ಸ್ಮಿತಾ ರಾಘವೇಂದ್ರ ಕವಿತೆ-ನೀ ಬರಬೇಕು ಒಮ್ಮೆ!

ಕಾವ್ಯ ಸಂಗಾತಿ

ನೀ ಬರಬೇಕು ಒಮ್ಮೆ

ಸ್ಮಿತಾ ರಾಘವೇಂದ್ರ

ಒಲವ ಸುಳಿ ಗಾಳಿಯಲಿ ಸಿಲುಕಿ
ಚದುರಿ ನಿಂತ ಭಾವಗಳ
ಹೆಕ್ಕಿ ಚುಕ್ಕಿಯಾಗಿಸಲಾದರೂ
ನೀ ಬರಬೇಕು ಒಮ್ಮೆ

ನಭದ ತುಂಬಾ ನಡೆವ
ಕರಿ ಮೋಡಗಳಕರಗಿಸಿ
ಪನ್ನೀರ ಸೋಕಲಾದರೂ
ನೀ ಬರಬೇಕು ಒಮ್ಮೆ

ಹಕ್ಕಿ ಯಾಗಸದಲಿ
ಬಿಚ್ಚಿದ ರೆಕ್ಕೆಗಳ
ಹಂಗು ಕಳಚಲಾದರೂ
ನೀ ಬರಬೇಕು ಒಮ್ಮೆ

ನಡು ನಡುವೆ ಎಷ್ಟೆಲ್ಲಾ
ನಲಿವುಗಳಿದ್ದವು
ತೆಕ್ಕೆಯಲಿ ತುಂಬಿಕೊಂಡ
ನೋವುಗಳ ಮರೆಯಲಾದರೂ
ನೀ ಬರಬೇಕು ಒಮ್ಮೆ

ಕನಸುಗಳ ಕಾಣುತ್ತಲೇ ಇದ್ದೇನೆ
ತಾರೆಗಳು ಉದುರುತ್ತಲೇ ಇವೆ
ಯಾಚಿಸಿದ ಕೈಗಳಲಿ
ಬಿದ್ದದ್ದು ಬೆಳಕಾಗಲಾದರೂ
ನೀ ಬರಬೇಕು ಒಮ್ಮೆ

ಇಲ್ಯಾರೋ ಅನ್ನುತ್ತಿದ್ದಾರೆ
ಹಕ್ಕಿ ಹಾರಿದ ಮೇಲೆ
ರೆಂಬೆ ಅದುರುವುದು
ಕ್ಷಣ ಹೊತ್ತು ಮಾತ್ರ ಎಂದು
ಹೊತ್ತ ಭಾವವನ್ನು ಅದುರಿಸಲಾದರೂ
ನೀ ಬರಬೇಕು ಒಮ್ಮೆ


ಸ್ಮಿತಾ ರಾಘವೇಂದ್ರ

Leave a Reply

Back To Top