ಇಂದಿರಾ ಮೋಟೆಬೆನ್ನೂರ ಕವಿತೆ-ಇದು ಯಾವ ನ್ಯಾಯ?

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ.

ಇದು ಯಾವ ನ್ಯಾಯ?

ನಿನಗೆ ನಗೆ ನೀಡಲಾಗದಿದ್ದರೂ
ನೋವ ಮಾತ್ರ ನೀಡಲಾರೆ ಎಂದೆಯಲ್ಲ….
ಈಗೇನು ಮಾಡುತಿರುವೆ ಗೊತ್ತೇ ನಿನಗೆ
ನಗೆ ಕಸಿದು ಬಗೆಬಗೆ ನೋವೇ ನೀಡುತ್ತಿರುವೆ. …
ಏಕೋ ನಾನರಿಯೆ..?

ಮೊದಲಿದ್ದ ನಗೆಯೋ ಅದನ್ನೂ ನಿನ್ನ ಜೊತೆಗೇ
ಕೊಂಡೊಯ್ದು ದೂರವಾಗುತ್ತಲೇ ದೂರುತಿರುವೆ …
ನಿಜ ಹೇಳಲೇ…ನನಗೇನೂ ಅರ್ಥವಾಗುತ್ತಲೇ ಇಲ್ಲ
ಮಾಡಲಾಗದ ತಪ್ಪಿಗೆ ಶಿಕ್ಷೆ ನೀಡುತಿರುವೆ…
ಏಕೋ ನಾನರಿಯೆ…?

ಪ್ರತಿಸಲವೂ ಯಾರೋ ಮಾಡಿದ ತಪ್ಪಿಗೆ ಬಲಿಪಶು ನಾನೇ
ಮೌನವಾಗಿಯೇ ಸ್ವೀಕರಿಸಿ ಮುನ್ನಡೆದೆ…
ಹೃದಯದ ಮಾತು ಆಲಿಸಲೇ ಇಲ್ಲ…ನೀನು
ಬರೀ ಬುದ್ಧಿಯ ಕರೆಗೆ ಓಗೊಟ್ಟೆಯಲ್ಲ…
ಏಕೋ ನಾನರಿಯೆ?

ಎಲ್ಲವನು ವಾಸ್ತವದ ನೆಲೆಗಟ್ಟಿನಲ್ಲಿ
ಹುಡುಕುವ ನಿನ್ನ ಜಾಣ್ಮೆ…
ಅರ್ಥವಾಗದ ನಿನ್ನ ಪದಗಳ ಜಾಲದಲಿ
ಬಂಧಿಯಾಗಿ ನರಳಿದೆ ಹೃದಯ..
ಏಕೋ ನಾನರಿಯೆ..?

ಆತ್ಮೀಯರಾಗುವ ಮುನ್ನವೇ ಅಪರಿಚಿತರಾಗಿಸಬೇಡ
ಮುಚ್ಚಿದ ಬಾಗಿಲನ್ನು ತೆರೆದೊಮ್ಮೆ ಹೊರಗಿಣುಕು..ಕಾಯುತಿರುವೆ…ಅಲ್ಲಿಯೇ..
ಕಾಯುವೆ…ಕೊನೆವರೆಗೆ… ಉಸಿರಿರುವತನಕ..
ಏಕೋ ನಾನರಿಯೆ..?

ಸುಂದರ ಭಾವಗಳ ಕುಲುಮೆಗೆ ಹಾಕಿದರೆ ಹೇಗೆ?
ಕವಲೊಡೆದ ದಾರಿಯ ಪಯಣಿಗರಾಗುವುದು ಬೇಡ… ಹೃದಯ ಕಲ್ಲಾಗಲು ಕಾರಣ ಅನೇಕರು..ನಿಜ.
ಆದರೆ ಕಟುಕನಾಗಬೇಡ..
ನನ್ನ ಪುಟ್ಟ ಹೃದಯ ಒಡೆದರೆ ಸದ್ದಾಗುವುದೇ ಇಲ್ಲ…
ಕೊನೆಗೆ ಬರೀ ಚೂರುಗಳ ಹೆಕ್ಕಬೇಕಾಗುವುದು….
ನೆನಪಿರಲಿ…..

——————-

_ ಇಂದಿರಾ ಮೋಟೆಬೆನ್ನೂರ. ಬೆಳಗಾವಿ.

2 thoughts on “ಇಂದಿರಾ ಮೋಟೆಬೆನ್ನೂರ ಕವಿತೆ-ಇದು ಯಾವ ನ್ಯಾಯ?

Leave a Reply

Back To Top