

ಹೊಸ ಬಾಳ ಹೊಸಿಲಲ್ಲಿ
ಜೊತೆಯಾಗಿ ಅಡಿಯಿಡಲು
ನಿಂತ ಅವಳ ಪುಟ್ಟ ಗಿರಿಧಾರಿ..
ಇಂದು ಬೆಳೆದು ನಿಂದು
ನವಿರಾಗಿ ಸವರಿದ ನವಿಲುಗರಿ…

ದೇವಕಿಯಾಗುವ ಭಾಗ್ಯ
ಅವಳದಾಗಿರದಿದ್ದರೂ…
ಯಶೋಧೆಯಾಗಿ ವಾತ್ಸಲ್ಯದ
ಹೂ ಮಳೆ ಸುರಿಸಿದ ಭಾಗ್ಯ
ಅವಳದು…

ಒಬ್ಬರಲ್ಲ ಇಬ್ಬರಲ್ಲ
ಹಲವಾರು ಮುದ್ದು ಕಂದಮ್ಮಗಳ
ಪೊರೆದ ಮಮತೆಯ ತೊಟ್ಟಿಲು..
ವಾತ್ಸಲ್ಯದ ಮೃದು ಮಧುರ ಬಟ್ಟಲು….
ಅವಳು…
ಜೀವಕ್ಕೆ ಜೀವ ಕೊಡುವ ಗೆಳತಿಯರ
ದಂಡು…
ತಮ್ಮ ಹುಟ್ಟಿದ ಹಸುಗೂಸನ್ನೇ ಅವಳ ಖಾಲಿ
ಮಡಿಲಿಗೆ ಹಾಕಿ ತೂಗಿದ ದೇವತೆಗಳ ಹಿಂಡು…
ಅವಳಿಗೆಂದೂ ತಾಯ್ತನದ ಕೊರತೆಯೇ
ಕಾಡಲಿಲ್ಲ….

ಅವಳ ಅಂತರಂಗ ಅರಿತವರಾರಿಲ್ಲ…
ಅಂತಃಕರಣ ಅಂತರಗಂಗೆಯಲಿ ಮಿಂದವರೆಲ್ಲ..
ಇಂದು ಯಶೋಧೆಯ ಮಮತೆಯ ಮಡಿಲು
ಪಡೆದು ಧನ್ಯತೆಯ ರೂಪ..
ದಿವ್ಯ ಸ್ವರೂಪ…
ಕಂಗಳು ಕಡೆದ ಪ್ರೀತಿ ಬೆಳದಿಂಗಳು…
ಬಾಲ ಚಂದಿರ ಆಡಿದ ಮನದಂಗಳು…
ಯಶೋಧೆಯ ಅಂತರಂಗ.. ಭಾವಗಂಗ…
ಜೀವ ತರಂಗ…ಇರುಳು ಕಡೆದ ಮಮತೆ ತಿರುಳು…


Leave a Reply

Back To Top