ಅಂಕಣ ಸಂಗಾತಿ
ಸಿನಿ ಸಂಗಾತಿ
ಕುಸುಮ ಮಂಜುನಾಥ್
ಶಿವಾಜಿ ಸುರತ್ಕಲ್
ಸಿನಿಮಾದ ಒಂದು ದೃಶ್ಯದಲ್ಲಿ ಪೊಲೀಸ್ ಅಧಿಕಾರಿಯಾದ ಶಿವಾಜಿಗೆ ಅವನ ಹಿರಿಯ ಅಧಿಕಾರಿ ಒಂದು ಹೊಸ ಕೇಸಿನ ಜವಾಬ್ದಾರಿಯನ್ನು ಕೊಡುತ್ತಾರೆ, ಆದರೆ ತನ್ನ ಮಗಳೊಂದಿಗೆ ಸಮಯ ಕಳೆಯಬೇಕಾದ್ದರಿಂದ ಈ ಕೇಸ್ ತೆಗೆದುಕೊಳ್ಳಲಾಗುವುದಿಲ್ಲವೆಂದು ಶಿವಾಜಿ ತಿಳಿಸುತ್ತಾನೆ. ಆಗ ಅವನ ಪಕ್ಕದಲ್ಲಿ ಹೆಣ್ಣಿನ (ರಾಧಿಕಾ ನಾರಾಯಣ್) ಆಕೃತಿಯೊಂದು ಕಾಣಿಸಿಕೊಳ್ಳುತ್ತದೆ ” ಜೀ ಕೇ ಸ್ ನ ತೆಗೆದುಕೊಳ್ಳಿ ಪ್ಲೀಸ್ “ಎಂದು ಒತ್ತಾಯಿಸುತ್ತದೆ . ಆಕೆ ಮತ್ಯಾರು ಅಲ್ಲ ಶಿವಾಜಿಯ ಗತಿಸಿದ ಶ್ರೀಮತಿಯಾಗಿರುತ್ತಾಳೆ, ಅವಳು ಚಿತ್ರದುದ್ದಕ್ಕೂ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಾಳೆ, ಆಗಾಗ ಪ್ರತ್ಯಕ್ಷವಾಗುತ್ತಾಳೆ. ಹಾಗಾದರೆ ಇದೊಂದು ಪ್ರೇತಾತ್ಮ ದ ಸಿನಿಮಾವೇ ಎಂದರೆ ಖಂಡಿತ ಅಲ್ಲ ಇದು ಸರಣಿ ಕೊಲೆಗಳನ್ನು ಭೇದಿಸ ಹೊರಡುವ ಕ್ರೈಂ ಥ್ರಿಲ್ಲ್ಲರ್ ಕಥೆ…!!
ಚಿತ್ರದುದ್ದಕ್ಕೂ ನಡೆಯುವ ಸರಣಿ ಕೊಲೆಗಳಿಗೂ ಪೊಲೀಸ್ ಅಧಿಕಾರಿ ಶಿವಾಜಿ ಸುರತ್ಕಲ್( ರಮೇಶ ಅರವಿಂದ್ ) ಗೂ ನೇರ ಸಂಬಂಧವಿದೆ ಅದು ಹೇಗೆಂದರೆ ಕೊಲೆ ಆಗುವ ವ್ಯಕ್ತಿಗಳೆಲ್ಲರೂ ಕೊಲೆಯಾಗುವ ಮುಂಚೆ ಶಿವಾಜಿಗೆ ಫೋನಾಯಿಸಿ ಸಹಾಯಕ್ಕಾಗಿ ಯಾಚಿಸುತ್ತಾರೆ, ಕೊಲೆಗಡುಕ ಮಾಯಾವಿ ಶಿವಾಜಿಗೆ ಹಲವು ಕ್ಲೂಗಳನ್ನು ಕೊಟ್ಟರೂ ಶಿವಾಜಿಗೆ ಈ ಕೊಲೆಗಳನ್ನು ತಪ್ಪಿಸಲು ಸಾಧ್ಯವಾಗುವುದಿಲ್ಲ.
ಹೀಗೆ ಇಡೀ ಚಿತ್ರ ನಡೆಯುವುದು ಸರಣಿ ಕೊಲೆಗಳ ಸುತ್ತ, ಈ ಎಲ್ಲ ಸರಣಿ ಕೊಲೆಗಳನ್ನು ಭೇದಿಸಲು ಹೊರಡುವ ಶಿವಾಜಿಗೆ ಪ್ರತಿ ಗಳಿಗೆಯಲ್ಲೂ ಸವಾಲುಗಳು. ಕೊನೆಯ ಹಂತದಲ್ಲಿ ಈ ಎಲ್ಲಾ ಸರಣಿ ಸಾವುಗಳ ಮೂಲ ವ್ಯಕ್ತಿ ಒಬ್ಬನೇ, ಅವನು ಮಾಯಾವಿ ಎಂಬುವವನು ಎಂಬುದನ್ನು ಶಿವಾಜಿ ಸುರತ್ಕಲ್ ಕಂಡುಹಿಡಿಯುತ್ತಾನೆ, ಸಿನಿಮಾದ ಕೊನೆಯ ಹಂತದಲ್ಲಿ ಮಾಯಾವಿಯ ಮುಂದಿನ ಬಲಿ ಪಶು ಶಿವಾಜಿ ಸುರತ್ಕಲ್ ಆಗಿರುತ್ತಾನೆ ಇದು ಹೇಗೆ ?ಏನು ? ಏಕೆ?ಎಂಬುದನ್ನು ತಿಳಿಯಬೇಕಾದರೆ ಸಿನಿಮಾ ನೋಡಲೇಬೇಕಾಗುತ್ತದೆ.
ಸಿನಿಮಾ ಕೇವಲ ಕೊಲೆ ಪತ್ತೇದಾರಿಕೆಗಳ ನಡುವೆ ಸಾಗಿದರು, ಮಧ್ಯದಲ್ಲಿ ಹಲವಾರು ಭಾವನಾತ್ಮಕ ಅಂಶಗಳನ್ನು ಒಳಗೊಂಡಿದೆ ಚಿತ್ರದುದ್ದಕ್ಕೂ ಶಿವಾಜಿ ಹಾಗೂ ಆತನ ಮಗಳು ಸಿರಿ, ಪ್ರೀತಿಯನ್ನು ಬೆಸೆಯುವ ಹಲವಾರು ಸೆಂಟಿಮೆಂಟ್ ದೃಶ್ಯಗಳು ಮನಸ್ಸಿಗೆ ಹಿಡಿಸುತ್ತವೆ.
ಹಾಗೆಯೇ ಶಿವಾಜಿ ಸುರತ್ಕಲ್ ಹಾಗೂ ಆತನ ತಂದೆಯ ನಡುವಿನ ಸಂಬಂಧದ ಕುರಿತು ಹಲವಾರು ಭಾವನಾತ್ಮಕ ಅಂಶಗಳು ಚಿತ್ರದೊಂದಿಗೆ ಹೆಣೆದುಕೊಂಡಿವೆ..
ಕಥೆಯಲ್ಲಿ ನವೀನತೆ ಇಲ್ಲದಿದ್ದರೂ ಬಹಳ ವೇಗವಾಗಿ ಸಾಗುವುದರಿಂದ ಬೇಸರವೆನಿಸುವುದಿಲ್ಲ. ನಡೆಯುವ ಸರಣಿ ಕೊಲೆಗಳ ಮೂಲ ವ್ಯಕ್ತಿ ಒಬ್ಬನೇ ?! ಹಾಗಿದ್ದರೆ ಅವನು ಏಕೆ ? ಈ ಕೊಲೆಗಳನ್ನು ಮಾಡಿದ ಎಂಬ ಕುತೂಹಲ ಕೊನೆವರೆಗೂ ಉಳಿಯುವಂತೆ ನೋಡಿ ಕೊಳ್ಳುವಲ್ಲಿ ನಿರ್ದೇಶಕ ಆಕಾಶ್ ಶ್ರೀವತ್ಸ ಸಫಲರಾಗಿದ್ದಾರೆ.
ಸಿನಿಮಾ ಅಲ್ಲಲ್ಲಿ ಫ್ಲಾಶ್ ಬ್ಯಾಕ್ ನಲ್ಲಿ ಹೊರಳುತ್ತಾ ಮುಂದೆ ಸಾಗಿದೆ.ಈ ಫ್ಲಾಶ್ ಬ್ಯಾಕ್ ಚಿತ್ರದ ವೇಗಕ್ಕೆ ಅಡ್ಡಿಯನ್ನುಂಟು ಮಾಡಿದೆ. ಶಿವಾಜಿ ಸುರತ್ಕಲ್ -2 ಆಗಾಗ ಕಾಣಿಸಿಕೊಳ್ಳುವ ರಾಧಿಕಾ (ಶಿವಾಜಿಯ ಪತ್ನಿ )ಶಿವಾಜಿ ಸೂರತ್ಕಲ್ -1 ರ ಕೊಂಡಿಯಾಗಿ ಉಳಿದಿದ್ದಾರೆ ಉಳಿದಂತೆ ಭಾಗ-1 ಹಾಗೂ ಭಾಗ ಎರಡಕ್ಕೆ ಯಾವುದೇ ಸಂಬಂಧವಿಲ್ಲ.
ಸಿನಿಮಾದಲ್ಲಿ ಶಿವಾಜಿಯ ಪಾತ್ರಕ್ಕೆ ಅಲ್ಲಲ್ಲಿ ನೆಗೆಟಿವ್ ಶೇಡ್ ಸೇರಿಸಿ ಅವನೇ ಕೊಲೆಗಾರ ನೇನೋ ಎಂಬ ಭಾವನೆ ಪ್ರೇಕ್ಷಕರಲ್ಲಿ ಮೂಡಿಸುತ್ತಾರೆ ಎಲ್ಲಾ ಪತ್ತೆದಾರಿ ಕಥೆಗಳಲ್ಲಿರುವಂತೆ ಹಲವು ಪಾತ್ರಧಾರಿಗಳ ಮೇಲೆ ನಮಗೆ ಅನುಮಾನ ಮೂಡುವಂತೆ ಚಿತ್ರಸಲಾಗಿದೆ ಇದು ಕುತೂಹಲ ಉಳಿಸಿಕೊಳ್ಳುವ ಒಂದು ತಂತ್ರವೇ ಆಗಿದೆ.
ಶಿವಾಜಿ ಸುರತ್ಕಲ್ ಪಾತ್ರದ ಸೃಷ್ಟಿಯಲ್ಲಿ ಇಂಗ್ಲೀಷ್ ನ ಶರ್ಲಾಕ್ ಹೋಮ್ ನ ಹೋಲಿಕೆ ಇದೆ.
ಶಿವಾಜಿ ಆಗಾಗ ಮನೋವಿಕಲ್ಪಕ್ಕೆ ಒಳಗಾಗುತ್ತಾನೆ ಮರಣಿಸಿದ ಅವನ ಹೆಂಡತಿ ಅವನ ಕಣ್ಣಿಗೆ ಆಗಾಗ ಕಾಣಿಸಿಕೊಂಡು ಅವನು ವಿಚಲಿತನಾಗುತ್ತಾನೆ ಗೊಂದಲಕ್ಕೆ ಒಳಗಾಗುತ್ತಾನೆ ಒತ್ತಡ ಕ್ಕೊಳಗಾಗುತ್ತಾನೆ. ಅದರಿಂದ ಹೊರಬರಲು ಮಾತ್ರೆಯನ್ನು ನುಂಗುತ್ತಾನೆ.
ಸಿನಿಮಾದದ್ದಕ್ಕೂ ಈ ದೃಶ್ಯಗಳು ಆಗಾಗ ಘಟಿಸಿ ಶಿವಾಜಿಯ ಬುದ್ಧಿ ತೀಕ್ಷ್ಣತೆಗೆ ಚಾಕ ಚಕ್ಯತೆಗೆ ಸವಾಲನ್ನು ತರುತ್ತದೆ.
ಸಂಪೂರ್ಣ ಚಿತ್ರವನ್ನು ರಮೇಶ್ ಅರವಿಂದ್ ಆವರಿಸಿಕೊಂಡು ಬಿಟ್ಟಿದ್ದಾರೆ ಪೊಲೀಸ ಅಧಿಕಾರಿಯಾಗಿ ಕೊಲೆಪಾತಕರನ್ನು ಕಂಡುಹಿಡಿಯುವ ಚಾಣಾಕ್ಷನಾಗಿ ಒಬ್ಬ ಉತ್ತಮ ತಂದೆಯಾಗಿ ಮಗನಾಗಿ ಪತಿಯಾಗಿ ಹೀಗೆ ಹಲವಾರು ಶೇಡ್ ಗಳಲ್ಲಿ ಅವರು ಸಹಜವಾಗಿ ನಟಿಸಿದ್ದಾರೆ ಶಿವಾಜಿಯ ಪತ್ನಿಯಾಗಿ ರಾಧಿಕಾ ನಾರಾಯಣ್ ಸಿಕ್ಕಚಿಕ್ಕ ಅವಕಾಶವನ್ನೇ ಸಮರ್ಥವಾಗಿ ಬಳಸಿಕೊಂಡಿದ್ದಾರೆ ಉನ್ನತ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಮೇಘನಾ ಗಾಂವ್ಕರ್ ಮತ್ತೊಬ್ಬ ನಾಯಕಿಯಾಗಿದ್ದಾರೆ, ಉತ್ತಮ ಅಭಿನಯ ನೀಡಿದ್ದಾರೆ ಕೇವಲ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳುವವರು ಮತ್ತೊಬ್ಬ ನಾಯಕಿ ಸಂಗೀತ ಶೃಂಗೇರಿ ಅವರು.
ಪೊಲೀಸ್ ಪೇದೆಯಾಗಿ ರಘು ರಾಮನಕೊಪ್ಪ ನಗುವಿನ ಕಚುಗುಳಿ ಇಡುತ್ತಾರೆ. ಶಿವಾಜಿ ಸೂರತ್ಕಲ್ ಮಗಳ ಪಾತ್ರದಲ್ಲಿ ಬಾಲ ನಟಿ ಆರಾಧ್ಯ ಮುದ್ದಾಗಿ ಕಾಣುತ್ತಾರೆ ಹಾಗು ನಟಿಸಿದ್ದಾರೆ ತಂದೆ ಮಗಳ ಪ್ರೀತಿಯ ಅಭಿವ್ಯಕ್ತಿಯ ಸನ್ನಿವೇಶಗಳು ಚಿತ್ರವನ್ನು ಭಾವನಾತ್ಮಕವಾಗಿ ಹಿಡಿದಿಟ್ಟಿದೆ, ಶಿವಾಜಿಯ ತಂದೆಯ ಪಾತ್ರದಲ್ಲಿ ನಾಸರ್ ಬಹಳ ಚೆನ್ನಾಗಿ ನಟಿಸಿದ್ದಾರೆ ಉಳಿದಂತೆ ವೀಣಾ ಸುಂದರ್, ವಿದ್ಯಾ ಮೂರ್ತಿ, ಶ್ರೀನಿವಾಸ್ ಪ್ರಭು ಇತರರು ಅಭಿನಯಿಸಿದ್ದಾರೆ, ಚಿತ್ರದ ಛಾಯಾಗ್ರಹಣ ಸೊಗಸಾಗಿದೆ, ಮುರುಡೇಶ್ವರ ಯಲ್ಲಾಪುರದ ಕೆಲ ದೃಶ್ಯಗಳು ಖುಷಿ ಕೊಡುತ್ತವೆ.
ಇಷ್ಟಾ ಗಿಯೂ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯ ಬಾಲಿಶವೆನಿಸುತ್ತದೆ.. ಇಲ್ಲಿ ನಿರ್ದೇಶಕರು ಮತ್ತಷ್ಟು ತರ್ಕಬದ್ಧವಾಗಿ ಯೋಚಿಸಬೇಕಿತ್ತು ಎನಿಸದಿರದು.
ಕಥೆಯನ್ನು ಹದವಾಗಿ ಬೆರೆಸಿ ಬಿಗಿಯಾಗಿ ಹಿಡಿದು ಸ್ವಯಂ ಸಂಕಲನ ಮಾಡಿ ಕುತೂಹಲ ಕೆರಳಿಸುವಂತೆ ದಕ್ಷ ನಿರ್ದೇಶನ ನೀಡಿದ್ದಾರೆ ಆಕಾಶ್ ಶ್ರೀವತ್ಸ ಅವರು.
ಸಿನಿಮಾಗೆ ಜ್ಯೂಡಾ ಸ್ಯಾಂಡಿ ಅವರ ಸಂಗೀತ ನಿರ್ದೇಶನವಿದೆ ಅವರು ತಮಗೆ ಸಿಕ್ಕ ಅವಕಾಶವನ್ನು ಮತ್ತಷ್ಟು ಚೆನ್ನಾಗಿ ಬಳಸಿಕೊಳ್ಳಬಹುದಿತ್ತು ಮಾತಾಡು ಗೊಂಬೆ ಎಂಬ ಹಾಡಿನ ದೃಶ್ಯೀಕರಣ ಗಮನ ಸೆಳೆಯುವಂತಿದೆ ಹಾಗೂ ಇಂಪಾಗಿದೆ.
ಚಿತ್ರವನ್ನು ಅನಗತ್ಯವಾಗಿ ಲಂಬಿಸದೆ ಎರಡು ಗಂಟೆಗಳಿಗೆ ಸೀಮಿತಗೊಳಿಸಿ ಅತಿಯಾದ ರಕ್ತಪಾತ, ಹಿಂಸೆ ಇಲ್ಲದೆ ಒಂದು ಉತ್ತಮ ಚಿತ್ರವೆನಿಸಿಕೊಳ್ಳುವ ಅರ್ಹತೆಯನ್ನು ಶಿವಾಜಿ ಸುರತ್ಕಲ್ – 2 ಹೊಂದಿದೆ ಎಂದು ಹೇಳಲು ಯಾವುದೇ ಅಡ್ಡಿ ಇಲ್ಲ
ತಾರಾಗಣ -ರಮೇಶ್ ಅರವಿಂದ್ ,ರಾಧಿಕಾ ನಾರಾಯಣ್ ,ಸಂಗೀತ ಶೃಂಗೇರಿ, ವಿನಾಯಕ್ ಜೋಶಿ ,ನಾಸರ್ ,ರಘು ರಾಮನ ಕೊಪ್ಪ ,ಮೇಘನಾ ಗಾಂವ್ಕರ್, ಆರಾಧ್ಯ ಇತರರು.
ನಿರ್ದೇಶನ -ಆಕಾಶ್ ಶ್ರೀ ವತ್ಸ
ಸಂಗೀತ ನಿರ್ದೇಶನ – ಜ್ಯೂಡ ಸ್ಯಾಂಡಿ
ಸಂಕಲನ -ಆಕಾಶ್ ಶ್ರೀವತ್ಸ
ನಿರ್ಮಾಪಕರು -ರೇಖಾ ಕೆ.ಎನ್ , ಅನುಪ್ ಗೌಡ
ಕುಸುಮ ಮಂಜುನಾಥ್
ಸುಂದರ ವಿಮರ್ಶೆ ಕುಸುಮಾ ಅವರೇ