ವಿಶೇಷ ಲೇಖನ
ಜ್ಞಾನ ದಾಸೋಹಿ ‘ ಎಂಬ ಪ್ರೊ ಜಯವಂತ ಕಾಡದೇವರ
ಡಾ.ಪ್ರಿಯಂವದಾ ಮ ಹುಲಗಬಾಳಿ
” ನಿಮ್ಮ ಮಾತಿನಲ್ಲಿ
ಜ್ಞಾನದಮೃತವಿದೆ
ಚೈತನ್ಯದ
ಜೀವ ಸೆಲೆ ಇದೆ…..
ಶ್ರೀ ಸಿದ್ದೇಶ್ವರ
ನಿಮ್ಮ ಸಾನಿಧ್ಯದಲ್ಲಿ
ಸಂತೋಷವಿದೆ, ಸ್ವರ್ಗವಿದೆ.”
ಜ್ಞಾನ ದಾಸೋಹಿ ‘ ಎಂಬ ಪ್ರೊ ಜಯವಂತ ಕಾಡದೇವರ ಅವರ ಕವನದ ಸಾಲುಗಳು ಮಕ್ಕಳಿಗೆ ಪೂಜ್ಯ ಸಿದ್ದೇಶ್ವರ ಮಹಾಸ್ವಾಮಿಗಳ ಮೇರು ವ್ಯಕ್ತಿತ್ವವನ್ನು ಪರಿಚಯಿಸುತ್ತವೆ.
ದೊಡ್ಡವರು ಓದಬೇಕು, ವಿಮರ್ಶೆ ಮಾಡಬೇಕು,ಮೆಚ್ಚಿಕೊಳ್ಳಬೇಕು, ಪ್ರಶಸ್ತಿ ನೀಡಬೇಕು ಎನ್ನುವ ಈ ಕಾಲದಲ್ಲಿ, ಮಕ್ಕಳು ಓದಬೇಕು, ಮಕ್ಕಳು ಮೆಚ್ಚಬೇಕು,ಮಕ್ಕಳು ಪ್ರಶ್ನೆ ಕೇಳಬೇಕು ಎನ್ನುವವರು ವಿರಳ. ಮಕ್ಕಳು ಓದಿ ಹರ್ಷಪಟ್ಟರೆ ಅದೇ ಪ್ರಶಸ್ತಿ ಎನ್ನುವವರು ಬನಹಟ್ಟಿಯ ಮಕ್ಕಳ ಸಾಹಿತಿ, ಮಕ್ಕಳ ಸಂಗಮದ ರೂವಾರಿ ಪ್ರೊ ಜಯವಂತ ಕಾಡದೇವರ ಗುರುಗಳು.
ಮಕ್ಕಳ ಮನಸ್ಸನ್ನು ಅರಿತು, ಅವರ ಭಾವನೆಗಳಿಗೆ ಬೆಲೆ ನೀಡಿ , ಅವರನ್ನು ಸಂತುಷ್ಟಗೊಳಿಸುವ ಸಾಹಿತ್ಯ ರಚನೆ ಮಾಡಿದ ಮಕ್ಕಳ ಸಾಹಿತಿ ಇವರು ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ತಮ್ಮ ಸಾಹಿತ್ಯದ ಮೂಲಕ ಜಾಗತಿಕ ಸಂಗತಿಗಳನ್ನು ನಾಯಕರನ್ನು ಕ್ರೀಡಾಪಟುಗಳನ್ನು ಪರಿಸರ ಪ್ರಿಯರನ್ನು ಮಹಿಳಾ ಸಾಧಕೀಯರನ್ನು ಮಕ್ಕಳಿಗೆ ಪರಿಚಯಿಸಿದವರು ಅನೇಕ ಪ್ರಚಲಿತ ವಿದ್ಯಮಾನಗಳನ್ನು ಮಕ್ಕಳಿಗೆ ತಮ್ಮ ಸಾಹಿತ್ಯದ ಮೂಲಕ ತಲುಪಿಸಿದವರು.
ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ,ಎಂ ಎಸ್ ಧೋನಿ, ಸಚಿನ್ ತೆಂಡೂಲ್ಕರ್, ಸಾಲುಮರದ ತಿಮ್ಮಕ್ಕ, ಸುಧಾ ಮೂರ್ತಿ, ಪ್ರಧಾನಿ ಮೋದಿ, ಕವಿ ಚನ್ನವೀರ ಕಣವಿ, ಡಾ|| ಎಸ್ ಜೆ ನಾಗಲೋಟಿಮಠ, ಈ ಭಾಗದ ಸ್ವತಂತ್ರ ಹೋರಾಟಗಾರರಾದ ಕಲಕಂಬ ಮಾಸ್ತರರು ನಿಷ್ಠಾವಂತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಹೀಗೆ ನಮ್ಮ ನೆಲದ ಸಾಧಕರಿಂದ ಪ್ರಪಂಚದ ಸಾಧಕರವರೆಗೆ ಬಹುತೇಕರನ್ನು ತಮ್ಮ ಬರವಣಿಗೆ ತೆಕ್ಕೆಯೊಳಗೆ ಅಪ್ಪಿಕೊಂಡು ಮಕ್ಕಳಿಗೆ ನೀಡಿದವರು.
“ಕಲ್ಲನು ಎಸೆದರು ಹಣ್ಣನೇ ಕೊಡುವ ಬಿಸಿಲಲಿ ನಿಂತರು ನೆರಳನೇ ನೀಡುವ ಭೂಮಿಯ ತಾಯಿಗೆ ಹಸಿರನು ಉಡಿಸುವ ಹಕ್ಕಿಪಕ್ಕಿಗಳಿಗಾಶ್ರಯವಾಗಿಹ
ನಮ್ಮನ್ನೇತಕೆ ಕಡಿಯುವಿರಿ?” ಮರಗಳ ಮನವಿ ಎಂಬ ಕವಿತೆಯ ಈ ಸಾಲುಗಳನ್ನು ನೋಡಿದಾಗ ಎಂಥಹ ಮಗುವಿನ ಮನಸ್ಸು ಕರಗುತ್ತದೆ. ಮರಗಳ ಬಗ್ಗೆ ಪ್ರೀತಿ ಹುಟ್ಟುತ್ತದೆ.
ಮಕ್ಕಳಿಗಾಗಿ ಬರೆಯುವವರು ಮಕ್ಕಳೇ ಆಗಿರಬೇಕೆಂದೇನಿಲ್ಲ. ಹಿರಿಯರು ಮಕ್ಕಳ ಮನದ ಆಳಕ್ಕೆ ಇಳಿದು ಬರೆದರೆ ಅದು ಸತ್ವ ಪೂರ್ಣ ಸಾಹಿತ್ಯವಾಗಬಲ್ಲದು ಎನ್ನುವುದಕ್ಕೆ ಜಯವಂತ ಕಾಡದೇವ ಗುರುಗಳ ಮಕ್ಕಳ ಸಾಹಿತ್ಯವೇ ಸಾಕ್ಷಿ.
” ಲಿಂಬು ಶರಬತ್ ಎಳನೀರು
ಮಜ್ಜಿಗೆ ಕಷಾಯ ಕಬ್ಬಿನ್ಹಾಲು
ದಿನ ದಿನ ಕುಡಿದರೂ
ನಮಗಿಲ್ಲ ಯಾವುದೇ ಅಪಾಯ ದೇಶದ ಕೃಷಿಕರು ಪಡೆದರು ನೆಮ್ಮದಿ ಬದುಕಿಗೆ ಆದಾಯ” ವಿದೇಶಿ-ದೇಶಿ ಎಂಬ ಕವನ ಮಕ್ಕಳಿಗೆ ದೇಶಿ ಪಾನೀಯಗಳ, ಆಹಾರ ಪದ್ದತಿಯ ಪರಿಚಯ ಮಾಡಿಕೊಡುವುದಷ್ಟೇ ಅಲ್ಲ, ಶರೀರಕ್ಕೆ ಯಾವುದರಿಂದ ಅಪಾಯ ಇದೆ ಎಂದು ತಿಳಿಸಿ ಆರೋಗ್ಯಕರ ಜೀವನ ಶೈಲಿಯ ಪಾಠ ಕಲಿಸುತ್ತದೆ. ಅಲ್ಲದೆ ವಿದೇಶಿ ವಸ್ತುಗಳ ಬಳಕೆಯಿಂದ ದೇಶದ ರೈತರಿಗೆ ನೀವು ಹಾನಿಮಾಡುವಿರಿ, ದೇಶದ ಬೆನ್ನೆಲುಬು ಎನಿಸಿದ ರೈತನ ಉತ್ಪನ್ನಗಳನ್ನು ಬೆಂಬಲಿಸಿ ಎಂಬ ಸಂದೇಶವನ್ನು ನೀಡುತ್ತದೆ.
ಕಾಡದೇವರ್ ಗುರುಗಳ ಸಾಹಿತ್ಯ ಓದಿದ ಮಕ್ಕಳು ಕೂಡ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ ಮಕ್ಕಳಿಂದ ಬಂದ ಸಾಹಿತ್ಯವೇ ನಿಜವಾದ ಮಕ್ಕಳ ಸಾಹಿತ್ಯ ಎನ್ನುವ ಅನೇಕರ ಮಾತನ್ನು ಸಂಪೂರ್ಣವೊಬ್ಬಳು ಸಾಧ್ಯವಿಲ್ಲ ಮಕ್ಕಳಿಗಾಗಿ ಹಿರಿಯರು ಬರೆದ ಸಾಹಿತ್ಯ ಓದಿದರೆ ಮಕ್ಕಳಿಗೂ ಸಾಹಿತ್ಯದಲ್ಲಿ ಆಸಕ್ತಿ ಬಂದು ಅವರು ಕೂಡ ಸಾಹಿತ್ಯದ ಕಡೆಗೆ ಒಲವು ತೋರುತ್ತಾರೆ. ಬರವಣಿಗೆಯಲ್ಲಿ ತೊಡಗುತ್ತಾರೆ. ಹೀಗೆ ತಮ್ಮ ಶಿಷ್ಯ ವರ್ಗದಲ್ಲಿ ತಮ್ಮ ಬಂಧುಗಳಲ್ಲಿ ತಮ್ಮ ಓಣಿಯ ಮಕ್ಕಳಲ್ಲಿ ಸಾಹಿತ್ಯ ಶಕ್ತಿಯನ್ನು ಬಿತ್ತಿ ಅವರನ್ನು ಓದು ಬರವಣಿಗೆಯಲ್ಲಿ ತೊಡಗಿಸಿದ್ದಾರೆ.
” ಧನ್ ಧನಾ ಧನ್
ಧೋನಿ ಬಂದ
ಇಂಡಿಯಾ ಟೀಮ್ ಗೆ
ಹುಮ್ಮಸು ತಂದ
ಧೈರ್ಯದ ಮಂತ್ರ
ಹೇಳಿಕೊಟ್ಟ
ಗೆಲುವಿನ ತಂತ್ರ
ತೋರಿ ಬಿಟ್ಟ” ಧೋನಿಧಮಾಕಾ ಎಂಬ ಕವನದಲ್ಲಿ ಕ್ರೀಡಾ ಪ್ರಿಯರನ್ನು ಸೆಳೆಯುವುದರೊಂದಿಗೆ ಆಟಗಾರರ ಸಾಧನೆಯನ್ನು ಪರಿಚಯಿಸಿದ್ದಾರೆ. ಸ್ವತಃ ಕ್ರೀಡಾಪಟುಗಳಾದ, ಪತ್ರಿಕೆಗಳಲ್ಲಿ ಕ್ರೀಡಾ ಅಂಕಣಕಾರರಾದ ಇವರು ಬಳಸುವ ಪ್ರಾಸ ಬದ್ಧ ಪದಗಳು ಎಂತಹ ಮಕ್ಕಳು ಸಹ ಕಿವಿ ನಿಮಿರಿಸಿ ಕೇಳುವಂತೆ ಮಾಡುತ್ತವೆ.
“ಮಕ್ಕಳ ಸಂಗಮ” ಎಂಬ ಸಂಸ್ಥೆಯ ಮೂಲಕ ಮಕ್ಕಳಿಗಾಗಿ ಕಥೆ ಕವನಗಳನ್ನು ಓದುವ ರಚಿಸುವ ಕಾರ್ಯಕ್ಕೆ ಹುರಿದುಂಬಿಸಿದವರು. ನಾಡಿನ ಪ್ರಮುಖ ಸಾಹಿತಿಗಳನ್ನು ಕರೆಸಿ, ಮಕ್ಕಳನ್ನೇ ಅಧ್ಯಕ್ಷರನ್ನಾಗಿ ಮಾಡಿ ಮಕ್ಕಳ ಸಾಹಿತ್ಯ ಲೋಕವನ್ನು ವಿನೂತನವಾಗಿ ಈ ಭಾಗದಲ್ಲಿ ಹಾಕಿ ಬೆಳೆಸಿದವರಿವರು. ಆ ವೇದಿಕೆಯ ಮೇಲೆ ಮಕ್ಕಳದೆ ದರ್ಬಾರ್ ಸ್ವಾಗತದಿಂದ ಹಿಡಿದು ವಂದನಾರ್ಪಣೆಯವರೆಗೆ ಸಂಪೂರ್ಣ ಕಾರ್ಯಕ್ರಮ ನಿರ್ವಹಿಸಿ ನಡೆಸಿಕೊಡುವವರು ಮಕ್ಕಳೇ ಆಗಿರುತ್ತಾರೆ ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಭಾಷಣ ಸಂಗೀತ ಮುಂತಾದ ಕ್ಷೇತ್ರಗಳಲ್ಲಿ ಅವರನ್ನು ಬೆಳೆಸುತ್ತಾರೆ. ಅವಿಭಜಿತ ವಿಜಯಪುರ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನವನ್ನ ಏರ್ಪಡಿಸಿ ಮಕ್ಕಳಿಗೆ ಸರ್ವಾಧ್ಯಕ್ಷ ಸ್ಥಾನ ನೀಡಿ ಅನೇಕ ಘೋಷ್ಠಿಗಳನ್ನ ನಡೆಸಿ ನನ್ನಂತಹ ಅನೇಕ ವಿದ್ಯಾರ್ಥಿನಿಯರಲ್ಲಿ ಬಾಲ್ಯದಿಂದಲೇ ಸಾಹಿತ್ಯದಲ್ಲಿ ಆಸಕ್ತಿ ಬರುವಂತೆ ಮಾಡಿದವರು. ಕಾಡದೇವರ ಗುರುಗಳಿಂದ ವಿದ್ಯೆ ಅಷ್ಟನ್ನೇ ಕಲಿಯಲಿಲ್ಲ ಜೋತೆಗೆ ಸಾಹಿತ್ಯದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರು ಇವರ ಅನೇಕ ಶಿಷ್ಯರು.
ಡಾ|| ಸ ಜ ನಾಗಲೋಟಿಮಠ ನಾಡು ಕಂಡ ಅಪ್ರತಿಮ ವೈದ್ಯ ಸಾಹಿತಿ ,ಸಂಶೋಧಕ. ಅವರ ಹೆಸರಿನಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಕೊಡಮಾಡುತ್ತಾ ಬಂದಿದ್ದಾರೆ. ಸ ಜ ನಾಗಲೋಟಿಮಠ ರ ಹೆಸರಿನಲ್ಲಿ ರಾಜ್ಯಸರ್ಕಾರ ಪ್ರತಿಷ್ಠಾನ ಮಾಡಬೇಕು ಎಂಬ ಹೆಬ್ಬಯಕೆ ಇವರದಾಗಿದೆ.
” ದೇಶದೆಳ್ಗೆಗೆ ದಿನದ
16ಗಂಟೆ ಶ್ರಮಿಸುತ್ತಿರುವ ಶ್ರದ್ಧಾವಂತ
ಬೆಂಗಾವಲಿಲ್ಲದೆ ಪಾಕ್ ಅಧ್ಯಕ್ಷನ ಮನೆಗೆ
ಹೋಗಿ ಚಾಯ್ ಸೇವಿಸಿಬಂದ ಧೈರ್ಯವಂತ”
ಇಂದಿನ ರಾಷ್ಟ್ರ ನಾಯಕರು ಹೇಗಿರಬೇಕು ಹೇಗಿದ್ದಾರೆ ಎಂಬುದಕ್ಕೆ ಮೋದಿಜಿ ಅವರ ಕುರಿತು ಬರೆದ ಈ ಕವನ ಮಕ್ಕಳ ಮನಸ್ಸನ್ನು ಮುಟ್ಟಿದೆ.
ಗುರುವನ್ ಗುರುಗಳನ್ನು ಗೌರವಿಸುವುದು ನಮ್ಮ ಸಂಸ್ಕೃತಿ. ಆದರೆ ಶಿಷ್ಯರ ಕಿರಿಯ ಸಾಧನೆಯಲ್ಲೂ ಹಿರಿದಾಗಿ ಸಂತಸಪಟ್ಟು ಅವರನ್ನ ಅಭಿನಂದಿಸುವುದು ಸುಸಂಸ್ಕೃತಿ ಸುಸಂಸ್ಕಾರ .ಅಂತಹ ಸುಸಂಸ್ಕಾರವಂತರು ಕಾಡದೇವರ್ ಗುರುಗಳು ಡಾಕ್ಟರ್ ಸೃಜನ್ ನಾಗಲೋಟಿಮಠ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದವರಲ್ಲಿ ಅನೇಕರು ಇವರ ಶಿಷ್ಯರೇ ಎನ್ನುವುದು ಅಭಿಮಾನದ ಸಂಗತಿ ಶಿಷ್ಯರ ಮನೆವರೆಗೂ ಹೋಗಿ ಅವರ ಸಾಧನೆಗಳನ್ನ ಗುರುತಿಸಿ ಅಭಿನಂದಿಸಿ ಬರುತ್ತಾರೆ ಜೊತೆಗೆ ತಮ್ಮ ಅನುಭವಗಳನ್ನು ಬರಹದ ರೂಪದಲ್ಲಿ ಹಂಚಿಕೊಳ್ಳುತ್ತಾರೆ ತಮ್ಮ 78 ಇಳಿವಯಸ್ಸಿನಲ್ಲೂ ಕಾಲ್ನಡಿಗೆಯ ಮೂಲಕ ಬನಹಟ್ಟಿಯ ತಮ್ಮ ಶಿಷ್ಯಬಳಗವನ್ನು ಭೇಟಿಯಾಗಿ ಅವರ ಯೋಗಕ್ಷೇಮವನ್ನು ವಿಚಾರಿಸಿ ಅವರ ಕಾರ್ಯಗಳಿಗೆ ಬೆನ್ನುಚಪ್ಪರಿಸಿ ಹುರಿದುಂಬಿಸುತ್ತಾರೆ.ಮಕ್ಕಳಿಗೆ ಸಾಹಿತ್ಯ ತಲುಪಲಿ ಎಂದು ಪ್ರಾಥಮಿಕ ಪ್ರೌಢಶಾಲಾ ಮಕ್ಕಳೊಂದಿಗೆ ಸಂವಾದ ನಡೆಸುತ್ತಾರೆ ಬಾಗಲಕೋಟೆ ವಿಜಯಪುರ ಬೆಳಗಾವಿ ಮುಂತಾದ ಜಿಲ್ಲೆಗಳ ಅನೇಕ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಸಾರಸ್ವತ ಲೋಕವನ್ನು ಪರಿಚಯಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.
” ಶೋಷಿತ ಮಹಿಳೆಯರ
ಉದ್ಧಾರಕ್ಕಾಗಿ ಶ್ರಮಿಸಿದಾಕೆ
ಮೂರು ಸಾವಿರ ಹೊಲಿಗೆಯ
ಕೌದಿಯ ಕಾಣಿಕೆ ಪಡೆದಾಕೆ
ದುಬಾರಿ ವಸ್ತ್ರ ಒಡವೆಗಳ
ಮೋಹ ಜಯಿಸಿದ ನೀರೆ
ಸರಳ ಸಹಜ ಬದುಕಿನ ಧೀರೆ”ಹೆಮ್ಮೆಯ ಕನ್ನಡತಿ ಎಂಬ ಕವನದಲ್ಲಿ ಭಾರತೀಯ ಮಹಿಳಾ ಪರಂಪರೆಯಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ಗುರುತಿಸಿಕೊಂಡಿರುವ ಕನ್ನಡದ ಹೆಮ್ಮೆಯ ಮಗಳು ಸುಧಾ ಮೂರ್ತಿಯವರ ಅಘಾದ ವ್ಯಕ್ತಿತ್ವವನ್ನು ಯಶೋಗಾಥೆಯನ್ನು ಯುವ ಜನಾಂಗಕ್ಕೆ ಪರಿಚಯಿಸಿದ್ದಾರೆ.
ಕಳಸಾಹಿತ್ಯದಲ್ಲಿ ಮಕ್ಕಳಿಗೆ ಅರ್ಥವಾಗುವ ಭಾಷೆ ಅವರ ಕಲ್ಪನಾ ಲಹರಿ ಅವರಲ್ಲಿರುವ ಮುಗ್ಧತೆ ಇವೆಲ್ಲವೂ ಒಡ ಮೂಡಬೇಕು ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಸಾಹಿತ್ಯ ರಚಿಸಿದವರು ಇವರ ಅನೇಕ ಕವನಗಳು ಜೀವನ ಚರಿತ್ರೆ ಪಠ್ಯ ಪುಸ್ತಕಗಳಲ್ಲಿ ಮಕ್ಕಳಿಗೆ ಓದಲು ಸಿಗುತ್ತವೆ. ಕೇವಲ ಕರ್ನಾಟಕ ಅಷ್ಟೇ ಅಲ್ಲ ಮಹಾರಾಷ್ಟ್ರದ ಪಠ್ಯದಲ್ಲೂ ಇವರ ಲೇಖನಗಳಿವೆ. ಕನ್ನಡ ಇಂಗ್ಲಿಷ್ ಎರಡು ಭಾಷೆಗಳಲ್ಲಿ ಮಕ್ಕಳಿಗಾಗಿ ಸಾಹಿತ್ಯ ರಚನೆ ಮಾಡಿದ ಶ್ರೇಷ್ಠ ಮಕ್ಕಳ ಸಾಹಿತಿ ಇವರು.
ಇಂಗ್ಲಿಷ್ ಎಂದರೆ ಕಬ್ಬಿಣದ ಕಡಲೆ ಎನ್ನುವ ಕಾಲದಲ್ಲಿ ಅದನ್ನು ಮೃದು ಪೇಡಾದಂತೆ ಸವಿಯಬಹುದು ಎಂದು ತೋರಿಸಿಕೊಟ್ಟವರು ನನ್ನ ಗುರು ಜಯವಂತ ಕಾಡದೇವರ ಅವರು.
6/11/22 ರಂದು ನಡೆದ ರಬಕವಿ-ಬನಹಟ್ಟಿ ಎರಡನೇ ತಾಲೂಕಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದದ್ದು ಅವರ ಸಾಹಿತ್ಯ ಸೇವೆಗೆ ತಡವಾಗಿ ಸಂದ ಗೌರವ. ಈ ಮೊದಲೇ ಅಂದರೆ ಅವಿಭಜಿತ ಜಮಖಂಡಿ ತಾಲೂಕಿನ ಸರ್ವಾಧ್ಕಕ್ಷ ಸ್ಥಾನ ಅವರಿಗೆ ಬರಬೇಕಿತ್ತು ಇರಲಿ ತಡವಾಗಿ ಆದರೂ ಬಂದದ್ದು ನಮಗೆ ಸಂತಸ ತಂದಿದೆ.
ಸಾಮಾನ್ಯವಾಗಿ ಸಮ್ಮೇಳನದ ಸರ್ವಾಧ್ಯಕ್ಷರು ಸಮ್ಮೇಳನದ ದಿನ ವೇದಿಕೆಗೆ ಬಂದರೆ ಮುಂದಿನ ಸಮ್ಮೇಳನದ ದಿನ ಕಾಣಿಸಿಕೊಳ್ಳುತ್ತಾರೆ. ಆದರೆ ಇವರು ಹೊಸದೊಂದು ಯೋಜನೆ ರೂಪಿಸಿಕೊಂಡಿದ್ದಾರೆ.ತಾಲೂಕಿನ ಪ್ರತಿ ಹಳ್ಳಿಗಳ ಪ್ರೌಢಶಾಲೆಗಳಿಗೆ ಹೋಗಿ ಆ ಮಕ್ಕಳಿಗೆ ಸಾಹಿತ್ಯದ ರಸದೌತಣ ಉಣಬಡಿಸಿ ಬರುವ ವಿಶಿಷ್ಟ, ವಿನೂತನ ಕಾರ್ಯಕ್ಕೆ ಮುನ್ನುಡಿ ಬರೆದಿದ್ದಾರೆ. ತಾಲೂಕಿನ ಖ್ಯಾತ ಸಾಹಿತಿಗಳಾದ ದೇವನ ಮನೆ’ಯ ಕವಿ ಬ ಗಿ ಯಲ್ಲಟ್ಟಿ, ಜಗದಳವನ್ನು ಹೊತ್ತ ಕವಿ ಈಶ್ವರ ಸಣಕಲ್ಲ,ಖ್ಯಾತ ಕಾದಂಬರಿಕಾರ ದು.ನಿಂ.ಬೆಳಗಲಿ,ಹರಿಓಂ ಒಲಂಬಿಕ ಪ್ರಶಸ್ತಿ ಪಡೆದ ಡಾ||ಸ ಜ ನಾಗಲೋಟಿಮಠ ಮುಂತಾದ ಹಿರಿಯ ಸಾಹಿತಿಗಳ ಕುರಿತು ಮಕ್ಕಳ ಮುಂದೆ ಮಾತನಾಡುವುದು ಅವರೊಂದಿಗೆ ಸಂವಾದ ನಡೆಸುವುದು ಅವರ ಉದ್ದೇಶ. ತಮ್ಮ ಜೀವನದುದ್ದಕ್ಕೂ ಮಕ್ಕಳ ಏಳಿಗೆಗಾಗಿ ,ಮಕ್ಕಳ ಸಾಹಿತ್ಯಕ್ಕಾಗಿ ,ಮಕ್ಕಳಿಗೆ ಸಾಹಿತ್ಯ ತಲುಪಲಿ ,ಮಕ್ಕಳಿಂದ ಸಾಹಿತ್ಯ ರಚನೆಯಾಗಲಿ ಎಂಬ ಉದ್ದೇಶಕ್ಕಾಗಿ ದುಡಿಯುತ್ತಿರುವ ಇವರು ಇಂದಿನ ಮಕ್ಕಳ ಸಾಹಿತಿಗಳ ಸ್ಥಾನದಲ್ಲಿ ಅಗ್ರಗಣ್ಯರು ಎಂದರೆ ತಪ್ಪಾಗಲಿಕ್ಕಿಲ್ಲ. ಮುಂದಿನ ದಿನಮಾನಗಳಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಗಳ ಸರ್ವಾಧ್ಯಕ್ಷ ಸ್ಥಾನ ಇವರಿಗೆ ದೊರೆಯುವಂತಾಗಲಿ ಎಂದು ಆಶಿಸುವೆ.
ಡಾ.ಪ್ರಿಯಂವದಾ ಮ ಹುಲಗಬಾಳಿ
ಕವಿ ಪರಿಚಯ
ಡಾ. ಪ್ರಿಯಂವದಾ ಮ ಹುಲಗಬಾಳಿ. ಅಣೆಪ್ಪನವರ. ಅಥಣಿ.ಕವನ ಸಂಕಲನ, ಕಥಾಸಂಕಲನಗಳಲ್ಲಿ ಬಿಡಿ ಕವನ,ಕಥೆ ಪ್ರಕಟ. ಸ್ಮರಣ ಸಂಚಿಕೆ ಹಾಗೂ ಅಭಿನಂದನಾ ಗ್ರಂಥಗಳಿಗೆ ಸಂಪಾದಕರಾಗಿ ಕಾರ್ಯ. ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬರಹ ಪ್ರಕಟವಾಗಿವೆ