ಕಾವ್ಯ ಸಂಗಾತಿ
ರೇಷ್ಮಾ ಕಂದಕೂರ
ಗೃಹ ಭಂಗ
ಒಡೆದ ಮನೆ ಮನ
ಅಡಿಗಡಿಗೆ ಮಾತಿನ ಚಕಮಕಿ
ಬಡಿದಾಟದ ತುಡಿತ.
ಸಣ್ಣ ಕಂದಕ
ಬಣ್ಣನೆಗೂ ನಿಲುಕದೆ
ಕಣ್ಣ ಸಾವಿರ ನೋಟ.
ಬದಲಾದ ಮನಸ್ಥಿತಿ
ಸ್ವಾರ್ಥದ ಅಮಲೇರಿ
ಕರುಳ ಸಂಬಂಧ ಮರೆತು.
ಕೊರಳು ಬಿಗಿತ
ಬೆನ್ನಿಗೆ ಬಿದ್ದವರ ತೂರಿ
ಚಂದದ ಹಾರ ಸಂಬಂಧಿಕರಿಗೆ.
ಕೊರಗುವ ಜನುದಾತರು
ಕೆರೆದು ತಿನ್ನುವ ಹುನ್ನಾರದಿ
ಮೆರವಣಿಗೆ ಅಹವಾಲಿಗೆ.
ಸಂಸಾರದ ಬಿರುಕು
ಅನ್ಯರ ಸರಕಿಗೆ
ಮಾನ್ಯತೆಯ ತೊರೆದು.
ತಾನಷ್ಟೆ ಎನ್ನುವ ಇರಾದೆಗೆ
ಸಾಮರಸ್ಯ ಬರಿದೊಡಲು
ಸ್ವಾರಸ್ಯ ಮರಿಚೀಕೆ.
ಹೋಗುವ ಹಾದಿಯಲಿ
ಬಾಗಿ ಬಿಡು
ಮಾಗುವ ಹಣ್ಣಂತೆ.
ಕರತಾಡನಕೆ ಮೈಮರೆಸಿ
ಕೈತುತ್ತ ಬಿಸಾಡುತ
ಆನಂದರಾಗಕೆ ಮನಸೋತು.
ಇದ್ದಾಗ ತಿಳಿಯದೇ
ಹೋದಾಗ ಹೋರಾಡಿ ಅಳುತ
ಉಳಿಸಿಕೊಳ್ಳದ ಬಳುವಳಿ.
ಮರಳಿ ಬಾರದ ಕಾಲ
ಕೆರಳಿ ಕೆಂಡವೇಕೆ
ಬೆರಳು ಹಿಡಿವ ಕೈ ನರಳಿ.
ಒಡೆದು ಆಳುವ ನೀತಿ
ಎಲ್ಲೆಡೆ ಉರುಳುತಿಹುದು
ಬಲ್ಲೆನೆಂಬ ಬೀಗಿಗೆ.
ರೇಷ್ಮಾ ಕಂದಕೂರ