ಅಂತರಂಗದ ಅಲೆಗಳು

                        

ಸುಜಾತ ರವೀಶ್

ಹೌದು. ಮನವೆಂಬುದು ಅದೆಷ್ಪೋ ಲಕ್ಷ GBಗಳಾಗಿಂತ ಶಕ್ತಿಯುತ ಚಿಪ್. ಅಂತರಾಳದ ಪದರ ಪದರಗಳಲ್ಲಿ ಅಸಂಖ್ಯಾತ ನೆನಪಿನಲೆಗಳೇಳುತ್ತಲೇ ಇರುತ್ತವೆˌ ಈ ಭರತಕ್ಕೆ ಹುಣ್ಣಿಮೆ ಅಮಾವಾಸ್ಯೆಗಳ ಹಂಗಿಲ್ಲ. ಅವಿರತ ನಿರಂತರ ಅನಂತ.ಎಂದೋ ಎಲ್ಲೋ ಆದ ಅನುಭವದ ನೆನಹು ಇನ್ನೆಂದೋ ಇನ್ನೆಲ್ಲೋ ಧುತ್ತನೆ ಮನದಂಗಳದಲಿ ಪ್ರತ್ಯಕ್ಷ.ಕವಿವಾಣಿ ನುಡಿದಂತೆ “ಹಿಂದೆ ಯಾವ ಜನ್ಮದಲ್ಲೋ ಮಿಂದ ಪ್ರೇಮಜಲದಾ ತಂಪು” ಇಂದಿಗೂ ತಾಜಾ ತಾಜಾ ಹಸಿ ಹಸಿ. ಇವತ್ತು ಬರೆಯಹೊರಟಿರುವ ವಿಷಯ ತುಂಬಾ ದಿನದಿಂದ ಮನದಲ್ಲಿತ್ತು. ಮುಂದೂಡೂತ್ತಲೇ  ಇದ್ದೆ. ಹಾಗಾಗಿ ಈಗ ನಿಮ್ಮ ಮುಂದೆ ನನ್ನ ಅಂತರಂಗದಲೆಯ ನರ್ತನ.

ಮನೆಯ ಬಳಿಯೇ  ಉದ್ಯಾನವಿದ್ದರೂ ರಿಂಗ್ ರಸ್ತೆಯಲ್ಲಿ ಗೆಳತಿಯೊಡನೆ ನಡೆದಿತ್ತು ನನ್ನ ಮುಂಜಾವಿನ ವಾಯುವಿಹಾರ. ಗೆಳತಿ ಬೆಂಗಳೂರಿಗೆ ಶಿಫ್ಟ್  ಆದ್ದರಿಂದ

ಒಬ್ಬಳೇ ತಾನೇ ಇನ್ನು ಮುಂದೆ ಉದ್ಯಾನವನಕ್ಕೇ ಹೋಗೋಣ ಎಂದು ನಿರ್ಧರಿಸಿದೆ. ಸರಿ ಆ ಬೆಳಿಗ್ಗೆ ಹೊರಟಿತು ನನ್ನ ಸವಾರಿ.ಹಿಂದಿನ ರಾತ್ರಿ ಜೋರಾಗಿ ಮಳೆ ಗಾಳಿ ಬಂದ ಕಾರಣ ವಾತಾವರಣವೆಲ್ಲಾ ತಂಪು ತಂಪು ಹಾಯಿ ಹಾಯಿ. ಗೇಟಿನ ಬಳಿ ಹೋಗುತ್ತಿದ್ದಂತೆ ತಡೆದು ನಿಲ್ಲಿಸಿತು  ಆ ಕಂಪು. ಏನೋ ಪರಿಚಿತ ಅನ್ನಿಸ್ತಿದೆ ಆದರೆ ನಿಖರವಾಗಿ ಗೊತ್ತಾಗ್ತಾಯಿಲ್ಲ.ಒಂದು ಕ್ಷಣ ನೆನಪಿಸಿಕೊಂಡ ನಂತರ ಯಾವುದೋ ಹೂವಿನದು ಅನ್ನಿಸಿತು.ಮೆದುಳಿಗೆ ಮತ್ತಷ್ಟು ಕೆಲಸ ಕೊಡುವಷ್ಟರಲ್ಲಿ ಕಣ್ಣಿಗೆ ಬಿತ್ತು ಆಕಾಶಮಲ್ಲಿಗೆಯ ಮರ. ತಕ್ಷಣ ಹೊಳೆಯಿತು ಅದು ಆಕಾಶಮಲ್ಲಿಗೆ ಹೂವಿನ ನರುಗಂಪು ಎಂದು.ಈ ಸುಗಂಧದ ಬಂಧ ಬಾಲ್ಯದ ನಂಟು.ಚಿಂತಾಮಣಿಯಲ್ಲಿ ಅಜ್ಜಿಮನೆಯ ದಾರಿಯುದ್ದಕ್ಕೂ ಮತ್ತು ಅಲ್ಲಿದ್ದ ಪಾರ್ಕಿನಲ್ಲೂ ಇವೇ ಮರಗಳು. ಸಾಮಾನ್ಯವಾಗಿ ನಾವು ಹೋಗುತ್ತಿದ್ದುದು ಏಪ್ರಿಲ್ ಮೇ ತಿಂಗಳಾದ್ದರಿಂದ ಮರತುಂಬಾ ನಕ್ಷತ್ರದಂತಹ ಹೂಗಳುˌ! ಬೆಳಿಗ್ಗೆ ರಸ್ತೆಯಿಡೀ ಬಿದ್ದಿರುತ್ತಿದ್ದವು. ನೋಡಲು ಥೇಟ್ ಸುಗಂಧರಾಜದಂತೆಯೇ!ಅದರೆ ಅಷ್ಟು ತೀಕ್ಷ್ಣ ಪರಿಮಳವಿಲ್ಲ.ದೇವರ ಪೂಜೆಗೆ ಅರ್ಹವಿಲ್ಲ ಅಂತಿದ್ರು ದೊಡ್ಡವರು.ನಾವು ಮಕ್ಕಳು ಅವನ್ನು ಆರಿಸಿ ತೊಟ್ಟ ಲಂಗಗಳಲ್ಲಿ ಉಡಿ ತುಂಬಿಸಿಕೊಂಡು ತರುತ್ತಿದ್ದೆವು.ಆ ನಂತರ ರಂಗವಲ್ಲಿ ಚಿತ್ತಾರ ಮಾಡಿಯೋ ಮಾಲೆಯೋ ಕಟ್ಟುತ್ತಿದ್ದೆವು. ದೇಟು (ತೊಟ್ಟು) ಉದ್ದವಾದ್ದುದರಿಂದ ಹೊಸದಾಗಿ ಹೂ ಕಟ್ಟಲು ಕಲಿಯುವವರಿಗೆ ಸುಲಭ ಆಗುತ್ತಿತ್ತು. ನಂತರದ ದಿನಗಳಲ್ಲಿ ಅದರ ಒಡನಾಟವೇ ಇಲ್ಲ.ˌ ಹಾಂ! “ಮುಗಿಲ ಮಲ್ಲಿಗೆಯೋ ಗಗನದ ತಾರೆಯೋ” ಹಾಡು ಕೇಳಿದಾಗಲೆಲ್ಲಾ ಈ ನೆನಪು ಸುಳಿದು ಹೋಗುತ್ತಿದ್ದುದು ಉಂಟು.

35_40 ವರ್ಷಗಳ ಹಿಂದೆ ಆಘ್ರಾಣಿಸಿದ ಆ ಕಂಪು ಇನ್ನೂ ಮನದಲ್ಲಿ ಉಳಿದಿದೆಯೆಂದರೆ ಮಾನವನ ಮಿದುಳು ಚಮತ್ಕಾರವಲ್ಲದೇ ಇನ್ನೇನು?ಆಗತಾನೇ ಬಿದ್ದಿದ್ದ ಕಾಲ್ತುಳಿತಕ್ಕೆ ಸಿಕ್ಕದ ಹೂಗಳನ್ನು ಆರಿಸಿ ತಂದು ಫೋಟೋ ತೆಗೆದು ಹೂದಾನಿಯಲ್ಲಿಟ್ಟೆ.3_4  ದಿನಗಳವರೆಗೂ ಬಾಡದೆ ಮನೆಯೆಲ್ಲಾ ಆ ಮಂದ್ರ ಪರಿಮಳ ಆವರಿಸಿತ್ತು ಅಂತೇ  ಮನದ ತುಂಬಾ ಕಳೆದ ಆ

ಬಾಲ್ಯದ ದಿನಗಳ ಮೆಲುಕೂ!

ಜೀವನವೇ ಹೀಗೇ….. ಬಾಳ ಕಡಲಿನಲಿ ನೆನಪಿನ ಹಾಯಿದೋಣಿಯ ಯಾನ.

ಸುಜಾತ ರವೀಶ್

ಲೇಖಕರ ಪರಿಚಯ:

ಜೀವ ವಿಮಾ ನಿಗಮದಲ್ಲಿ ಉನ್ನತ ದರ್ಜೆ ಸಹಾಯಕಿ.ಅಂತರಂಗದ ಆಲಾಪ ಕವನ ಸಂಕಲನ ಪ್ರಕಟಣೆಯಾಗಿದೆ. ಮುಖವಾಡಗಳು ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಪದವಿ ಪಠ್ಯ ಪುಸ್ತಕಕ್ಕೆ ಆಯ್ಕೆಯಾಗಿದೆ.ಕೆಲವು ಕವನಗಳು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ

4 thoughts on “ಅಂತರಂಗದ ಅಲೆಗಳು

  1. ಸೂಪರ್ ‌‌.. ಎಂದಿನಂತೆ ಚೊಕ್ಕ ಬರಹ..
    ಅದೆಷ್ಟು ಹೇಳಿಕೊಂಡರೂ ಸಾಲದುಬಾಲ್ಯದ ದಿನಗಳನ್ನು ನೆನಪಿಸಿಕೊಂಡು ..ಮಾನವ ದೈವದ ಅದ್ಭುತ ಸೃಷ್ಟಿ ಅನ್ನುವುರಲ್ಲಿ ಎರಡು ಮಾತಿಲ್ಲ.. ಮನವೋ!! ಮಾಯಾಕನ್ನಡಿಯೋ!! .. ನೆನಪುಗಳ ಬಲೆಯೋ!!
    ಅಭಿನಂದನೆಗಳು..
    ನೆಚ್ಚಿನ ಗೆಳತಿ- ಬರಹಗಾರ್ತಿ ಸುಜಾತಾ ರವೀಶ್ ಅವರಿಗೆ

  2. ಎಂದಿನಂತೆ ಚೊಕ್ಕ ಬರಹ…. ಬಾಲ್ಯದ ನೆನಪುಗಳ ಸುತ್ತ ನಮ್ಮದೊಂದು ಪಯಣವಾಯ್ತು.

    ಮನದ ಪದರಗಳ ನಡುವೆ ಅಡಗಿರುವ ನೆನಪಿನ ಬಲೆಯನ್ನು ನಾಜೂಕಾಗಿ ಬಿಡಿಸಿಟ್ಟ, ನೆಚ್ಚಿನ ಬರಹಗಾರ್ತಿ- ಗೆಳತಿ ಸುಜಾತಾ ರವೀಶ್ ರವರಿಗೆ ಅಭಿನಂದನೆಗಳು..

  3. ಕವನವಾಗಲಿ ಲೇಖನವಾಗಲಿ ಭಾವತರಂಗಗಳು ಚೆನ್ನಾಗಿ ಹೊಮ್ಮಿಸುವ ಕವಯತ್ರಿ ಸುಜಾತರವೀಶ್ ಅಂತರಂಗದ ಅಲೆಗಳು ಮಧುರನಾದ ಹೊಮ್ಮಿಸಿವೆ.

Leave a Reply

Back To Top