ಪರಿಮಳ ಐವರ್ನಾಡು -ಕೇಳವ್ವಾ ತಂಗ್ಯವ್ವ

ಕಾವ್ಯ ಸಂಗಾತಿ

ಪರಿಮಳ ಐವರ್ನಾಡು

ಕೇಳವ್ವಾ ತಂಗ್ಯವ್ವ

ಕೇಳವ್ವಾ ತಂಗ್ಯವ್ವ
ಕಿವಿಮಾತೊಂದಾ ಕೇಳವ್ವ
ನೋಡು ಕಾಲವು ಕೆಟ್ಟೈತೆ
ನರರ ಬುದ್ಧಿಯು ವರಟೈತೆ
ಕಾಮುಕ ಕಣ್ಣೋರು ಬೀದಿ ಬೀದಿನ್ಯಾಗ ಅಲಿತವ್ರೆ
ಬಣ್ಣ ಬಣ್ಣದ ಮಾತಿನಾಗೆ ಬಲೆ ಬೀಸಲು ಕಾದವ್ರೆ
ನಿನ್ನ ಜಾಗುರೀತಿ ನೀ ಮಾಡವ್ವ

ಕೇಳವ್ವಾ ತಂಗ್ಯವ್ವ
ಕಿವಿ ಮಾತೊಂದ ಕೇಳವ್ವ
ಪಾಠಸಾಲಿಗೆ ನೀ ಹೋದರ
ಕಲಿಯುದೊಂದೆ ನಿನ್ನ ಧರ್ಮ
ನೌಕರಿಗೆ ನೀ ಹೋದರ
ಕಾಯಕವೇ ನಿನ ಧರ್ಮ
ಪಿರುತೆ ಗಿರುತಿ ಅಂತ ಬದುಕ ನೀ ಕಡಿಸಬ್ಯಾಡ
ಸುಂದರ ಜಗದೊಳು ಏನಾದರು ಸಾಧಿಸು ತಂಗ್ಯವ್ವ

ಕೇಳವ್ವಾ ತಂಗ್ಯವ್ವ
ಕಿವಿ ಮಾತೊಂದ ಕೇಳವ್ವ
ರಾಕ್ಷಸ ಪ್ರವೃತ್ತಿಯೋನು
ರಾಸಲೀಲೆಗೆ ಕಾಯೋನು
ಕಾಮದ ನಶಿ ತೀರಿಸ್ಲಾಕ
ಮೋಹದ ಗಾಳ ಹಾಕ್ಲಾಕ ಸಜ್ಜನರ ವೇಷ ಹಾಕ್ತಾನ
ಕಣ್ಣಿದ್ದು ಕುರುಡಿಹಾಂಗ ಎಡವಿ ಬೀಳದಿರು ತಂಗ್ಯವ್ವ

ಕೇಳವ್ವಾ ತಂಗ್ಯವ್ವ
ಕಿವಿ ಮಾತೊಂದ ಕೇಳವ್ವ
ದೇಹ ತೃಷೆ ತೀರಿದ ಮ್ಯಾಲ
ಕಸಕ್ಕಿಂತ ಕಡೆಯಾಗುವಿ ಕೇಳ
ಶೃದ್ಧಾಳಂತೆ ಮಸಣದ ಹಾದಿ ಹಿಡಿಯೋದ್ಯಾಕೆ ಹೇಳ
ಅನಾಚಾರದ ವಿರುದ್ದ ಹೋರಾಡಿ ನಡೆಸು ಬಾಳ

ಕೇಳವ್ವಾ ತಂಗ್ಯವ್ವ
ಕಿವಿ ಮಾತೊಂದ ಕೇಳವ್ವ
ತಂದೆ ತಾಯಿ ಮಾತಿನಂತೆ
ಗುರು ಹಿರಿಯರ ನುಡಿಯಂತೆ
ಸಜ್ಜನರ ಸಲಹೆಯಂತೆ
ಜೀವನದಾಗ ಗೆಲುವು ಕಾಣುವ ವೀರನಾರಿ ನೀನಾಗು
ಶುಭವಾಗಲಿ ಗೆಲುವಾಗಲಿ ಮಂಗಳವಾಗಲಿ ತಂಗ್ಯವ್ವ


Leave a Reply

Back To Top