ಈರಪ್ಪ ಬಿಜಲಿ ಕವಿತೆ-ದೇವ್ರು ಬೇಕೇ…ದೇವ್ರು..?

ಕಾವ್ಯ ಸಂಗಾತಿ

ಈರಪ್ಪ ಬಿಜಲಿ

ದೇವ್ರು ಬೇಕೇ…ದೇವ್ರು..?

ದೇವ್ರು ಬೇಕೆನಮ್ಮ ದೇವ್ರು
ಬಣ್ಣ ಬಣ್ಣದ ದೇವ್ರುಗಳು
ಆದಿ ದೇವ್ರು ಮಹಾದೇವ್ರು
ಅಂದ ಚಂದದ ದೇವ್ರಗಳು ||

ಸಾಹಿಬಾಬ ರಾಘವೇಂದ್ರ
ಬಂದು ಕೊಳ್ಳಿ ನೀವಿಂದು
ಮಹಾಗೌರಿ ಭಾಗ್ಯಲಕ್ಷ್ಮೀ
ಪಡೆದು ಕೊಳ್ಳಿ ನೀವಿಂದು ||

ಬೇಕೆನಿಸಿದು ಕೊಳ್ಳಿ ಒಂದೇ
ರೇಟು ನೂರು ರೂಪಾಯಿ
ಸಾಕಿ ಬೆಳೆಸಿ ನಮ್ಮ ನೀವು
ಬೇಡಿಕೊಳ್ಳುವೆ ಬಡಪಾಯಿ ||

ಬುಟ್ಟಿ ತುಂಬ ದೇವ್ರು ತುಂಬಿವೆ
ಹೊಟ್ಟೆ ಮಾತ್ರ ಖಾಲಿಯಿದೆ
ರಟ್ಟೆಯಲ್ಲಿ ಶಕ್ತಿ ತುಂಬಿದೆ
ಕಂಕುಳಲ್ಲಿ ಹಸಿದ ಕೂಸಿದೆ ||

ಕಣ್ಣ ಎದುರು ದೇವ್ರಿಗಿಂತ
ಮಣ್ಣ ದೇವ್ರನೆ ಮೊರೆವರು
ಚಿನ್ನದಂತ ನಡೆದಾಡುವ
ಹೆತ್ತು ಹೊತ್ತವರ ಮರೆವರು ||

ಜಗದ ತುಂಬ ಕುರುಡು ಕಾಂಚಣ
ನರನ ಕುಣಿಸಿ ಗಹಗಹಿಸಿದೆ
ನಗವೇ ಕೆಡುಕು ನಗುವೇ ಬದುಕು
ನಿತ್ಯ ಸತ್ಯವ ಮರೆಮಾಸಿದೆ ||


Leave a Reply

Back To Top