ಕಾವ್ಯ ಸಂಗಾತಿ
ಅರ್ಚನಾ ಯಳಬೇರು
ತರಹಿ ಗಜಲ್
ಮಲ್ಲಿನಾಥ ಶಿ ತಳವಾರರ ಊಲಾ ಮಿಸ್ರ
ಹೃದಯ ತುಂಬಿ ಬಂದಿದೆ ನಿನ್ನ ಕಾಳಜಿಗೆ ಏನೆಂದು ಹೇಳಲಿ
ಭಾವ ಭೃಂಗವು ನಲಿದಿದೆ ನಿನ್ನ ಸೊಬಗಿಗೆ ಏನೆಂದು ಹೇಳಲಿ
ಪಿಸುಮಾತುಗಳೇ ಪೀಯೂಷವು ಹೊಂಗನಸುಗಳ ಹಸಿವಿಗೆ
ಬಿಸಿಯುಸಿರು ಬೆರಗಾಗಿದೆ ನಿನ್ನ ಭವ್ಯತೆಗೆ ಏನೆಂದು ಹೇಳಲಿ
ಪಿಸುಮಾತಿನ ಕಚಗುಳಿಗೆ ಗರಿಗೆದರಿದ ಮಯೂರನು ನೀನು
ಕಾವ್ಯ ರಸಧಾರೆ ಹರಿದಿದೆ ನಿನ್ನ ಚೆಲುವಿಗೆ ಏನೆಂದು ಹೇಳಲಿ
ನನ್ನೆದೆಯ ಧಮನಿಗಳು ನಿನ್ಹೆಸರನೆ ಉಸುರುತಿವೆ ಆಲಿಸು ಬಾ
ಪ್ರೇಮ ಪಾರಿಜಾತ ಅರಳಿದೆ ನಿನ್ನ ಒಲವಿಗೆ ಏನೆಂದು ಹೇಳಲಿ
ನೇಪಥ್ಯಕ್ಕೆ ಸರಿದ ನವ್ಯತೆಯು ನಿನ್ನೊಲವ ಬೇಡುತಿದೆ ನೋಡಿಲ್ಲಿ
ಅರ್ಚನಾಳ ಅಸುವು ಕಾದಿದೆ ನಿನ್ನ ಆಪ್ತತೆಗೆ ಏನೆಂದು ಹೇಳಲಿ