ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ
ಇಲ್ಲ…ಇಲ್ಲ…
ಅದೆಷ್ಟೋ ನದಿಗಳ
ಸಿಹಿ ನೀರು ಕುಡಿದರೂ
ಕಡಲೆಂದೂ ಸಿಹಿಯಾಗಲೇ ಇಲ್ಲ
ಕೆಸರಲಿ ಕಲೆತ ಕೊಳಕು
ಗಬ್ಬು ನೀರು ಕುಡಿದರೂ
ಬೆಳೆದ ಫಸಲೆಂದೂ ಕಹಿಯಾಗಲೇ ಇಲ್ಲ
ಬೆಲ್ಲದ ನೀರು ಹನಿಸಿ
ಬಿತ್ತಿದ ಬೇವಿನ ಸಸಿ
ಚಿಗುರಿ ಬೆಳೆದರೂ ಕಹಿಯ ಬಿಡಲೇ ಇಲ್ಲ
ಮಧುರ ಕ್ಷೀರ ಕುಡಿಸಿ
ಪೋಷಿಸಿದ ನಾಗರವು
ವಿಷ ಕಕ್ಕುವುದನ್ನು ಬಿಡಲೇ ಇಲ್ಲ
ಸಜ್ಜನಿಕೆಯ ಸೋಗಿನಲಿ
ಮೋಸದ ಮಂದೆಯಾದ ಸಮಾಜದಿ
ಸಾಮಾನ್ಯನ ಬಾಯಿ-ಬೀಗ ತೆರೆಯಲೇ ಇಲ್ಲ
ಪ್ರಜಾಪ್ರಭುತ್ವದ ಮರೆಯಲಿ
ಪ್ರಭುತ್ವದ ಗದ್ದುಗೆಗಳಿಗೆ
ಪ್ರಜೆಗಳ ನೋವು ಕಾಣಲೇ ಇಲ್ಲ
ಹಮೀದಾ ಬೇಗಂ ದೇಸಾಯಿ
ಚೆನ್ನಾಗಿದೆ congrats