ನಾನು ಓದಿದ ಕಾದಂಬರಿ

ಹರಿಚಿತ್ತ ಸತ್ಯ

ವಸುಧೇಂದ್ರ

ಹರಿಚಿತ್ತ ಸತ್ಯ ವಸುಧೇಂದ್ರ ಅವರ ಮೊದಲ ಕಾದಂಬರಿ. ಅದರ ಮುದ್ರಣ ಪ್ರತಿ ಲಭ್ಯವಿಲ್ಲದೇ ಓದಲಾಗಿರಲಿಲ್ಲ. ಈ ದುರಿತ ಕಾಲದಲ್ಲಿ ರಿಯಾಯಿತಿ ದರದಲ್ಲಿ ಈ ಕೃತಿ ಲಭ್ಯವಿದೆ.
ಸರಳ, ಸುಂದರವಾದ ಸಾಮಾಜಿಕ ಕಾದಂಬರಿಯಿದು. ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.

ಬಳ್ಳಾರಿ, ಸಂಡೂರು ಮತ್ತು ಹೊಸಪೇಟೆಯ ಸಮೃದ್ಧ ಚಿತ್ರಣ ಈ ಕೃತಿಯಲ್ಲಿದೆ. ದಿ. ಸುಬ್ಬರಾಯರು ಮತ್ತು ರಂಗಮ್ಮನವರ ಏಕಮಾತ್ರ ಪುತ್ರಿ ಪದ್ದಿ. ಪದ್ದಿ ಸ್ವಲ್ಪ ಚೆಲ್ಲು ಸ್ವಭಾವದವಳು. ಅವಳನ್ನು ಬಳ್ಳಾರಿಯಿಂದ ಸಂಡೂರಿಗೆ, ವರನಾದ ರಾಘವೇಂದ್ರನಿಗೆ ತೋರಿಸಲು ಹೊರಟಿರುವ ಸನ್ನಿವೇಶದಿಂದ ಕತೆ ಆರಂಭವಾಗುತ್ತದೆ.

ವಕೀಲ ಬಿಂಧುಮಾದವರು ವಿಧವೆ ರಂಗಮ್ಮನವರ ಕುಟುಂಬಕ್ಕೆ ಆಶ್ರಯವಾಗಲು ಕಾರಣವಾಗುವ ಸನ್ನಿವೇಶ ತಮಾಶೆಯಾಗಿದೆ. ಆಚಾರ್ಯನಾಗಿ ಸಾಧನೆ ಮಾಡುವ ಕರಿಹನುಮನ ಹಿನ್ನೆಲೆ, ರಂಗಮ್ಮನವರೊಂದಿಗೆ ಆತ್ಮೀಯತೆ, ಪದ್ದಿಯ ಜಾತಕ ತೋರಿಸಿದಾಗ ಅವರು ಹೇಳುವ ಭವಿಷ್ಯ ಕಾದಂಬರಿಯಲ್ಲಿ ಕೊನೆಯಲ್ಲಿ ನಿಜವಾಗುವುದು ಕುತೂಹಲಕಾರಿಯಾಗಿದೆ.

ಎಲ್ಲೆಂದರಲ್ಲಿ ನಿದ್ದೆ ಮಾಡುವ ಶ್ರೀಪತಿ ಹನುಮಂತನ ಪ್ರತಿರೂಪವಾದ ಕೋತಿಗಳಿಗೆ ಕೈಮುಗಿಯುವ ಮನುಷ್ಯ. ಅವನ ಹೆಂಡತಿ ಸುಭದ್ರಮ್ಮನ ಗೋಟಾವಳಿ ನಗೆ ತರಿಸುತ್ತಿದೆ.
ಪದ್ಮಾವತಿ ಮತ್ತು ಅವಳ ಗೆಳತಿ ಪಂಕಜಳ ಸ್ನೇಹ, ಅವರ ಸಾಹಸಗಳು ಕಚಗುಳಿಯಿಡುತ್ತವೆ. ಪಂಕಜಳ ದುಬಾಯಿ ಗಂಡ ವಿಮಾನ ಯಾನದಲ್ಲಿ ಭಸ್ಮವಾಗಿದ್ದು ಕಾಡುತ್ತದೆ

.

ಮೋಟಾರು ರಾಮರಾಯರು, ವನಮಾಲಾಬಾಯಿ ಮತ್ತು ರಾಘವೇಂದ್ರನ ಪಾತ್ರಗಳು ಸಶಕ್ತವಾಗಿ ಮೂಡಿಬಂದಿವೆ. ವಧು ಪರೀಕ್ಷೆ ಮಾಡುವ ಗುಡೇಕೋಟಿ ಗೋವಿಂದಾಚಾರ್ಯ ಮನಸೆಳೆಯುತ್ತಾರೆ. ರಾಘುವನ್ನು ಪದ್ದಿಯೇ ತಿರಸ್ಕರಿಸಲು ಇರುವ ಕಾರಣ ಪದ್ದಿಯ ಗುಣಧರ್ಮವನ್ನು ಸರಿಯಾಗಿ ಬಿಂಬಿಸುತ್ತದೆ.

ಮುಂದೆ ರಾಘು ರಾಮಸಾಗರದ ಸುಧಾಳ ಜೊತೆ ಮದುವೆಯಾಗುತ್ತಾನೆ. ಪ್ರತಿಭಾ, ಪ್ರಮೀಳಾ ಮತ್ತು ಪ್ರಕಾಶನ ಜನನ ಮತ್ತು ಪ್ರಕಾಶನ ಅಂಧತ್ವ ಗೊತ್ತಾದಾಗ ನಮಗೂ ಸಂಕಟವಾಗುತ್ತದೆ. ಆದರೆ ಪ್ರಕಾಶನ ಚುರುಕುತನ ಅದನ್ನು ಮರೆಸುತ್ತದೆ.

ಸಿರೇಕೊಳ್ಳದ ಆಚಾರ್ಯರು ಮತ್ತು ಅವರು ಸೂಚಿಸುವ ಡಾ. ಥಾಮಸ್ ರಿಂದ ಪದ್ದಿಯ ಮನೋರೋಗ ವಾಸಿಯಾಗುತ್ತದೆ.ಆನೆಗೊಂದಿ ದ್ವೀಪದ ನವವೃಂದಾವನದಲ್ಲಿ ಒಂದು ದುರಂತ ಅಂತ್ಯದೊಂದಿಗೆ ಕಾದಂಬರಿ ಮುಗಿಯುತ್ತದೆ. ಉಪಸಂಹಾರದಲ್ಲಿ ನಾವು ಊಹಿಸಿದ ತಿರುವಿನೊಂದಿಗೆ ಕತೆ ಅಂತ್ಯಗೊಳ್ಳುತ್ತದೆ.

ಹರಿಚಿತ್ತ ಸತ್ಯ, ಹಲವು ಕಥಾಸಂಕಲನಗಳನ್ನು ಓದಿ ಅನಂತರ ವಸುಧೇಂದ್ರರ ತೇಜೋ ತುಂಗಭದ್ರಾ ಕಾದಂಬರಿ ಓದಿದರೆ ಅವರ ಸಾಹಿತ್ಯದ ಹಾದಿಯ ಅರಿವು ನಮಗಾಗಬಹುದು. ಒಮ್ಮೆ ಓದಬೇಕಾದ ಕೃತಿಯಿದು.
**

ಅಜಿತ್ ಹರೀಶಿ

  • ಡಾ.ಅಜಿತ್ ಹರೀಶಿ

Leave a Reply

Back To Top