ಅಶ್ವತ್ಥಾಮನ್
ಜೋಗಿ
ನನ್ನ ಪ್ರಕಾರ ಒಂದು ಬರವಣಿಗೆ ಅಥವಾ ಪುಸ್ತಕ “ಚೆನ್ನಾಗಿದೆ” ಎನ್ನುವುದಕ್ಕೆ ಬರವಣಿಗೆಯ ಪ್ರಪಂಚದಲ್ಲಿ ಕ್ರಾಂತಿಯನ್ನು ಉಂಟುಮಾಡುವಂತಹ ಅಥವಾ ಇತಿಹಾಸವನ್ನು ಸೃಷ್ಟಿ ಮಾಡುವಂತಹ ಯಾವುದೋ ಕಾರಣದ ಅಗತ್ಯವಿಲ್ಲ. ನಾವು ದಿನಸಿ ಅಂಗಡಿಯಲ್ಲೋ, ತರಕಾರಿ ಕೊಳ್ಳುವಾಗಲೋ ಅಪರೂಪಕ್ಕೆ ಎದುರಾಗುವ ಮುಖವೊಂದು ಅಥವಾ ಬಿಡುವಾದಾಗ ನಮ್ಮನ್ನ ನಾವು ವಿಮರ್ಶಿಸಿಕೊಂಡಾಗ ಸಿಗುವ ಪಾತ್ರವೊಂದು ಕತೆಯೋ ಕಾದಂಬರಿಯೋ ಆಗಿ ನಮ್ಮೆದುರು ನಿಂತಾಗ ಸಿಗುವ ಸಣ್ಣದೊಂದು ಆಶ್ಚರ್ಯಚಕಿತ ಸಂತೋಷವಿದೆಯಲ್ಲ ಅದು ಒಂದು ಓದಿಗೆ ಸಿಗಬೇಕಾದ ಸಕಲ ಸಮಾಧಾನವನ್ನೂ ಒದಗಿಸಬಲ್ಲದು. ಅಂತಹ ಪುಸ್ತಕಗಳಲ್ಲೊಂದು ಜೋಗಿಯವರ ಕಾದಂಬರಿ “ಅಶ್ವತ್ಥಾಮನ್”.
ಕಾದಂಬರಿಯ ಹೆಸರೇ ಹೇಳುವಂತೆ ಮೇಲ್ನೋಟಕ್ಕೆ ಇದೊಂದು ವ್ಯಕ್ತೀಕೇಂದ್ರಿತ ಕೃತಿ. ಅಶ್ವತ್ಥಾಮ ಎಂಬ ಜಿಗಟು ವ್ಯಕ್ತಿತ್ವವೊಂದು ಅಶ್ವತ್ಥಾಮನ್ ಎಂಬ ಹೆಸರಿನ ಜನಪ್ರಿಯ ನಟನಾಗಿ, ನಟನೆಯನ್ನೂ ಜನಪ್ರಿಯತೆಯನ್ನೂ ಅಹಂಕಾರವನ್ನಾಗಿಸಿಕೊಂಡು, ಅಹಂಕಾರವನ್ನೇ ಶಕ್ತಿಯಾಗಿಸಿಕೊಂಡು ಬದುಕುವ ಪಾತ್ರ ನಮಗೇ ಅರಿವಿಲ್ಲದಂತೆ ನಮ್ಮದಾಗುತ್ತ ಹೋಗುವುದು ಈ ಕೃತಿಯ ಅಹಂಕಾರ. ಈ ಪಾತ್ರವನ್ನು ಪೋಷಿಸಲೂ ಆಗದೇ, ದ್ವೇಷಿಸಲೂ ಆಗದೇ, ಕೊನೆಗೆ ನಮ್ಮೊಳಗೆಲ್ಲೋ ಅಡಗಿ ಕುಳಿತಿರುವ ಅಶ್ವತ್ಥಾಮನನ್ನು ಕಾದಂಬರಿಯುದ್ದಕ್ಕೂ ಅನುಭವಿಸುತ್ತ ಹೋಗುತ್ತೇವೆ.
ಪಾರ್ಶ್ವವಾಯುವಿಗೆ ಬಲಿಯಾದ ಅಶ್ವತ್ಥಾಮನ್ ತನ್ನ ಆತ್ಮಚರಿತ್ರೆ ಬರೆಸಬೇಕೆಂಬ ಆಶಯದಲ್ಲಿ ಕೊಂಚ ಸಿನಿಮೀಯವಾಗಿ ಆರಂಭವಾಗುವ ಈ ಕಾದಂಬರಿ, “ಎದುರಾಳಿ ಸೋತ ಮೇಲೆ ನಾನು ಯಾರ ಜೊತೆಗೆ ಆಡಲಿ, ನನ್ನ ಆಟ ಮುಗಿಯಿತು” ಎನ್ನುವ ಮಾತಿನಿಂದ ಅಲ್ಲೊಂದು ತಾತ್ವಿಕ ವಾತಾವರಣವನ್ನು ಸೃಷ್ಟಿ ಮಾಡಿ, ಓದುಗ ಅಶ್ವತ್ಥಾಮನೊಂದಿಗೆ ಮುಖಾಮುಖಿಯಾಗತೊಡಗುತ್ತಾನೆ. ಎದುರಾಗುವ ಪಾತ್ರಗಳಲ್ಲಿ, ದೃಶ್ಯಗಳಲ್ಲಿ ಅಶ್ವತ್ಥಾಮನಿದ್ದಾನೋ, ಅಶ್ವತ್ಥಾಮನ್ ಇರುತ್ತಾನೋ ಅಥವಾ ನಮ್ಮೊಳಗಿರುವ ನಾವು ಒಬ್ಬರಿಗೊಬ್ಬರು ಎದುರಾಗಿ ಕಣ್ಣು ತಪ್ಪಿಸುತ್ತೇವೋ ಎನ್ನುವುದು ನಮ್ಮ ಅನುಭವಕ್ಕೆ ಮಾತ್ರ ದಕ್ಕುವ ವಿಷಯ. “ಮಾತು” ಇಲ್ಲಿ ಕೇವಲ ಮಾತಾಗದೇ, ಕಳೆದುಹೋಗದೇ ಅನುಭಾವವಾಗಿ ಜೀವ ತಳೆದಿದೆ; ಸರಳವಾಗಿ, ಕೆಲವೊಮ್ಮೆ ಸಿನಿಮೀಯವಾಗಿ ತಾತ್ವಿಕವಾದ ನೆಲೆಗಟ್ಟಿನಲ್ಲಿ “ಕಾಲ”ವನ್ನು ಕಟ್ಟಿಕೊಟ್ಟಿದೆ.
ಅಶ್ವತ್ಥಾಮನ ಪಾತ್ರ ಅನಾವರಣಗೊಳ್ಳುತ್ತ ಹೋಗುವುದು ಅವನ ಅಹಂಕಾರವನ್ನು ಜೀವಂತವಾಗಿರಿಸುವ ಹೆಣ್ಣುಪಾತ್ರಗಳ ಮೂಲಕ. ದೀಪಾವಳಿಯ ದಿನ ಎಣ್ಣೆ ಹಚ್ಚಲು ಬಂದ ಸುಲೋಚನಾ ತನ್ನನ್ನು ಸಾಯಿಸಲೇ ಬಂದವಳೆಂದು ಕಣ್ಣುಮುಚ್ಚಿ, ಹಸಿದ ಗಂಡಸಿನ ಪಾತ್ರವನ್ನು ಎಷ್ಟು ಚೆನ್ನಾಗಿ ನಟಿಸಿದೆ ಎನ್ನುವ ನಟ, ನಮ್ಮ ಕಣ್ಣೆದುರಿಗೊಂದು ಹೊಸ ಪ್ರಪಂಚವನ್ನು ತೆರೆದಿಡುವಲ್ಲಿ ಯಶಸ್ವಿಯಾಗುತ್ತಾನೆ. ಪ್ರತೀ ಕ್ಷಣದ ಬದುಕು ಒಂದಿಲ್ಲೊಂದು ಬಗೆಯ ನಟನೆಯೇ ಆದಾಗ, ಕಣ್ಣುಮುಚ್ಚಿ ನಾವು ನಾವಾಗಿ ನಟಿಸುವುದು ಸರಳವೆನ್ನುವಂಥ ವಿಲಕ್ಷಣ ಸತ್ಯಗಳೆಲ್ಲ ನಮ್ಮ ಸೈದ್ಧಾಂತಿಕ ನಿಲುವುಗಳನ್ನು ಪ್ರಶ್ನಿಸದೇ ಬಿಡುವುದಿಲ್ಲ.
ಮೊದಲನೇ ಹೆಂಡತಿ ಶುಭಾಂಗಿನಿ ತನ್ನ ಪಾಲಿನ ದೇವತೆ ಎಂದು ಗೌರವಿಸುವ ಅಶ್ವತ್ಥಾಮ, ಎರಡನೇ ಹೆಂಡತಿ ಸರೋಜಿನಿ ತನ್ನನ್ನು ಪಳಗಿಸಲು ಯತ್ನಿಸುತ್ತಿದ್ದಾಳೆ ಎನ್ನುವ ಕಾರಣಕ್ಕೆ ಬಿಡುಗಡೆ ಬಯಸಿ, ದಾಂಪತ್ಯದ ನೀತಿ ನಿಲುವುಗಳನ್ನೇ ಇಕ್ಕಟ್ಟಿಗೆ ಸಿಲುಕಿಸುವ ಹುಚ್ಚು ಮನಸ್ಥಿತಿಯಂತೆ ಭಾಸವಾಗಿಯೂ ಪರಿಹಾರವಿಲ್ಲದ ಗೊಂದಲದಂತೆ ಮನಸ್ಸಲ್ಲಿ ಉಳಿದುಬಿಡುತ್ತಾನೆ. “ನಿಜವಾದ ನೋವು ಕೊಡುವುದಕ್ಕೂ ಶಕ್ತಿ ಬೇಕು; ನನ್ನಲ್ಲಿ ನೋವಿಲ್ಲದೇ ಹೋದರೆ ನಾನು ಮತ್ತೊಬ್ಬರಿಗೆ ಎಲ್ಲಿಂದ ಕೊಡ್ಲೊ” ಎನ್ನುವಂತಹ ಅಸಹಜ ಮಾತುಗಳು ಸತ್ಯಾಸತ್ಯತೆಯ ವಿಮರ್ಶೆಗಳನ್ನೆಲ್ಲ ಮೀರಿ ನೆನಪಲ್ಲಿ ಉಳಿದುಕೊಳ್ಳುತ್ತವೆ.
“ನಾನು ಅವಳಿಂದ ಬಿಡಿಸಿಕೊಳ್ಳಲು ಹವಣಿಸಲಿಲ್ಲ, ಅವಳಾಗಿಯೇ ನನ್ನಿಂದ ದೂರ ಹೋಗುವಂತೆ ಮಾಡುವ ಉಪಾಯಗಳನ್ನು ಹುಡುಕುತ್ತಿದ್ದೆ” ಎಂದು ಮೂರನೇ ಹೆಂಡತಿಯಿಂದಲೂ ಬಿಡುಗಡೆಗೆ ತವಕಿಸುವ ಅಶ್ವತ್ಥಾಮ ವಿಕೃತ ಮನಸ್ಸಿನ ಪ್ರತಿರೂಪವಾಗಿ ಹೊರನೋಟಕ್ಕೆ ಭಾಸವಾದರೂ , ನಟಿಸುತ್ತಲೇ ನೈಜವಾಗುವ ಅಸಹಾಯಕ ಅಲೆದಾಟದ ಮನುಷ್ಯನ ಸಹಜ ಮನಸ್ಥಿತಿಯ ತಲ್ಲಣಗಳಾಗಿ ನಮ್ಮೊಳಗೊಂದಾಗುತ್ತಾನೆ. “ದುರದೃಷ್ಟವಶಾತ್ ನನ್ನ ಸ್ಥಾಯೀಭಾವ ನಟನೆ” ಎನ್ನುವಂತಹ ಹೇಳಿಕೆಗಳು ಕೇವಲ ಹೇಳಿಕೆಗಳಾಗದೇ, ಓದುಗನೊಬ್ಬನ ಹಳವಳಿಕೆಗಳನ್ನು ಬರೆಯುವವ ಹೇಳುತ್ತಾ ಹೋದಂತೆ ಎದೆಗಿಳಿಯುತ್ತವೆ.
ಪಾತ್ರಗಳ ಸೃಷ್ಟಿಯ ಜೊತೆಗೆ ಭಾಷಪ್ರಯೋಗ ಮತ್ತು ನಿರೂಪಣಾ ವಿಧಾನವೂ ಕೂಡಾ ಈ ಕೃತಿಯನ್ನು ಸುಂದರವಾಗಿಸಿರುವುದರಲ್ಲಿ ಸಂಶಯವಿಲ್ಲ. ಯಾವುದೇ ಆಡಂಬರವಿಲ್ಲದ, ಅನಗತ್ಯ ಅಲಂಕಾರಗಳಿಲ್ಲದ ಶಬ್ದಗಳ ಬಳಕೆ ಹಾಗೂ ಪಾತ್ರಕ್ಕೆ ತಕ್ಕ ಭಾಷಾಪ್ರಯೋಗ ಈ ಕೃತಿಯ ಆಕರ್ಷಣೆ. “ನನ್ನ ಅಹಂಕಾರವೇ ನನ್ನ ಶಕ್ತಿ” ಎನ್ನುವ ಮಾತು ಅದನ್ನು ಆಡಿದವನ ಸಂಪೂರ್ಣ ವ್ಯಕ್ತಿತ್ವದ ಪರಿಚಯ ಮಾಡಿಕೊಡುವಲ್ಲಿ ಯಶಸ್ವಿಯಾಗುತ್ತದೆ. ಹಾಗೆಯೇ ನಿರೂಪಣೆಯಲ್ಲೂ ಲೇಖಕರೇ ಹೇಳುವಂತೆ ಸಿದ್ಧಪ್ರಕಾರಗಳಿಂದ ಆಚೆ ನಿಲ್ಲುವ ಈ ಕೃತಿ “ಮಾತುಕತೆ”ಯ ಮಾದರಿಯಲ್ಲಿದ್ದೂ ವಾಚಾಳಿಯಾಗದೇ ವಿಶಿಷ್ಟವಾಗುಳಿಯುತ್ತದೆ. “ಇದನ್ನು ಕಬೀರ ಬರೆದನೋ ನಾನೇ ಬರೆದೇನೋ ನೆನಪಿಲ್ಲ. ನಾನು ಕಬೀರನಾದಾಗ ಬರೆದಿರಬಹುದೇನೋ?” ಎನ್ನುವ ಮಾತಿನಲ್ಲಿ ಅಸ್ಪಷ್ಟತೆಯೇ ಪಾತ್ರಸೃಷ್ಟಿಯ ಸೂಕ್ಷ್ಮತೆಗೆ ಒದಗಿಬಂದಿರುವುದನ್ನು ಅಲ್ಲಗಳೆಯುವಂತಿಲ್ಲ. ಹೀಗೆ ಉದಾಹರಿಸುತ್ತ ಹೋಗುವಂತಹ ಸಾಕಷ್ಟು ಭಾಷಪ್ರಯೋಗ ಹಾಗೂ ವಿಶಿಷ್ಟ ನಿರೂಪಣೆ ಕಾದಂಬರಿಯುದ್ದಕ್ಕೂ ಕಾಣಬಹುದು. ಕಾದಂಬರಿಯ ಅಂತ್ಯ ನಾಟಕೀಯವೆನಿಸಿದರೂ ಕೃತಿಯ ಆಶಯವನ್ನು ಹಾನಿ ಮಾಡಿಲ್ಲ.
ಹೀಗೆ ತಾನೇ ಪಾತ್ರವಾಗುತ್ತ, ಪಾತ್ರದುದ್ದಕ್ಕೂ ನಟಿಸುತ್ತಾ, ಓದುಗನನ್ನು ನಟನಾಗಿಸುತ್ತ ತಳಮಳಕ್ಕೆ ತಳ್ಳುವ ಅಶ್ವತ್ಥಾಮ ನಟನಾಗಿ, ಪಾತ್ರವಾಗಿ, ನಟನೆಯಾಗಿ, ಓದುಗನ ನೆನಪಲ್ಲಿ ಉಳಿಯುವ ಚಿತ್ರವಾಗಿ ನಿಲ್ಲುತ್ತಾನೆ
******************************
ಅಂಜನಾ ಹೆಗಡೆ
ಉತ್ತಮ ವಿಮರ್ಶೆ