ಕಾವ್ಯ ಸಂಗಾತಿ
ಹೊನ್ನಪ್ಪ. ನೀ. ಕರೆಕನ್ನಮ್ಮನವರ
ಒಂಟಿ ಯಾನದ ಸರಕು…..
ಗೌಜು ಗದ್ದಲವ ಸೀಳಿದ
ನಿಶ್ಯಬ್ದ ‘ಮೌನ’
ಹಾದಿಯಾಗಿ ಮಲಗಿದೆ
ತನ್ನೆದೆಗೆ ತಾ ಸಾಕ್ಷಿಯಾಗಿ
ತುಳಿದ ಹೆಜ್ಜೆಗಳ ಗೊಡವೆ ಬಿಟ್ಟು
ಕಣ್ಣಿಗಂಟಿದ ಬೆಳಕಷ್ಟೇ
ಗುರಿ ತೋರುವ ಕಂದೀಲು
ಕಾಣದೂರಿನ ಹಂಬಲಕೆ
ಸಂಪ್ರದಾಯದ ಚಾಳಿಸು
ಹಾಕಿಕೊಂಡೇ ಹೆಣ್ಣೆದೆಗೆ
ಇಣುಕುವ ಮೀಸೆಯಂಚಿನ
ತುಟಿಯ ಕುಹಕಗಳು
ದೂರಿ ದೂರಿ ದೂರವೇ ನಿಲ್ಲುತ್ತವೆ
ರಸ್ತೆಯ ಇಕ್ಕೆಲಗಳ ಮರದಂತೆ..
ನಗ್ನ ಸತ್ಯ ಅರಿಯದ ಪ್ರತಿಮೆಗಳಾಗಿ..!
ವಕಾಲತ್ತು ಹೂಡುವವರಾರಿಲ್ಲಿ..?
ಕಟಕಟೆಯಿಂದ ಜಾರಿ ಬಿದ್ದ
ಕೂಡಲೇ ತೀರ್ಪು ಆಡಿಕೊಳ್ಳುವವರ
ಬಾಯಲ್ಲಿ ಆಹುತಿಯಾಗುವುದಂತೆ..!
ಒಂದು ಪ್ರಶ್ನೆಯ ಉತ್ತರಕಿಲ್ಲಿ
ಸಾವಿರ ಪ್ರಶ್ನೆಗಳೇ ಹುಟ್ಟುತ್ತವೆ
ಕಿವುಡರಾಗಿಯೇ ನಡೆಯಬೇಕು
ಅಸಂಬದ್ಧತೆಯನ್ನು ಮೀರದ
ಈ ಲೋಕದೊಳಗೆ,
ಅದಕ್ಕೆ ಅಳೆದಳೆದು
ತೂಗುತಿಹುದೇನೋ
ಕೊನೆ ಇರದ ಈ ಏಕಾಂತ
ಆದರೂ ಒಂಟಿಯೇನಲ್ಲ ಬಿಡಿ
ನಾನಿಲ್ಲಿ ನನ್ನೊಳಗೆ ನಾನಿರುವಾಗ
ಅಷ್ಟೇ ಏಕೆ..?
ಅಲ್ಲಿ ಯಾರದೋ ಕಾಲಿಗೆ ಸಿಕ್ಕು
ನಲುಗಿದ ಗುಲಾಬಿ ಎಸಳು
ನಡುರಸ್ತೆಯಲಿ ತಾಳಿ
ಕಿತ್ತುಕೊಂಡವನಿಂದ
ಕೈಜಾರಿ ಬಿದ್ದ ಕರಿಮಣಿ
ತೆವಲು ತೀರಿದ ಬಳಿಕ
ಇರಿದ ರಕ್ತದ ಕಲೆ
ದಾರಿಯುದ್ಧಕ್ಕೂ
ನನಗೆ ಜಾಹೀರಾತಾಗಿರುವಾಗ
ಕಾಲಿನಿಂದ ನಡೆದವರಿಗಿಂತ
ತಲೆಯಿಂದ ನಡೆದವರೇ
ಹೆಚ್ಚು ಆಪ್ತ ಮೈಲುಗಲ್ಲುಗಳಾಗುತ್ತಾರೆ
ಈ ಸುಡುವ ದಾರಿಯಲ್ಲಿ ನನಗೀಗ..!
ಸೂಪರ್ ಬ್ರದರ್