ಕಾವ್ಯಸಂಗಾತಿ
ವಿಶಾಲಾ ಆರಾಧ್ಯ
ಅವನು

ನನ್ನೊಡನೆ ಅಡಿಯಿಟ್ಟು
ಮನದೊಳಗೆ ಗಿಡ ನೆಟ್ಟು
ಹೃದಯದಂಗಳದಿ ಚುಕ್ಕಿಯಿಟ್ಟು
ಎಂಥ ವರ್ಷಧಾರೆಗೂ ಕರಗದ
ಚಿತ್ತಾರ ಬಿಡಿಸಿದ ಕಾವ್ಯ ಕುಂಚವ
ಹಿಡಿದ ಮಾಯಗಾರ ಅವನು//
ಬಾಳ ಹಾದಿಯೊಳು ಕೈಯಿಡಿದು
ಮನದ ಬಾನಂಗಳದೊಳಗೆ
ಸಪ್ತವರ್ಣಗಳ ಸುರಿದೆರೆದು
ಎಂಥ ಮೋಡಿಗೂ ಸರಿಯದ
ಕಾಮನಬಿಲ್ಲಿನ ರೇಖೆಯ ಗೀಚಿ
ಬಂದ ಮಾಯಗಾರ ಅವನು //
ಎದೆಯೂರಿನ ಕದ ತೆರೆದು
ಒಳಕರೆದು ಬರಸೆಳೆದು
ಸ್ವಪ್ನ ಲೋಕದಿ ಕಲೆತು
ಮಧುರ ಪದಗಳ ಎಣೆದು
ರಸ ಕಾವ್ಯದ ಲಲಿತ ಲತೆಗೆ
ಮುನ್ನುಡಿದ ಮಾಯಗಾರ ಅವನು//

ಕಣ್ಣೂರಿನ ಒಳಗಿಳಿದು ನಗೆಯಲೇ
ಹೊರಳಿ ಕಚಗುಳಿಯ ಕೊಟ್ಟು
ಹುಬ್ಬೂರಿಗೆ ಅಲೆಯ ಏರಿಳಿವಗೈದು
ಕನಸಿನ ಕೊಳದಿ ಭಾವಗಳ
ಬಲೆಬೀಸಿ ಕನಸಿನ ಮತ್ಸಗಳ್ಹಿಡಿದ
ಮತ್ಸ್ಯ ಮಾಯಗಾರ ಅವನು//
ವಿಶಾಲಾ ಆರಾಧ್ಯ
