ಲಹರಿ
ಜಯಶ್ರೀ. ಜೆ. ಅಬ್ಬಿಗೇರಿ
ಚೆಂದದ ಚೆಂದುಳ್ಳಿ ,
ನನ್ನ ನಿನ್ನ ಪ್ರೀತಿಗೆ ನೀನು ಅಸ್ತು ಅಂತ ಮುದ್ರೆ ಒತ್ತಿದಾಗಿನಿಂದ ಮನಸ್ಸು ಹಬ್ಬದ ಸಂಭ್ರಮದಲ್ಲಿ ಓಡಾಡ್ತಿದೆ. ದಿನ ಓಡಾಡಿದ ಓಣಿಯೇ ಆದರೂ ಏಕೋ ಗೊತ್ತಿಲ್ಲ. ಎಲ್ಲೆಲ್ಲೂ ಹೊಸತು ಸಡಗರ. ಹೃದಯದ ಬಾಗಿಲಿಗೆ ಹಸಿರು ತಳಿರು ತೋರಣ ಕಟ್ಟಿ ನುಲಿಯುತಿದೆ ಈ ಜೀವ. ಸುಳಿದು ಬೀಸುವ ಅನುರಾಗದ ಗಾಳಿಗೆ ತೋರಣ ಸರಭರ ಸದ್ದು ಮಾಡುವುದನು ಕಂಡು ಬೆರಗಾದೆ. ಸದ್ದಿಲ್ಲದೇ ಮನದ ಮನೆಯಲಿ ನೀನು ಕಾಲಿಟ್ಟದ್ದು ಯಾವಾಗ?ಅಂತ ನೆನಪಿನ ಪುಟ ತೆರೆದರೆ ಮೈಯಲ್ಲಿ ನವೀನ ರೋಮಾಂಚನ. ದಿನವೂ ನನ್ನ ಕಣ್ಣಿಗೆ ನೀ ಬೀಳದಿದ್ದರೆ ಮಿಡಿವ ಹೃದಯ ಒಂದು ಕ್ಷಣ ನಿಂತಂತಾಗುವುದು. ಚೆಂದ ಚೆಂದದ ಸಾವಿರಾರು ಕನಸುಗಳನು ಎದೆಯಲ್ಲಿ ಬಿತ್ತಿ ಕಣ್ಮರೆಯಾದರೆ ಈ ಮುಗ್ಧ ಜೀವ ತಡೆದುಕೊಳ್ಳುವುದಾದರೂ ಹೇಗೆ? ಅಪರೂಪದ ನಿನ್ನ ರೂಪ ಪ್ರತಿ ರಾತ್ರಿಯೂ ಬಿಡದೇ ಕನಸಿನಲ್ಲಿ ಬಂದು ಹಾಜರಿ ಹಾಕಿ ಕಾಡುತಿದೆ. ಮೊದಲ ಸಲ ಅದರಕೆ ಅದರ ಸೇರಿಸಿ ಸವಿದ ಪ್ರಥಮ ಚುಂಬನವ ನೆನೆದಾಗಲೊಮ್ಮೆ ನೀ ಬಳಿ ಬಂದರೆ ಎಷ್ಟೊಂದು ಒಲವನ್ನು ನಿನಗೆ ಮೊಗೆ ಮೊಗೆದು ಕೊಡಬಲ್ಲೆ ಎಂದು ಖುಷಿಯಿಂದ ಬೆವರುವೆ. ಹಾಯಾದ ಸಂಜೆಯಲ್ಲಿ ನಿನ್ನ ತೋಳಲ್ಲಿ ನನ್ನ ತೋಳು ಸೇರಿಸಿ ಕಿಲ ಕಿಲ ನಗುತ್ತ ನಡೆಯುವ ಕನಸು ಕಂಡಿದೆ ಈ ಕಂಗಳು. ನೀನಿಲ್ಲಿ ಈಗ ಬಂದರೆ ಸವಿಜೇನಿಗಿಂತ ಸವಿಯಾದ ಸವಿಮುತ್ತನು ಮೈಗೆಲ್ಲ ಉಡುಗೊರೆಯಾಗಿ ನೀಡಿ ಪ್ರೀತಿಯ ಮತ್ತನು ಏರಿಸುವ ಪ್ರೇಮಿಯಾಗಲು ಚಡಪಡಿಸುತ್ತಿದ್ದೇನೆ. ರತಿ ಮನ್ಮಥರಂತೆ ಪ್ರೀತಿ ಉತ್ಸವದಲ್ಲಿ ಒಂದಾಗಿ ಮೈ ಮರೆಯಲು ತುದಿಗಾಲಲಿ ನಿಂತಿರುವೆ.
ಪ್ರೇಯಸಿ, ಪ್ರೀತಿಯಲ್ಲಿ ಬಿದ್ದಾಗಿನಿಂದ ಏನೋ ಒಂಥರ ನನ್ನ ನಡುವಳಿಕೆಯ ವೈಖರಿಯೇ ಬದಲಾಗಿದೆ. ತುಟಿಯಿಂದ ಜಾರಿ ಹೋಗುವ ನಿನ್ನ ಮುತ್ತಿನಂಥ ಮಾತಿನಲ್ಲಿ ನನ್ನ ಹೃದಯ ಅಡಗಿದೆ ಅಂತ ಅನಿಸುತ್ತಿದೆ. ನನಗೆ ಹೀಗೆಲ್ಲ ಆಗುತ್ತೆ ಅಂತ ಅಂದುಕೊಂಡಿರಲಿಲ್ಲ ಕಣೆ. ಏಕಾಂತದಲ್ಲಷ್ಟೇ ಅಲ್ಲ ಉಳಿದೆಲ್ಲ ಸಮಯದಲ್ಲೂ ನಿನ್ನದೇ ಧ್ಯಾನ. ಪ್ರಣಯದ ಭಾವದಲ್ಲಿ ಮುಳುಗುವ ಕನಸು ಕಾಣುವಷ್ಟು ಕೆಟ್ಟು ಹೋಗುವೆ ಅಂತ ಅನಿಸಿರಲೇ ಇಲ್ಲ. ಆದರೂ ಅದರಲ್ಲೇನೋ ಒಂಥರ ದಿಲ್ ಖುಷ್ ಆಗುತ್ತೆ. ಹದಿ ಹರೆಯದ ಹೊಸ ಹೂ ಅರಳಿ ನಿಂತ ಮನದಲ್ಲಿ ಪ್ರಣಯದ ದೀಪ ಹಚ್ಚಿ, ಮುಖಕ್ಕೆಲ್ಲ ಮತ್ತಿಟ್ಟು, ಸರಸದಾಟದಲಿ ಕಿವಿಯನು ಕಚ್ಚಿ ಹೀಗೆ ದೂರವಾದರೆ ಹೇಗಾಗಬೇಡ? ನೀನೇ ಹೇಳು ಗೆಳತಿ. ನಿನ್ನಿಂದ ದೂರವಿದ್ದು ಗಟ್ಟಿಯಾದ ತೋಳಲ್ಲಿ ಬಂಧಿಸಿ ಮೆಲ್ಲ ಮೆಲ್ಲ ಪ್ರೀತಿಯ ಸವಿಯುವುದು ಚೆಂದವಲ್ಲವೇ ಒಡತಿ. ನೋಡಿಯೂ ನೋಡದಂತೆ ನಟಿಸುವ ನಿನ್ನ ಪರಿ ಮತ್ತಷ್ಟು ನಿನ್ನತ್ತ ವಾಲುವಂತೆ ಮಾಡುತಿದೆ. ಮುದ್ದು ಮುದ್ದಾದ ನಿನ್ನ ಸಂಗ ಸಾಕು ಸಾಕಾಗದಂತೆ ಮುಂದುವರೆಸಲೇಬೇಕೆಂಬ ಹಟ ಈ ಹೃದಯಕೆ. ಪ್ರೇಮ ಲೋಕದ ಪಯಣ ಸಾಗಲಿ ಬಿಡು ಅದಕೇಕೆ ತಡೆ?ಅಲ್ಲವೇ ಸುಮತಿ. ಕಳ್ಳ ನೋಟದಲ್ಲಿ ಮೋಡಿ ಮಾಡಿ ಸಣ್ಣಗೆ ನನ್ನ ಆಸೆಗಳನು ಕದ್ದು ಈಗ ಹೀಗೆ ಮನಸಿನಾಟ ಆಡುವುದೆಷ್ಟು ಸರಿ ನೀನೇ ಯೋಚಿಸು ಷೋಡಸಿ? ಕಾಡಿಸಿ,ಪೀಡಿಸಿ, ಪ್ರೀತ್ಸೇ ಅಂತ ಒಲಸಿದ ಒಲವು ನನ್ನದಲ್ಲ. ನೀನಾಗಿಯೇ ಒಲವಿಗೆ ಒಲವಿನಿಂದ ಒಪ್ಪಿಗೆ ಹಾಕಿ ಒಲವಿನಲೆಯಲಿ ತೇಲಿಸಿರುವೆ. ಆಸೆ ಉಲ್ಲಾಸದಿಂದ ಒಲವಿನ ಕವನ ನಿನಗೆಂದೇ ಗೀಚಿ, ನಿನಗಾಗಿ ಹಾಡಬೇಕೆನ್ನುವಾಗ ಈ ಮುನಿಸು ತರವೇ ಸುಂದರಿ? ನಿನ್ನ ಪ್ರೀತಿಯ ಕೈಪಿಡಿಯನು ನನಗೆ ಕೊಟ್ಟು ಬಿಡು ಅದರಂತೆ ಪದಗಳನ್ನೆಲ್ಲ ಮೂಡಿಸಿ, ಜೋಡಿಸಿ ಪ್ರೀತಿಯ ಕಾವ್ಯವ ದಾಖಲಿಸುವೆ.
ಕಷ್ಟವಾದರೂ ಸರಿ ಇಷ್ಟವಾಗಿರುವ ನಿನ್ನಂಥ ಹೂವಿನಂಥ ಮನಸ್ಸಿದ್ದವಳ ಜೊತೆಯೇ ಹೆಜ್ಜೆ ಹಾಕಬೇಕು ಎನ್ನುತಿರುವೆ. ಉಸಿರಿನ ಕೊನೆಯವರೆಗೂ ಉಸಿರಾಡಬೇಕೆಂದು ನಿರ್ಧರಿಸಿರುವೆ. ಏನೋ ಹೇಳಬೇಕು ಅಂತ ಹೇಳಿ ಹೀಗೆ ಕಾಡಿದರೆ ಹೇಗೆ ಉತ್ತರವಿಲ್ಲದ ಪ್ರಶ್ನೆಯಂತೆ ಏಕೆ ಕಾಡುತಿರುವೆ?ರುಚಿಯಾದ ಹಣ್ಣನು ತಿಂದು ತೇಗಿ ಎಸೆದು ಬಿಡುವ ಜಾಯಮಾನ ನನ್ನದಲ್ಲ. ಬಳಕುವ ಮೈಗೆ ಮನಸ್ಸು ಮಾಡಿ ಬಂದ ಪೋಲಿ ಹುಡುಗನು ನಾನಲ್ಲ.. ಹರೆಯದ ಮಾಮರದಲ್ಲಿ ಕೋಗಿಲೆಯ ಪಂಚಮಸ್ವರದಂತೆ ನಮ್ಮಿಬ್ಬರ ಪ್ರೀತಿ ಗೆಳತಿ. ದೇವರಿಗೆ ಸಿಂಗರಿಸುವ ಹೂವಿನಂತೆ ನೀನು ಅಂತ ನನಗೂ ಗೊತ್ತು. ಪ್ರೀತಿಯಲಿ ಬೇಡ ಅಪಸ್ವರ. ಅನುರಾಗದಲಿ ಶೃತಿ ಸೇರಿಸಿ ನೋಡು. ಸ್ವರ್ಗವನು ಧರೆಗಿಳಿಸಿ ತೋರಿಸುವೆ. ಹರೆಯ ಎಂದೂ ಶಾಶ್ವತವಲ್ಲ ಅಂತ ನನಗೂ ಗೊತ್ತು. ಹದಿ ಹರೆಯದ ಆಸೆಗಳ ಮೀರಿ, ಒಲವಿನ ಕೋಟೆಯಾಚೆಗೂ ಒಲವ ಜಲ ಧಾರೆ ಹರಿಸುವ ಹೊಂಗನಸು ನನ್ನ ಕಣ್ಣಲ್ಲಿದೆ.
ನಿನ್ನ ಜೊತೆನೇ ಮದುವೆ ಅಂತ ಗೊತ್ತಾದ ಮೇಲೆ ನಿನ್ನನ್ನು ಇನ್ನಷ್ಟು ಹೆಚ್ಚು ಹೆಚ್ಚಾಗಿ ಹಚ್ಚಿಕೊಂಡು ಹುಚ್ಚನಂತಾಗಿದ್ದೆ. ಒಲವಿನಲಿ ತುಸು ಸುತ್ತಾಡಿದೆ. ಮರುಳನಂತಾಗಿ ನಿನ್ನನ್ನು ಬಿಗಿದಪ್ಪಿದೆ. ಮನದ ಭಾವಗಳನೆಲ್ಲ ನಿನ್ನ ಮುಂದೆ ಹರವಿದೆ. ಅದನ್ನೇ ನೀನು ತಪ್ಪಾಗಿ ತಿಳಿದೆ. ‘ಎಲ್ಲ ಬಲ್ಲ ಹುಡುಗಿಯರ ಜೊತೆ ಕಾಲ ಕಳೆಯಲು ಹವಣಿಸುವ ಪುಂಡ ಪೋಕರಿಯಂತೆ ನಾನು.’ ಎಂದು ತಿಳಿದು ನನ್ನ ದೂರ ತಳ್ಳಿದೆ. ಹಸೆ ಮಣೆ ಏರುವ ಮುನ್ನ ನಿನ್ನ ಜೊತೆ ಜಾಸ್ತಿ ಸಲುಗೆಯಿಂದ ನಡೆದುಕೊಂಡಿದ್ದು ನನ್ನದೂ ತಪ್ಪೇ ಕಣೆ. ಹೀಗೆ ಯಾವ ಹುಡುಗಿಯರ ಜೊತೆ ಇದುವರೆಗೂ ನಡೆದುಕೊಂಡಿಲ್ಲ. ನಿನ್ನಾಣೆ ನಂಬು. ಅನುರಾಗದಲ್ಲಿ ಉನ್ಮತ್ತನಾಗಿ ಹಾಗೆ ನಡೆದುಕೊಂಡೆ ಸುತ್ತಲಿರುವವರು ನಮ್ಮ ಸುತ್ತಾಟ ಕಂಡು ನಿನಗೆ ತಮಾಷೆ ಗೇಲಿ ಮಾಡಿದ್ದಕ್ಕೆ ಕೋಣೆ ಸೇರಿ ಕಣ್ಣೀರು ಕೆಡವಿ ಊಟ ಮಾಡದೇ ಬಿಳಚಿಕೊಂಡಿರುವೆ. ಎಂಬುದು ನಿನ್ನ ಆಪ್ತ ಗೆಳತಿಯಿಂದ ಗೊತ್ತಾಯಿತು. ಹೆದರದಿರು ಜಿಂಕೆ ಮರಿ, ಕೊರಳಿಗೆ ಮೂರು ಗಂಟು ಹಾಕುವವರೆಗೂ ಸವಿ ಮುತ್ತಿಗಾಗಿ ಸುಖ ಸ್ಪರ್ಶಕಾಗಿ ಕಾಡಿಸುವುದಿಲ್ಲ. ನಿನ್ನ ಬಿಟ್ಟಿರೋದು ಕಷ್ಟವಾಗಿದೆ. ಅದಕ್ಕಾಗಿ ಈ ಓಲೆ ಬರೆದೆ. ನಲ್ಲೆ ನಿನ್ನಿಷ್ಟದಂತೆ ಮೆಲ್ಲ ಮೆಲ್ಲ ಈ ಪ್ರೀತಿ ಮೆಲ್ಲುವಾ ಅದಕೂ ಮೊದಲು ಸಪ್ತ ಪದಿ ತುಳಿಯುವಾ
ನಿನಗಾಗಿ ಕಾಯುತಿರುವ
ನಿನ್ನ ಚೆಂದದ ಚೆಲುವ