ಅಮ್ಮನಿಗೊಂದು ನಮಸ್ಕಾರ
ಸುಜಾತ ರವೀಶ್
ತಾಯಿಯೆಂಬ ದೈವಕೆ ವಿವಿಧ ಪ್ರಕಾರಗಳಲ್ಲಿ
ಕಾವ್ಯ ನೈವೇದ್ಯ.
ಕವನ
ಅಮ್ಮನ ಮಮತೆ
ಯಾರೊಬ್ಬರೂ ಬಣ್ಣಿಸಲಾಗದು ಅಮ್ಮನ ಪ್ರೀತಿಯನು
ಅವಳ ಮನದಾಳದ ನೋವುˌತ್ಯಾಗ ತುಂಬಿದ ಶ್ರದ್ಧೆಯನು
ಏನೇ ಬರಲಿ ಚ್ಯುತಿಯಾಗದˌ ಕೊನೆಯಾಗದ ನಿಸ್ವಾರ್ಥ
ಮುಕ್ಕಾಗದ ಆ ಪ್ರೇಮಕೆ ಹುಡುಕಬಹುದೇ ನಾವು ಅರ್ಥ?
ಜಗದ ಯಾವ ಶಕ್ತಿಗಿಲ್ಲ ಅದ ಮಣಿಸುವ ಧೈರ್ಯ
ಸಂಯಮ ಕ್ಷಮೆಯ ಸಾಕಾರ ಮೂರ್ತಿಯ ಔದಾರ್ಯ
ಹೃದಯ ಬಿರಿದು ˌ ಬಂದರೂ ಈ ಜಗ ಕುಸಿಯುವ ಸಮಯ
ಕೈ ಬಿಡದು ಆ ನಂಬಿಕೆಯ ಮೀರಿದ ನಂಬಿಕೆಯ ಅಭಯ.
ಎಲ್ಲಾ ಮುತ್ತು ಮಾಣಿಕ್ಯಗಳ ಸೌಂದರ್ಯ ಏಕೀಭವಿಸಿದಂತೆ
ಎಲ್ಲಾ ವ್ಯಾಖ್ಯಾನ ಉದಾಹರಣೆಗಳ ಮೀರಿ ನಿಂತಿಹುದಂತೆ
ಸೃಷ್ಠಿ ರಹಸ್ಯಗಳೆಲ್ಲಾ ಒಗ್ಗೂಡಿದ ಕಗ್ಗಂಟಿನಂತೆ
ವಿವರಿಸಲಾಗದ ಪ್ರಪಂಚದ ಅದ್ಭುತ ವೈಚಿತ್ರ್ಯವಿದಂತೆˌ
ಅದೇ ಅಮ್ಮನ ಮಮತೆ
ಅದೇ ತಾಯ ಪ್ರೇಮ.
(೨) ಗುಣಿತಾಕ್ಷರ ಕವನ
(ತ ಗುಣಿತಾಕ್ಷರದಲ್ಲಿ)
ತಾಯಿ_ತವರು
ತವರಿಗೆ ಹೋದಳೆಂದರೆ ಮಗಳು
ತಾಯಿಯ ಸಂಭ್ರಮ ಹೇಳತೀರದು
ತಿಳಿಸುವಳು ಬೀದಿಯವರಿಗೆಲ್ಲಾ ಖುಷಿಯಿಂದ
ತೀವ್ರ ವೇಗದಲಿ ಸಿದ್ದ ಮಾಡುವಳು ತಿಂಡಿಗಳ.
ತುತ್ತು ತಿನ್ನಿಸುವಳು ತುಪ್ಪ ಮಿದ್ದು ಅಕ್ಕರೆಯಿಂದ
ತೂಗುವಳು ಮಮತೆಯುಯ್ಯಾಲೆಯಲಿ ಮುದದಿಂದ
ತೃಪ್ತಿಯಾಗುವಷ್ಟು ಹರಟುವಳು ಸಂತಸದಿಂದ.
ತೆರ ತೆರನಾಗಿ ಉಪಚರಿಸುವ ಆ ಪ್ರೀತಿ
ತೇದ ಗಂಧದಂತೆ ತಂಪು ಕಂಪಿನ ಸಂಪ್ರೀತಿ
ತೈಲಾಭ್ಯಂಜನಕೆ ಅಣಿ ಮಾಡಿದರೆ ಇಲ್ಲ ಪ್ರತಿ.
ತೊರೆದು ಹೋಗಿದೆ ನಮ್ಮ ಅಮ್ಮನೆಂಬ ಆ ಜೀವ
ತೋರುವರು ಇನ್ಯಾರು ಪ್ರೇಮದಾ ಆ ಭಾವ
ತೌರೆಂಬುದಿನ್ನು ಕನಸು! ನಿರಂತರವೀ ಅಭಾವ
ತಂಪುನೆರಳಿಂದ ಬಿರುಬಿಸಿಲಿಗೆ ಬಿದ್ದ ಅನುಭವ.
(೩) ಗಝಲ್
ಗಝಲ್
ಅಣುರೂಪದಲಿಂದ ಅಸುವ ತುಂಬಿ ಪೊರೆದ ಚೈತನ್ಯಧಾಯಿ ಅಮ್ಮ
ಭ್ರೂಣವಾದಾಗಿನಿಂದ ಕಸುವ ನೀಡಿ ಸಾಕಿದ ಜೀವನಧಾಯಿ ಅಮ್ಮ
ನವಮಾಸಗಳು ಒಡಲಲ್ಲಿ ಕಂದನ ಭಾರ ಹೊತ್ತು ಸಲಹಿದೆಯಲ್ಲಮ್ಮ
ತನ್ನ ಜೀವವನೆ ಒತ್ತೆಯಿಟ್ಟು ಭುವಿಗೆ ತಂದ ಮಮತಾಮಯಿ ಅಮ್ಮ
ಅಮೃತಸದೃಶ ಎದೆ ಹಾಲೂಡಿಸಿ ಶಕ್ತಿ ತುಂಬಿಸಿದೆಯಲ್ಲಮ್ಮ
ಅನೃತವಾಡದೆ ಬದುಕು ನಡೆಸೆ ಕಲಿಸಿದ ವಾತ್ಸಲ್ಯಮಯಿ ಅಮ್ಮ
ಕೆಟ್ಟ ಮಕ್ಕಳಿರಬಹುದು ಎಂದೂ ಕುಮಾತೆಯರು ಲೋಕದಲ್ಲುಂಟೇನಮ್ಮ?
ಸಿಟ್ಟು ಮಾಡಿಕೊಳ್ಳದೇ ಯಶಸ್ಸಿನ ದಾರಿ ತೋರಿದ ಸಹನಾಮಯಿ ಅಮ್ಮ
ವಿಜಯ ಪಥದಿ ಸಾಧನೆಯ ಕಾಣಲು ದಾರಿದೀಪ ನೀನೇನಮ್ಮ
ಸುಜಿಯ ರಥದ ಸಾರಥಿಯಾಗಿ ಸದಾ ಮುಂದಿರುವ ಆದರ್ಶಮಯಿ ಅಮ್ಮ
(೪) ಸುನೀತ
ಅಮ್ಮನ ಮಡಿಲು
ಪ್ರಪಂಚದಲತಿ ಬೆಚ್ಚನೆಯ ಅಮ್ಮನ ಮಡಿಲು
ಯಾವ ಚಿಂತೆ ಯೋಚನೆಗಳಿರದು ಅಲ್ಲಿರಲು
ನೆತ್ತರಿನ ಕಸುವ ಬಸಿ ಬಸಿದು ಕೊಟ್ಟು
ನೀಡುವಳು ಜನ್ಮ ತನ್ನ ಜೀವ ಒತ್ತೆಯಿಟ್ಟು.
ನವಮಾಸ ತಾಯಿ ಕಂದನನು ಕಾಪಿಟ್ಟು
ತನ್ನುಸಿರಿನ ಅಸುವ ಅದಕೆ ತುಂಬಿಕೊಟ್ಟು
ಬಾಧಿಸದಂತೆ ಏನೊಂದೂ ಭಯ ದಿಗಿಲು
ಕಾವುದಕಿಂತ ಇಲ್ಲ ಇನ್ಯಾವುದೂ ಮಿಗಿಲು
ಈ ಋಣಕೆ ಜಗದಲ್ಲಿ ಸಮವಿಲ್ಲ ಏನೂ
ಅಮ್ಮನಿಗೆ ಸರಿಸಾಟಿ ಬೇರೆ ಉಂಟೇನು?
ಪ್ರಾಣಧಾತೆˌ ಆ ದೇವನ ನೇರ ಪ್ರತಿನಿಧಿ
ಕೋಟಿ ನಮನಗಳು ನಿನಗೆ ವಾತ್ಸಲ್ಯನಿಧಿ
ಕುಚೇಲನೂ ಕುಬೇರನೇ ಅಮ್ಮನ
ಗರ್ಭಗುಡಿಯೊಳಗೆ
ಅದಕಿಂತ ಸುರಕ್ಷಿತ ಬೇರೆಯುಂಟೆ ಈ ಜಗದೊಳಗೆ.
(೫) ಚುಟುಕ
ಮಾತೆ
ಮಮತೆಯ ವಾರಿಧಿ
ಪ್ರೀತಿಯ ಶರಧಿ
ದೇವರ ಪ್ರತಿನಿಧಿ
ನಮ್ಮೆಲ್ಲರ ಬಾಳನಿಧಿ
(೬) ಹನಿಗವನ
ತಾಯಿ_ಮಗುವಿನ ಬಂಧ
ಪ್ರಪಂಚದ ಉಳಿದೆಲ್ಲಾ
ಬಂಧಗಳಿಗಿಂತ
ಪುರಾತನ
ಎಂದೆಂದಿಗೂ
ಚಿರಂತನ
(೭) ಟಂಕಾ
ತಾಯಿ
ಜೀವದಾಯಿನಿ
ವಾತ್ಸಲ್ಯ ರೂಪಿಣಿಯು
ಪ್ರೇಮಸ್ವರೂಪಿ
ಅಕಳಂಕ ಪ್ರೀತಿಯ
ನೀಡಿದವಳು ತಾಯಿ
(೮) ರುಬಾಯಿ
ಮಮತೆಯ ಮೂರುತಿ ನನ್ನಮ್ಮ
ಕರುಣೆಯ ವಾರಿಧಿ ನೀನಮ್ಮ
ನಿನ್ನೊಲುಮೆಯ ಜಲಧಿಯ ಮಡಿಲಲಿ
ಸದಾ ನಲಿಯುವ ಮೀನು ನಾನಮ್ಮˌ
(೯) ತನಗ
ಅಮ್ಮ
ಅಮ್ಮನೆಂದರೆ ಪ್ರೀತಿ
ಸಾಟಿಯುಂಟೆ ಅದಕೆ
ಬೆಳಗುವ ಪ್ರಣತಿ
ಇಲ್ಲ ಬೇರೆ ಹೋಲಿಕೆ
(೧೦)ಹಾಯ್ಕು
ಅಮ್ಮ
ರಕ್ತ ಸುರಿಸಿ
ಬೆವರ ಬಸಿದವಳು
ತ್ಯಾಗಮಯಿ ನೀ
(೧೧)ಅಬಾಭಿ
ತಾಯಿಯ ಋಣ
ಪ್ರಾಣವನೇ ಒತ್ತೆಯಿಡುವಳು
ಸುಖವನ್ನು ತ್ಯಜಿಸಿದವಳು
ಕಂದಗೆ ಯಶ ಕೋರುವಳು
ಸುಜಿ
ನೀನವಳ ಋಣ ತೀರಿಸೆ ಸಾಧ್ಯವೇ?
(೧೨)ಚೋಕಾ
ತಾಯಿ
ಪ್ರಾಣದಾಸೆಯ
ತೊರೆದು ಜನ್ಮ ನೀಡಿ
ತಾನುಣದೆಲೇ
ಕಂದಗೆ ಊಡಿಸುವ
ಕನಸು ಕಂಡು
ಮಕ್ಕಳೇಳಿಗೆಗಾಗಿ
ಜೀವನದುದ್ದ
ಶ್ರಮ ಪಡುವವಳು
ಪ್ರತಿಫಲ ಕೇಳದೆ
(೧೩)
ಫಿಬೋನಾಚಿ
ನೀ
ನಾ
ಕಂಡ
ಮೊದಲ
ಮಮತಾಮಯಿ
ಜೀವ ಚೈತನ್ಯಧಾಯಿನಿ
ಅಸುವಿಗೆ ಕಸುವನು ತುಂಬಿದವಳು
ಪ್ರಾಣವನೇ ಒತ್ತೆಯಿಟ್ಟು ಬದುಕೆಲ್ಲಾ ನಮಗಾಗಿ ಶ್ರಮಿಸುವಳು
(೧೪) ಗಿಣಿ ಕವನ
ಮಾತೆ
ಜೀವದಾತೆ ಭಾವದೊರತೆ
ನೀನೇ ತಾನೆ ಬೆಳಗೋ ಹಣತೆ
(೧೫)ಸಿಂಖೇನ್
ಜನನಿ
ಜನನಿ
ಮಮತಾಮಯಿ ತ್ಯಾಗಜೀವಿ
ಪ್ರೀತಿಸುತ ದಂಡಿಸುತ ತಿದ್ದುತ್ತಾ
ಮಕ್ಕಳ ಬದುಕನ್ನು ತೀಡುತಲಿ ರೂಪಿಸುವ ದೈವ ಸ್ವರೂಪಿ
ಸುಜಾತಾ ರವೀಶ್