ಸುಧಾ ಪಾಟೀಲ ಕವಿತೆ-ಮೌನವು ಮಾತಾಯಿತು

ಕಾವ್ಯ ಸಂಗಾತಿ

ಸುಧಾ ಪಾಟೀಲ

ಮೌನವು ಮಾತಾಯಿತು

ಮೌನದ ಹೊದಿಕೆಯನು
ಮನಸಿನ ಪರದೆಯನು
ಬಿಚ್ಚಿ ಬಿಚ್ಚಿ ನೀ ಹರವಲು
ಮೌನ ಮಾತಾಯಿತು

ಎದೆಯ ಆಳದ ದುಃಖವ
ಮನದ ಬಂಧನವ ತೊರೆದು
ಹರಿದು ನೀ ಹೊನಲಾಗಿ ಬಂದಾಗ
ಮೌನ ಮಾತಾಯಿತು

ಬೇಸರದ ಕ್ಷಣಗಳ ಬಿಟ್ಟು
ದುಮ್ಮಾನದ ಗೋಡೆಯ ಒಡೆದು
ಸಂತಸದ ಕ್ಷಣಗಳನ್ನು ನೀ ಬೆಂಬತ್ತಿದಾಗ
ಮೌನ ಮಾತಾಯಿತು

ಜರ್ಜರಿತ ಭಾವನೆಯ ಮೀರಿ
ಕ್ಷಣಿಕ ಲೋಲುಪ್ತತೆಗಳ ದಾಟಿ
ನಳನಳಿಸಲು ನೀ ಹೊರಹೊಮ್ಮಿದ
ಘಳಿಗೆಯಲ್ಲಿ
ಮೌನ ಮಾತಾಯಿತು

ಅನ್ಯರ ಮಾತುಗಳ ಆಡಿ
ಆಳದ ತಳಮಳವ ಒತ್ತಿ
ಚಿಗುರಲು ನೀ ಸಿದ್ಧಳಾದಾಗ
ಮೌನ ಮಾತಾಯಿತು

ಬೇರೆಯವರನು ನೆಚ್ಚಿಸುವ
ಪರರ ಓಲೈಸುವ ಕಾರ್ಯ
ನೀ ವಿಧಿಯಿಲ್ಲದೆ ತೊರೆದಾಗ
ಮೌನ ಮಾತಾಯಿತು

ಪರಸ್ಪರ ತಿಳುವಳಿಕೆ ಮೂಡಿ
ಗೌರವ ನೀ ಅರಸಿದಾಗ
ಬೆಂಬಲದ ಭರವಸೆ ಮೂಡಲು
ಮೌನ ಮಾತಾಯಿತು


ಸುಧಾ ಪಾಟೀಲ


Leave a Reply

Back To Top