ಕಾವ್ಯ ಸಂಗಾತಿ
ಭಾಗ್ಯ ಎಂ.ವಿ.
ಗಜಲ್
ಹೃದಯ ಬಾಧಿಸುವ ಭೂತ ನೆನಪುಗಳೇ ಸುಳಿಯದಿರಿ ಮತ್ತೊಮ್ಮೆ
ಮನವನು ಸುಡುವ ಉರುವಲು ಯಾತನೆಗಳೇ ಬಾಡಿಸದಿರಿ ಮತ್ತೊಮ್ಮೆ
ಶಾಂತಿ ನೆಮ್ಮದಿಯನ್ನರಸುತ್ತ ವಲಸೆ ಹೋಗಲೆತ್ತ ಚಿತ್ತ!?
ಕನಸುಗಳನು ಕೊಲ್ಲುವ ಯೋಚನೆಗಳೇ ಬೇಟೆಯಾಡದಿರಿ ಮತ್ತೊಮ್ಮೆ
ಬಿದ್ದ ಜಾಗದಲ್ಲೇ ಚಿಗುರಿ ನಳಿಸುತ್ತಿಹುದು ಬದುಕೆಂಬ ವೃಕ್ಷ!
ಆತ್ಮಬಲವನ್ನು ಪಣಕ್ಕಿಡುವ ಚಿಂತೆಗಳೇ ಬೀಳಿಸದಿರಿ ಮತ್ತೊಮ್ಮೆ
ಕಂಬನಿ ಬರೆದ ಕಥೆಗೆ ಇಟ್ಟಾಗಿದೆ ಕೊನೆಯ ಪೂರ್ಣ ವಿರಾಮ.
ಮತ್ತೆ ಶೋಕ ತರುವ ಭಾವಗಳೇ ಮೊಳೆಯದಿರಿ ಮತ್ತೊಮ್ಮೆ
ಭರವಸೆಯ ಬೆಳಕಿರಲು ಕತ್ತಲೆಯಲ್ಲೂ ಸಾಗಿಹಳು ಭಾಗ್ಯ!
ಹಗಲಲ್ಲೂ ಬೆಚ್ಚಿಬೀಳಿಸುವ ದುಃಸ್ವಪ್ನಗಳೇ ನುಸುಳದಿರಿ ಮತ್ತೊಮ್ಮೆ
ಭಾಗ್ಯ ಎಂ.ವಿ.
NuceGazhalmadam