ತುಂಗಭದ್ರ
ಶ್ರೀಮತಿ ಎಂ.ಕೆ.ಇಂದಿರಾ
ಮನುಷ್ಯನಿಗೆ ಯಾವ ದುಃಖವೂ ಶಾಶ್ವತವಲ್ಲ! ಆಘಾತ ಸಿಡಿಲಿನಂತೆರಗಿದಾಗ ಅದನ್ನ ತಡೆದುಕೊಳ್ಳುವ ಶಕ್ತಿ ಒಬ್ಬೊಬ್ಬರಿಗೆ ಒಂದೊಂದು ರೀತಿ! ಅದು ಪ್ರತಿಯೊಬ್ಬರಿಗೂ ಅವರ ಮನೋಬಲದ ಮೇಲೆ ಅವಲಂಬಿತವಾಗಿರುತ್ತೆ! ಅದೇ ರೀತಿ ಸುಖವನ್ನ ಕೂಡ ಸ್ವೀಕರಿಸೋದು ಅಷ್ಟು ಸುಲಭವಲ್ಲ. ಎಲ್ಲವೂ ಮನೋಭಿಲಾಷೆಯಂತೆಯೇ ಇಡೇರಿ ಸಕಲ ಸಿರಿ ಸಂಪತ್ತು ದೊರೆತಾಗ ಸ್ಥಿತಪ್ರಜ್ಞೆಯಿಂದ ಸ್ವೀಕರಿಸೋದು, ಚಿತ್ತ ತಣ್ಣಗಿರಿಸೋದು ಅಷ್ಟು ಸುಲಭವಲ್ಲ!
ಕಷ್ಟ ಬಂದಾಗ, ಪ್ರಕೃತಿ ವೈಪರಿತ್ಯಗಳಿಂದಾಗಿ ಜೀವನವೇ ಡೋಲಾಯಮಾನವಾದಾಗ ಅದನ್ನ ಸ್ವೀಕರಿಸುವುದು ಹೇಳಿದಷ್ಟು ಸುಲಭವಂತೂ ಅಲ್ಲ! ಆದರೆ ಜರುಗುವ ಕೆಲ ಘಟನೆಗಳಿಗೆ ಮನಸ್ಸು ತೆರೆದುಕೊಂಡರೆ ಮತ್ತೆ ಜೀವನ ಹಸನಾಗಬಹುದು. ಕವಿದ ಕಾರ್ಮೋಡಗಳು ಸರಿದು ಶುಭ್ರ ನಿಲಾಗಸದಂತಾಗಬಹುದು ಜೀವನ. ಕಷ್ಟಕಾಲದಲ್ಲಿ ರವಷ್ಟು ಸಹನೆಯೇ ದೊಡ್ಡ ಕುತ್ತಿನಿಂದ ಪಾರುಮಾಡಬಹುದು. ಹಾಗೆಯೇ ಪ್ರೀತಿಸುವ ಸ್ನೇಹಿತರು – ಕುಟುಂಬವಿದ್ದರೆ ಎಂತಹುದೇ ಕಷ್ಟದ ಸಮಯದಲ್ಲೂ ಜೀವ ಉಳಿದು, ಅದು ಪುನರ್ಜನ್ಮವಾದೀತು!
ಇದಷ್ಟು ಅನಿಸಿದ್ದು, ೧೯೬೩ರಲ್ಲೇ ಬರೆದ ಪುಸ್ತಕ “ತುಂಗಭದ್ರ”, ಕನ್ನಡದ ಖ್ಯಾತ ಲೇಖಕಿ ಶ್ರೀಮತಿ ಎಂ.ಕೆ.ಇಂದಿರಾ ಅವರ ಮೊದಲ ಕಾದಂಬರಿಯನ್ನ ಓದಿದಾಗ! ಅಚನಕ್ಕಾಗಿ ಈ ಕಾದಂಬರಿ ಹಿಂದಿನ ಕಥೆಯನ್ನ ಯಾವುದೋ ಜಾಲತಾಣದಲ್ಲಿ ಓದಿದಾಗ ರೋಮಾಂಚನವೆನಿಸಿತು! ಪ್ರಕಾಶಕರು ಹಸ್ತಪ್ರತಿಯನ್ನು ಇಟ್ಪ ಬ್ಯಾಗು ಮುಂಬಯಿಯ ಮಾಯಾನಗರಿಯಲ್ಲಿ ಕಳೆದು ಬಹಳಷ್ಟು ಹಳಹಳಿಸುವಂತಾದಾಗ, ಬೇರೆ ಯಾವುದೇ ರೀತಿಯ ಪ್ರತಿಗಳು ಇಲ್ಲದೆ, ಪ್ರತಿ ಮಾಡಲೂ ಯಾವುದೇ ಅನುಕೂಲವಿಲ್ಲದಂತಹ ಕಾಲಘಟ್ಟದಲ್ಲಿ ಇಂದಿರಾರವರು ಎದೆಗುಂದದೆ ಕೇವಲ 15 ದಿನಗಳಲ್ಲಿ ಪುನಃ ಸಂಪೂರ್ಣ ಕಾದಂಬರಿಯನ್ನ ಬರೆದು ಕೊಡುತ್ತಾರೆ. ಪ್ರಕಟಣೆಯಾಗುತ್ತಿದ್ದಂತೆ ಅಪಾರ ಮೆಚ್ಚುಗೆ ಪಡೆಯುತ್ತೆ. ತಕ್ಷಣವೇ ತಡ ಮಾಡದೆ ಅಮೇಜಾನ್ ನಲ್ಲಿ ಖರೀದಿಸಿ ಒಂದೇ ಏಟಿಗೆ ಇಡೀ ರಾತ್ರಿ ಓದಿ ಮುಗಿಸಿದೆ!
ಕೃಷ್ಣ ವೇಣಿ, ಮುದ್ದುರಾಮ, ರಾಘು, ತುಂಗಾ-ಭದ್ರ ರೆಂಬ ಹುಟ್ಟು ಕುರುಡು ಅವಳಿಗಳು, ಶಂಭು, ಭಾಗಮ್ಮ, ಮಂದಾ, ದುಗ್ಗಾಭಟ್ಟರು, ನಾಗಾಭಟ್ಟರು, ಮೂಕಮ್ಮ, ಮಧುರಾ, ಶೇಷಾಚಾರರು, ತುಳಸಿ, ರಾಘುವಿನ ಅತ್ತೆ.. ಹೀಗೇ ಎಲ್ಲಾ ಪಾತ್ರಗಳೂ ಮನದಲ್ಲಿ ಅಚ್ಚಳಿಯದಂತಿವೆ!… ಸಂಬಂಧಗಳು, ಪ್ರೀತಿ ಇವೆಲ್ಲವೂ ಜೀವನದಲ್ಲಿ ಎಲ್ಲಕ್ಕಿಂತ ಮಿಗಿಲು! ನಾಗಾಲೋಟದಲ್ಲೋಡುವ ಕಾಲಘಟ್ಟದಲ್ಲಿರುವ ನಮಗೆ ಈ ಕಾದಂಬರಿ ಓದಿದಾಗ ಇವರಿಗೆಲ್ಲ ಜೀವನವನ್ನ ನಿಧಾನಗತಿಯಲ್ಲಿ ಅನುಭವಿಸೋ ತಾಳ್ಮೆ ಅದೆಷ್ಟಿದ್ದೀತು ಅನ್ನಿಸದಿರಲಾರದು!
60ರ ದಶಕದಲ್ಲಿ ಬರೆದ ಕಾದಂಬರಿ. ಓದಿಸಿಕೊಂಡು ಹೋಗುತ್ತೆಯೇ ಅನ್ನುವುದೇ ನನ್ನ ಅನುಮಾನವಾಗಿತ್ತು. ಅದರೆ ಆದು ಯಾವ ಕಾಲಘಟ್ಟದಲ್ಲಿಯಾದರೂ ಓದಿಸಿಕೊಳ್ಳುವಂತಹದು ಎಂದು ಓದಿ ಮುಗಿಸುವಾಗ ಕಣ್ಣಂಚಿನ ತೇವ ಸಾಬೀತು ಪಡಿಸಿತು!
ಹೆಣ್ಣಿಗೆ ಶಿಕ್ಷಣದ ಅಗತ್ಯವೇ ಇಲ್ಲವೆಂದುಕೊಂಡಿದ್ದ ಕಾಲಮಾನದಲ್ಲಿ, ಮಲೆನಾಡಿನ ಹಳ್ಳಿಗಾಡಿನ ಜೀವನ, ಅಲ್ಲಿನ ಪರಿಸರ, ಹೆಣ್ಣು-ಗಂಡಿನ ತುಮುಲಗಳು, ಆಗಿನ ಮೂಢತೆ ಮತ್ತು ಪ್ರಕೃತಿಯ ಚೆಲುವು ಕಣ್ಣಿಗೆ ಕಟ್ಪುವಂತೆ ಬರೆದಿದ್ದಾರೆ ಶ್ರೀಮತಿ ಇಂದಿರಾರವರು. ಖಂಡಿತವಾಗಿಯೂ ಓದಲೇಬೇಕಾದಂತಹ ಕಾದಂಬರಿ! “ಓಲ್ಡ್ ಇಸ್ ಗೋಲ್ಡ್” ಅನ್ನುವಂತಹ ಕೃತಿಯಿದು!
*****************************
ಚೈತ್ರಾ ಶಿವಯೋಗಿಮಠ