ಇಂದಿರಾ ಮೋಟೆಬೆನ್ನೂರ-ಪರವಶ

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ-

ಪರವಶ

ಕಣ್ಣೀರಿಗೂ ತಾಕೀತು ಮಾಡಿರುವೆ
ರೆಪ್ಪೆ ಬದುವಿಂದ ಆಚೆಗೆ
ಇಣುಕ ಬೇಡವೆಂದು…

ನಗುವಿಗೂ ತಾಕೀತು ಮಾಡಿರುವೆ
ತುಟಿಯಂಚಿನಿಂದ ಆಚೆಗೆ
ಹಣುಕ ಬೇಡವೆಂದು…..

ಹೆಪ್ಪುಗಟ್ಟಿದ ಮೌನಕೂ ತಾಕೀತು ಮಾಡಿರುವೆ
ಬಿಸಿಯುಸಿರ ಕಾವಿಗೆ
ಕರಗಿ ಮಾತಾಗಿ ಬಿಕ್ಕಬೇಡವೆಂದು….

ಎದೆ ಸುಡುವ ನೋವಿಗೂ ತಾಕೀತು ಮಾಡಿರುವೆ
ಕವನ ದವನ ಮಲ್ಲಿಗೆಯಾಗಿ
ಅರಳ ಬೇಡವೆಂದು……

ಮಿಡಿವ ಹೃದಯ ತುಡಿವ ಜೀವಕೂ ತಾಕೀತು ಮಾಡಿರುವೆ
ಭಾವವಾಗಿ ಪದಗಳಲಿ
ಎದೆಯ ಕದತೆರೆಯ ಬೇಡವೆಂದು……

ಏನು ಮಾಡಲಿ? ಎಲ್ಲವೂ
ಆಜ್ಞೆಯ ಉಲ್ಲಂಘಿಸಿ ಬಂಡೆದ್ದಿವೆ….
ಅಣತಿ ಮೀರಿ ಹೊರಹೊಮ್ಮಿವೆ…..

ನನ್ನ ವಶದಲ್ಲೇನೂ ಇಲ್ಲ…
ಎಲ್ಲವೂ ನಿನ್ನ ಕೈ ವಶ….
ನಿನ್ನ ಭಾವ ಬಿತ್ತನೆಯ ಪರವಶ …..


ಇಂದಿರಾ ಮೋಟೆಬೆನ್ನೂರ

Leave a Reply

Back To Top