ಕಾವ್ಯ ಸಂಗಾತಿ
ಯಾ.ಮ.ಯಾಕೊಳ್ಳಿ
ಬಾಳ ಬಂಡಿಯ ನೊಗಕೆ ಹೆಗಲಾದವಳು
ಬಾಳಿಗೆ ಬಣ್ಣ ತುಂಬಿದವಳ ಮೇಲೆ ಬರೆಯಬಹುದೆ
ಕವಿತೆ,ಯಾವಾಗಲೂ ತುಂಬಿ ಹರಿಯುವ ನೀರಿನ ಒರತೆ
ಇಹಕೂ ಪರಕೂ ಮಧ್ಯೆ ಹರಿಗೋಲಾದ ಸುಚರಿತೆ
ಅತ್ತ ಇತ್ತ ಹರಿಯುವ ನನ್ನ ಚಿತ್ತವ ಸುಸ್ಥಿರದಲಿಟ್ಟಾಕೆ
ನನ್ನ ಬಿಟ್ಟಿವಳಿಗಿಲ್ಲ ಬೇರೆ ಜಗತ್ತು,ಇದು ಬ್ರಮೆಯನ್ನಬೇಡಿ
ಸತ್ಯದ ಮಾತು, ಸುತ್ತುತ್ತಾಳೆ ಬಳ್ಳಿ ಮರವ ಸುತ್ತಿದಂತೆ
ಗಂಧ ಸೂಸುತ್ತ ಹೂವಿನ ಬಳ್ಳಿಯಂತೆ , ಎಚ್ಚರಿರುವ ಹತ್ತು ತಾಸು ನಾನಿವಳಿಗೆ ಪ್ರಪಂಚ ,ಇರುತ್ತದೆ ಪ್ರತಿ ಹೆಜ್ಹೆಗೂ ವರಾತ.
ಸೀತೆ ಸಾವಿತ್ರಿಯರಿಗಿಂತ ಕಡಿಮೆಯಿವಳೇನಲ್ಲ.ನಾನು ಬರುವದಾದರೆ ಜತೆಗೆ ಬರಲೂ ತಯಾರು ಕಾಡಿಗೆ
ಗಂಡ ಮಕ್ಕಳಿಗಾಗಿ ಮಾಡಬಲ್ಲಳು ಜಗಳ ಯಮನೊಂದಿಗೆ
ಬರೀ ನನ್ನ ಸಲುವಾಗಿಯೆ,ಅಲ್ಲಲ್ಲ ತನ್ನ ಸಲುವಾಗಿಯೂ ತಪ್ಪಿನ ಎಲ್ಲರ ಮನೆಯ ದೋಸೆಯ ತೂತಿನ ಹಾಗೆ
ಅಪ್ಪ ಅವ್ವ ಬಂಧು ಬಳಗ ಎಲ್ಲ ದೂರ ಸರಿದಿದ್ಸಾರೆ
ಕಾರಣವೇ ಇಲ್ಲದೆ ಪಾಪ ತಮ್ಮ ಪಾಡಿಗೆ ತಾವೆ
ಇವಳು ಬಂದ ಮೇಲೆ, , ಅಪವಾದದ ಮಾತಲ್ಲ
ಅಪರಾದವೇನಲ್ಲ ಎಲ್ಲರ ಮನೆಯದೂ ಇದೇ ಮಾತು
ಇವಳಿಗಿಲ್ಲ ವಿಶ್ರಾಂತಿ, ರಜೆ ! ಎಂತಹ ಧಾವಂತದಲೂ
ಸೂರ್ಯನಿಗೂ ಸವಾಲು ಹಾಕುವವಳು ,ಅವನ ಏಳುವ ಮೊದಲೆ ಎದ್ದು ಉರಿವ ಒಲೆಯ ಮುಂದೆ ಹಾಜರು
ಎಲ್ಕದಕೂ ಒಂದೆ ಮಾತು ಸಾಕಬೇಕಲ್ಲ ಈ ಮೂವರು
ಸದಾ ಕಾಲ ಶಾಂತ ಸುಮಿತ್ರೆ ಯನ್ನಬೇಡಿ ಸಾರುತ್ತಾಳೆ ಒಮ್ಮೊಮ್ಮೆ ಯುದ್ಧ, ಮೊದಲೇ ಸಂಧಿ ಮಾತಿಗಾಗಿ
ನಾನು ಸಿದ್ಧ . ಸೋಲು ಶರಣಾಗತಿ ಎಂಬುದು .
ಅವಳ ಪದಕೋಶದಲಿ ಯಾವಾಗಲೂ ನಿಷಿದ್ಧ
ಶರಧಿಗೆ ಷಟ್ಪದಿಯ ರೂಪ ಕೊಡದಿರು ಎಂದ ಕವಿಯ
ತಲೆಯಲಿ ಇದ್ದಿರಬೇಕು ಅವನ ಬಾಳ ಸಂಗಾತಿ
ಬರೆದು ಮುಗಿಸಲು ಸಾಧ್ಯವೇ ಎಂದಾದರೂ
ಎಂಬುದೇ ಅವನ ಮನಸಿನ ನಿಜ ಉಕ್ತಿ
ಅನ್ನಪೂರ್ಣೆ ಸದಾಪೂರ್ಣೆ ಇರಬೇಕು ನಿತ್ಯ ಶಾಂತ
ಅದಕ್ಕೆ ಎಂತಹ ಸ್ಥಿತಿಯಲ್ಲೂ ಕೊಡಬೇಕು ನಾ ಏಕಾಂತ
ನನ್ನ ಲೋಕಾಂತದಲೂ ತುಂಬಿಕೊಂಡಿರಬೇಕು ಇವಳ ಚಿತ್ರ
ಹಾಗೇ ನಡೆದಿದೆ ದಶಕ ದಶಕದ ಆಟದ ಪಾತ್ರ. ಇದುವೆ ಸೂತ್ರ
ಯಾ.ಮ. ಯಾಕೊಳ್ಳಿ
ಗೃಹಿಣಿ ಗೃಹಮ್ ಉಚ್ಛತೆ ಎಂಬ ಮಾತಿದೆ, ಗೃಹಿಣಿಯಿಂದಲೇ ಗೃಹಕ್ಕೆ ಕಳೆ, ಗೃಹಸ್ತನಿಗೆ ಬೆಲೆ. ಸುಖಿ ಸಂಸಾರದ ಸವಿಯನ್ನು ಸಲೀಸಾಗಿ ಕಾವ್ಯದಲ್ಲಿ ಮೂಡಿಸಿದ ಕವಿಶಕ್ತಿಗೆ ಅಭಿನಂದನೆಗಳು. ಹೃದಯ ಸತಿಗೆ ಹಿರಿಯ ಕವಿಗಳೆಲ್ಲ ತಲೆಬಾಗಿದ್ದಾರೆ.ಸತಿಗಾಗಿ ಮಿಡಿದ ತಮ್ಮ ಹೃದಯವೂ ಧನ್ಯ. ಮತ್ತೊಮ್ಮೆ ಅಭಿನಂದನೆಗಳು. ಕವಿಗೂ ಮತ್ತು ಕಾವ್ಯಕ್ಕೂ
Very meaningful poem