ಕಾವ್ಯ ಸಂಗಾತಿ
ರೋಹಿಣಿ ಯಾದವಾಡ
ನನ್ನವ್ವ
ನನ್ನವ್ವ ಬಹಳ ಕಲಿತಿಲ್ಲ
ಕಲಿತವರಿಗಿಂತ ಕಡಿಮಿಲ್ಲ
ನಮ್ಮೈವರನು ಎರಡ್ಮೂರು
ಡಿಗ್ರಿ ಓದಿಸಿ ತೃಪ್ತಗೊಂಡವಳು
ಇದ್ದುದರಲ್ಲೆ ಎಲ್ಲವನ್ನೂ
ಸರಿದೂಗಿಸಿಕೊಂಡು ಬಂದವಳು
ನಮ್ಮೆಲ್ಲರ ಏಳ್ಗೆಯಲ್ಲೆ
ತನ್ನೆಲ್ಲ ಕಷ್ಟ ಮರೆತವಳು
ನಮ್ಮಗಳ ಸುಖಕ್ಕಾಗಿ
ತನ್ನತನವ ತ್ಯಾಗಗೈದವಳು
ಅವ್ವ ನಿನ್ನ ನೆನೆದರೆ
ನನ್ನಲ್ಲಿ ಆದ್ರತೆಯ ಭಾವ
ಅವ್ವನೆಂದರೆ ಸಾಕೆನಗೆ
ಪ್ರೀತಿ ನಂಬಿಕೆ ವಿಶ್ವಾಸ
ಧೈರ್ಯ ಸ್ಥೈರ್ಯ ಭಾವದ
ಭರವಸೆಯ ಬೆಳದಿಂಗಳು
ಯಾವ ಪದಕ್ಕೂ ನಿಲುಕದ
ಘನ ವ್ಯಕ್ತಿತ್ವದವಳು
ನನ್ನ ಕಣ ಕಣದ
ಚೇತನ ಶಕ್ತಿ ನೀನು
ಹೊತ್ತು ಹೆತ್ತು ಉಸಿರನಿಟ್ಟು
ಜಗಕೆ ನನ್ನ ಪರಿಚಯಿಸುತ
ನೋವನೆಲ್ಲ ನುಂಗಿ
ಪುನರಜನ್ಮ ಪಡೆದವಳು
ನಿನಗೆರಗಿದ ಕಷ್ಟಗಳು
ನನ್ನತ್ತ ಸುಳಿಯಗೊಡದೆ
ನಿನ್ನತನವ ಧಾರೆಯೆರದು
ನನ್ನತನವ ಚಿಗುರಿಸಿದವಳು
ಸುಖ ಸಂತಸ ಆಸೆಗಳ
ಬಲಿಕೊಟ್ಟು ನಿಂದವಳು
ಮೆಣದಂತೆ ಕರಗಿ ಸುತ್ತ
ಬೆಳಕು ಹರಿಸಿದವಳು
ನೀನೆನ್ನ ಜ್ಯೋತಿ ದೇವತೆ.
Its nice read your blogs on face.. stay tuned…