ಅಮ್ಮನಿಗೊಂದು ನಮಸ್ಕಾರ

ಅಮ್ಮನಿಗೊಂದು ನಮಸ್ಕಾರ

ಅವ್ವನೆಂದರೆ ಅಷ್ಟೇ ಸಾಕೇ?

ಡಾ.ದಾನಮ್ಮ ಝಳಕಿ

ನವಮಾಸ ಹೊತ್ತು
ತನುಮನ ಪಣವಿಟ್ಟು
ಜೀವಕೊಟ್ಟ ಜನ್ಮದಾತೆ
ಎದೆಹಾಲಿನ ಅಮೃತ ಉಣಿಸಿದಾಕೆ
ಅವ್ವನೆಂದರೆ ಅಷ್ಟೇ ಸಾಕೇ? ನಿನಗೆ ಬೇರೆ ಹೆಸರು ಬೇಕೆ?

ಹೊತ್ತು ಹೊತ್ತಿಗೆ ತುತ್ತಿನಿಟ್ಟು
ಬದುಕಿಗೆ ಭರವಸೆಕೊಟ್ಟು
ಪ್ರೀತಿ ವಾತ್ಸಲ್ಯದ ಬೇರನಿಟ್ಟು
ಚೈತನ್ಯದ ಚಿಲುಮೆ ತೊಟ್ಟು
ಅವ್ವನೆಂದರೆ ಅಷ್ಟೇ ಸಾಕೇ? ನಿನಗೆ ಬೇರೆ ಹೆಸರು ಬೇಕೆ?

ಅಕ್ಕರೆಯ ತೋರಿಸುತಾ
ಸಕ್ಕರೆಯ ತಿನಿಸುತಾ
ಮನದಿ ನೂರು ಕನಸು ಹೊತ್ತು
ಅನುದಿನ ಬೆಳೆಸಿದಾಕೆ
ಅವ್ವನೆಂದರೆ ಅಷ್ಟೇ ಸಾಕೇ? ನಿನಗೆ ಬೇರೆ ಹೆಸರು ಬೇಕೆ?

ಜಗದ ಬದುಕು ಕಲಿಸಿದಾಕೆ
ಕಷ್ಟಮೆಟ್ಟಿ ನಿಲಿಸಿದಾಕೆ
ದಿಟ್ಟ ಹೆಜ್ಜೆ ಇಡಿಸಿದಾಕೆ
ಮಮತೆಯ ಸೆರಗು ತೊಡಿಸಿದಾಕೆ
ಅವ್ವನೆಂದರೆ ಅಷ್ಟೇ ಸಾಕೇ? ನಿನಗೆ ಬೇರೆ ಹೆಸರು ಬೇಕೆ?

ನೀ ಹಾಕಿಕೊಟ್ಟ ದಾರಿಯಲಿ
ಸಾಗುತಿದೆ ಬಾಳುಬಂಡೆಯಲಿ
ಅನುಕ್ಷಣ ನಿನ್ನ ಮಡಿಲಲಿ
ಬದುಕುವಾಸೆ ಕೊನೆಯಲಿ
ಜನ್ಮ ಜನ್ಮಾಂತರದಲಿ
ತಾಯಿ ನಿನ್ನ ಋಣದಲಿ
ಅವ್ವನೆಂದರೆ ಅಷ್ಟೇ ಸಾಕೇ? ನಿನಗೆ ಬೇರೆ ಹೆಸರು ಬೇಕೆ?


ಡಾ.ದಾನಮ್ಮ ಝಳಕಿ

Leave a Reply

Back To Top