ಜಯಶ್ರೀ ದೇಶಪಾಂಡೆ ಕವಿತೆ-ಅಪಸವ್ಯ

ಕಾವ್ಯ ಸಂಗಾತಿ

ಜಯಶ್ರೀ ದೇಶಪಾಂಡೆ

ಅಪಸವ್ಯ

ಅಲ್ಲೇ ಎಲ್ಲೋ ನನ್ನ-ನಿನ್ನ ನೋವುಗಳು ವಿಭಾಗಿಸಿಕೊಂಡುವು..!
ಎಲ್ಲಿ? ಅದೇ ಪ್ರಶ್ನೆ.
ಅಲ್ಲ, ನೋವುಗಳಿಗೆ ನಮ್ಮಲ್ಲಿ ಪ್ರೈವಸಿಯ ಛಾಪು ಬಿದ್ದದ್ದು ಯಾವಾಗ?
ಅದರ ಮುಖ ಇದಕ್ಕೆ ಇದರದು ಅದಕ್ಕೆ ಕಾಣದಂತೆ,
ದಕ್ಕದಂತೆ ಅಡಗಿಕೊಂಡದ್ದೇಕೆ?

ಹಳ್ಳ ಹನಿಯಾಗಿಯೇ ಹರಿದು ದಿಕ್ಕ ಹುಡುಕುತ್ತಲೇ
ದಿಕ್ಕು ತಪ್ಪಿ ಅಲೆವಾಗ
ಅಲ್ಲೇ ಕಂಡ ನಿನ್ನ ಸೆಲೆ..

ಕೈಬೀಸಿ ಕರೆದು ಎದೆಗೊತ್ತಿಕೊಂಡರೆ
ಹುಶ್ಶಪ್ಪ ಅನಿಸಿದ
ನಿರಾಳದಲ್ಲಿ ಜೊತೆಗೂಡಿ
ಬೆಟ್ಟ ಗುಡ್ಡ ಕಂದರ ಕವಾಟಗಳ ಒಡಲು ತಡಕಾಡುತ್ತ,
ಗರ್ಭದೊಳಗಿದ್ದ ನಮ್ಮ ನೋವುಗಳೆಲ್ಲ ಆ
ತಡಕಾಟದಲ್ಲಿ ಒಂದಾಗಿ
ಇನ್ನೇನು ಸಾಗರವೊಂದೇ ಗಮ್ಯ ಅದು ಅಲ್ಲಿ ಅನತಿ ದೂರದಲ್ಲಿ…

ಎರಡು ಝರಿ ಒಂದಿಟ್ಟು ತುಂಬಿ ತುಳುಕುವ ನದಿ ಕೆಲವೊಮ್ಮೆ ತೇಲಿ,
ಇನ್ನೊಮ್ಮೆ ಉಕ್ಕಿ ಆಚೀಚೆ ದಂಡೆಗಳ ಮೀರಿ ಹರಿದು
ಅವರಿವರು ಬೆರಗಾಗಿ ಮತ್ತೆ ನಕ್ಕು ,
ನಮ್ಮನ್ನೇ ನಿಟ್ಟಿಸಿ ಹಾಡು ಗೀಡು ಬರೆದು ಅವನ್ನು
ನಮಗೇ ಅರ್ಪಿಸಿ ಧನ್ಯರಾದಾಗ
ಆ ಹಿಗ್ಗಲ್ಲಿ ನೋವೆಲ್ಲಿ ಎಂದು ಮರೆತೇಬಿಟ್ಟೆವಲ್ಲ?
ನೋವೆಂದರೇನು ಎಂದು ಕೇಳಿದೆವಲ್ಲ?ಅಥವಾ ನೋವೇ ಮರೆತಿತ್ತೆ ನಮ್ಮನು?

ಇನ್ನೇನು ಸಾಗರನೇ ಬಂದು ಎದುರುಗೊಂಡಾನು,
ನಮ್ಮ ಐಕ್ಯಕ್ಕೆ ಮುನ್ನುಡಿ ಬರೆದಾನು…
ಹೆಜ್ಜೆಸದ್ದಾಗದಂತೆ
ಹಗುರವಾಗಿ ಹರಿದ
ಒಂದಾಗಿದ್ದ ನಮ್ಮೊಳಗಿನ
ನೋವುಗಳಿಗೊಂದು
ಅಸ್ತಿತ್ವವೇ ಇಲ್ಲದಾಗಿ
ಸಾಗರಲೀನದ ತಾರ್ಕಿಕ
ಅಂತ್ಯದ ಗುರಿ ಕಣ್ಚಿತ್ರಕಣ್ಮಾಯವಾಗಿ
ನಮ್ಮ ಓಟಕ್ಕೆ ಕಣ್ಣು ಹಚ್ಚಿದವರಾರು ಹಾ!?

———————-


ಜಯಶ್ರೀ ದೇಶಪಾಂಡೆ

One thought on “ಜಯಶ್ರೀ ದೇಶಪಾಂಡೆ ಕವಿತೆ-ಅಪಸವ್ಯ

Leave a Reply

Back To Top