ಅರ್ಚನಾ ಯಳಬೇರು-ಗಜಲ್

ಕಾವ್ಯ ಸಂಗಾತಿ

ಅರ್ಚನಾ ಯಳಬೇರು

ಗಜಲ್

ಸಾರ್ವಭೌಮನಾಗಿ ಮೆರೆವ ಸಂತಸವೇ ಹೃದಯ ಸಿಂಹಾಸನ ಅಲಂಕರಿಸು ಬಾ
ನಿತ್ಯ ನಲಿವ ಕೊಂದು ಸಭ್ಯತೆ ತೋರುವ ನೋವಗಳ ಸದ್ದಿಲ್ಲದೆ ಹುಟ್ಟಡಗಿಸು ಬಾ

ಭಾವ ಬುತ್ತಿಯ ಗಂಟು ಹೊತ್ತು ಸಾಗುತಿಹೆ ನೆಲೆಯಿಲ್ಲದ ಜಂಜಡದ ಬದುಕಿನಲಿ
ನೆತ್ತರು ಬಸಿವ ಕಂಗಳಲಿ ಕಿತ್ತು ತಿನ್ನುತಿಹ ಕೈಂಕರ್ಯಗಳ ಕಸರತ್ತಿದೆ ವೀಕ್ಷಿಸು ಬಾ

ತೊರೆಯ ಗರ್ಭದಿ ಧರಿಸಿಹ ತಿರೆಗೆಲ್ಲಿದೆ ಅಹಮಿಕೆ ಅರಿತು ಬಾಳು ನೀನು ಮನುಜ
ತತ್ವ ಸಿದ್ಧಾಂತಗಳ ತಾತ್ಪರ್ಯದಿ ಅಡಗಿ ಕುಳಿತ ವಾಸ್ತವದ ಗುಟ್ಟನು ರಟ್ಟಾಗಿಸು ಬಾ

ನಭದಿ ನಳನಳಿಸುವ ಚುಕ್ಕಿಗಳಿಗೆ ಕಿಂಚಿತ್ತೂ ಕೀರ್ತಿಯ ಹಂಗಿಲ್ಲ ಬಲ್ಲೆಯಾ ಮನವೇ
ನೀಗಿದ ಹಸಿವಲಿ ಹರಿದ ಬೆವರಿನ ಝರಿಯಿದೆ ತೋಳುಗಳ ಒಮ್ಮೆ ಪುರಸ್ಕರಿಸು ಬಾ

ಅರ್ಚನಾಳ ಆಪ್ತತೆಯ ಆಲಾಪಕೆ ಪಿಕಗಳ ಕೂಜನದ ಕಲರವವಿದೆ ಆಲಿಸುವೆಯಾ
ಅರಸಿ ಬರುವ ಹೊಂಗನಸುಗಳಿಗೆ ನನಸಾಗುವ ದಿವ್ಯ ಬಯಕೆಯಿದೆ ಸತ್ಕರಿಸು ಬಾ


ಅರ್ಚನಾ ಯಳಬೇರು

2 thoughts on “ಅರ್ಚನಾ ಯಳಬೇರು-ಗಜಲ್

  1. ಮರೆತೇ ಹೋಗಿದ್ದ ಕನ್ನಡ ಪದಗಳ ಮತ್ತೆ ನೆನಪಿಸಿದ್ದೀರಿ ಮೇಡಂ

  2. ಸುಂದರ ಗಝಲ್.. ಮತ್ಲ ಮತ್ತು ಕಾಫಿಯ ♦️♦️♦️♦️

Leave a Reply

Back To Top