ಕಾವ್ಯ ಸಂಗಾತಿ
ನನ್ನ ಕೂಸು
ಇಂದಿರಾ ಮೋಟೆಬೆನ್ನೂರ
ಬಂಗಾರ ಬಣ್ಣದ ಸಿಂಗಾರದ ಕೂಸವ್ವ
ಬಚ್ಚ ಬಾಯಿ ತೆಗೆದು ನಕ್ಕರ….ನನ್ನವ್ವ
ಸಕ್ಕರೀ ಹಾಲು ಸುರಿದ್ಹಾಂಗ…
ಮುಟ್ಟಿದರೆ ಮುನಿಯಂತೆ ಮುದುಡುವ ಮೈಯವ್ವ…
ಪುಳು ಪುಳು ಗಲ್ಲ ಸಿಹಿ ಬೆಲ್ಲ ನನ್ನವ್ವ
ಕಳಿತ ಕಲಮಿ ಮಾವಿನ ಹಣ್ಣವ್ವ….
ಬಂಗಾರದ ಕೂಸಿಗೆ ಬೆಳ್ಳಿ ಕೂದ್ಲ ಸಿಂಗಾರ
ಮನಸು ಪ್ರೀತಿಯ ಮಂದಿರ…ನನ್ನವ್ವ
ಬಾಳ ಬೆಳಕಿನ ಚಂದಿರಾ….
ಬಿಳಿ ಬಾಳಿ ದಿಂಡಅಂಥ ಕೋಲುಂಬರ ಕೈಯವ್ವ
ಮೈಯೆಲ್ಲ ಎಲುಬಿನ ಹಂದರ….ನನ್ನವ್ವ
ನಗುವ ಹುಣ್ಣಿಮೆಯ ಚಂದಿರ…
ಹೊರಲಿಲ್ಲ ಹೆರಲಿಲ್ಲ ಈ ನನ್ನ ಕೂಸನ್ನು
ಪರಶಿವನು ಇತ್ತ ಹಸುಗೂಸು ನನ್ನವ್ವ…
ನನ್ನ ಹೊತ್ತು ಹೆತ್ತಂತ ಹಡದವ್ವ…
ಅರವತ್ತರ ಅವ್ವನಿಗೆ ತೊಂಬತ್ತೆರಡರ ಮಗಳವ್ವ
ಅರವತ್ತರಲ್ಲಿ ಅರಳಿದ ಅರಳವ್ವಾ….ನನ್ನವ್ವ
ಪರಶಿವ ಕೊಟ್ಟಂತಹ ಮುತ್ತವ್ವ…
ಪರಶಿವ ಕೊಟ್ಟಂತ ಮುತ್ತಂತ ಕೂಸವ್ವ
ಪಿಳಿ ಪಿಳಿ ಕಣ್ಣು ಕರಿ ಕವಳಿ ಹಣ್ಣಂತ…ನನ್ನವ್ವನ
ನಿಂತೊಂದು ಘಳಿಗೆ ನೋಡೇನ….
ತಾಯಿ ಸದ್ಗುಣ ಗಳ ಮಹಾ ದೇವಿ.ಭೂಮಿ ಮೇಲಿನ ದೇವರು.ಅವರ ಬಗೆಗೆ ತಮ್ಮ ಕವನ ತಾಯಿ ವ್ಯಕ್ತಿ ತವ ಕಣ್ಣು ಮುಂದೆ ನಿಲ್ಲಿಸಿ ತು. ಅದ್ಭುತ.