ಅಂಕಣ ಸಂಗಾತಿ
ಒಲವ ಧಾರೆ.
ರಮೇಶ ಸಿ ಬನ್ನಿಕೊಪ್ಪ
ಹಕ್ಕು ಚಲಾಯಿಸಿ :
ಪ್ರಜಾಪ್ರಭುತ್ವ ಉಳಿಸೋಣ..
ಹಕ್ಕು ಚಲಾಯಿಸಿ : ಪ್ರಜಾಪ್ರಭುತ್ವ ಉಳಿಸೋಣ..
ಅವನು ಮತ ಹಾಕದೆ, ಜನ ಪ್ರತಿನಿಧಿಯನ್ನು ಪ್ರಶ್ನಿಸುವದು ಸೂಕ್ತವೇ…?
ತನಗೆ ಬೇಕಾದ ಜನ ಪ್ರತಿನಿಧಿಯನ್ನು ಆಯ್ಕೆ ಮಾಡಿದ್ದಾನೆ ಮತದಾರ ; ಆದರೆ ಆತ ಅಭಿವೃದ್ಧಿ ಕೆಲಸ ಮಾಡದಿರುವುದನ್ನು ಪ್ರಶ್ನಿಸುತ್ತಾನೆ…!!
ಎರಡು ಸನ್ನಿವೇಶಗಳಲ್ಲಿ ಜರುಗುವ ಘಟನೆಗಳು ಇಂದಿನ ಚುನಾವಣಾ ಕಾವಿನಲ್ಲಿರುವ ಸಂದರ್ಭದಲ್ಲಿ ಸಹಜವೂ ಹೌದು. ಆದರೆ ಈ ದೇಶದ ಜವಾಬ್ದಾರಿಯುತ ನಾಗರಿಕರಾದ ನಾವುಗಳು ಪ್ರಜಾ ಪ್ರತಿನಿಧಿಯನ್ನು ಪ್ರಶ್ನಿಸುವ ಹಕ್ಕನ್ನು ಪಡೆದುಕೊಳ್ಳುವುದು ಆತನಿಗೆ ಮತವನ್ನು ಚಲಾಯಿಸಿದಾಗ ಮಾತ್ರ ಎನ್ನುವುದು ನೆನಪಿರಬೇಕಾದ ಸಂಗತಿ.
ಪ್ರಜಾಪ್ರಭುತ್ವದ ಮೌಲ್ಯಗಳು ಉಳಿಯಬೇಕಾದರೆ ಅವರವರ ಪಾಲಿನ ಕರ್ತವ್ಯವನ್ನು ಮಾಡಬೇಕಾಗಿರುವುದು ಪ್ರಜಾಪ್ರಭುತ್ವದ ಲಕ್ಷಣ..! ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಈ ಸಂದರ್ಭದಲ್ಲಿ ಆಡಳಿತ ವರ್ಗವು ಐಎಎಸ್ ಅಧಿಕಾರಿಗಳಿಂದ ಹಿಡಿದು ಕಟ್ಟ ಕಡೆಯ ನೌಕರರು ಪ್ರಜಾಪ್ರಭುತ್ವವನ್ನು ಸದೃಢಗೊಳಿಸಲು ಸದಾ ಶ್ರಮಿಸುತ್ತಿರುತ್ತಾರೆ. ಹಾಗಾದರೆ
ಡಾ. ಬಿ ಆರ್ ಅಂಬೇಡ್ಕರ್ ಅವರ ಹೇಳುವ ಪ್ರಕಾರ,
“ಪ್ರಜಾಪ್ರಭುತ್ವವು ನಮ್ಮನ್ನು ನಾವೇ ಆಡಳಿತಕ್ಕೆ ಒಳಪಡಿಸಿಕೊಳ್ಳುವ ಗುರುತುರವಾದ ಜವಾಬ್ದಾರಿಯುಳ್ಳ ಒಂದು ವ್ಯವಸ್ಥೆ. ಇದಕ್ಕಾಗಿ ಪ್ರಜಾ ಸರ್ಕಾರದ ಮೌಲ್ಯಗಳಾದ ಜಾತ್ಯತೀತ ಸಮಾಜವಾದಿ ಪ್ರಜಾಸತ್ತಾತ್ಮಕ ಗಣರಾಜ್ಯದ ಕನಸು ನನಸಾಗಬೇಕೆಂದರೆ ಚುನಾವಣೆಯಲ್ಲಿ ಸಕ್ರಿಯವಾಗಿ ಎಲ್ಲರೂ ಪಾಲ್ಗೊಳ್ಳುವುದು ಮುಖ್ಯ ” ಎನ್ನುತ್ತಾರೆ.
ಹಾಗಾಗಿ ಬಹುತ್ವ ಭಾರತದಂತ ದೇಶದಲ್ಲಿ ಸಾಂಪ್ರದಾಯಿಕ ದೇಶಗಳಿಗಿಂತಲೂ ನಮ್ಮ ದೇಶ ತುಂಬಾ ವಿಭಿನ್ನ ಇಲ್ಲಿ ಹಲವಾರು ಜಾತಿ, ಧರ್ಮ, ಪಂಥ, ಪಂಗಡ, ಭಾಷೆ ಇರುವುದರಿಂದ ಇಲ್ಲಿಯ ಜನಪ್ರತಿನಿಧಿಗಳನ್ನು ಆರಿಸುವುದು ಒಂದು ಬಹುದೊಡ್ಡ ಸವಾಲು..! ಈ ಸವಾಲಿಗೆ ಉತ್ತರವೆನ್ನುವಂತೆ ಇಲ್ಲಿಯ ಪ್ರಜೆಗಳು ಇವೆಲ್ಲವನ್ನು ಮೀರಿ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕಾಗಿದೆ. ಇದರಿಂದಾಗಿ ಪ್ರತಿಯೊಬ್ಬರು ಮತದಾನ ಮಾಡಲೇಬೇಕು.
ಆಡಳಿತದ ಒಂದು ಭಾಗವಾಗಬೇಕೆಂದು ಚುನಾವಣೆಗೆ ನಿಂತಿರುವ ಪ್ರತಿಯೊಬ್ಬ ಅಭ್ಯರ್ಥಿಯು ನೀಡುವ ಯಾವುದೇ ಆಮಿಷಗಳಿಗೆ ಪ್ರಜೆಗಳು ಒಳಗಾಗಬಾರದು. ಜಾತಿ, ಧರ್ಮ, ಭಾಷೆ ಎನ್ನುವ ಅಂಶವು ಕೂಡ ತುಂಬಾ ವಿಷಕಾರಿಯಾದದು. ಹಾಗಾದರೆ ಉತ್ತಮ ನಮ್ಮ ಪ್ರತಿನಿಧಿಗಳನ್ನು ಆರಿಸಬೇಕಾದರೆ ಮೊದಲು ನಾವು ಮಾಡಬೇಕಾಗಿರುವುದು ಕಡ್ಡಾಯ ಮತದಾನ. ಯಾವುದೋ ಕೆಲಸದ ಒತ್ತಡದಲ್ಲಿರುವ ನಾವುಗಳು ಮತದಾನ ಮಾಡುವುದನ್ನು ನಿರ್ಲಕ್ಷಿಸುತ್ತೇವೆ. ಒಬ್ಬ ಉತ್ತಮ ಪ್ರತಿನಿಧಿಗಳನ್ನು ಆರಿಸುವುದರಲ್ಲಿಯೂ ನಮ್ಮ ಪಾತ್ರ ಇದೆ ಎನ್ನುವ ಹೆಮ್ಮೆಯಿಂದ ದೂರ ಉಳಿಯುತ್ತೇವೆ.
ಅಂತಹ ತಪ್ಪು ಆಗಬಾರದೆಂದು ಆಡಳಿತ ವರ್ಗವು ಜಾಗೃತಿಯ ಶಿಬಿರಗಳನ್ನು, ಜಾಗೃತ ಗೀತೆಗಳನ್ನು, ಸಾಧ್ಯವಾದಷ್ಟು ಅಲ್ಲಲ್ಲಿ ಜಾಗೃತ ಕರಪತ್ರಗಳನ್ನು, ಹಂಚಿ ಮತದಾರರಿಗೆ ಸಲಹೆಗಳನ್ನು ನೀಡಿದರೂ ನಿರ್ಲಕ್ಷ್ಯ ಮಾಡುವ ಮತದಾರರ ಗುಂಪಿರುವುದು ಅಷ್ಟೇ ಸತ್ಯ. ಅಕ್ಷರ ಕಲಿತ, ಉದ್ಯೋಗಸ್ಥ ಜನರೇ ಮತದಾನದಿಂದ ಹೆಚ್ಚು ವಂಚಿತರಾಗುತ್ತಿರುವುದು ಅದರಲ್ಲಿಯೂ ವಿಶೇಷವಾಗಿ ನಗರ ಪ್ರದೇಶದಲ್ಲಿ ಮತದಾನದ ಪ್ರಮಾಣ ಕಡಿಮೆಯಾಗುತ್ತಿರುವುದು ಕಳವಳಕಾರಿಯಾದ ಸಂಗತಿ. ಇದರಿಂದಾಗಿ ಒಂದು ಉತ್ತಮ ಆಡಳಿತ ವ್ಯವಸ್ಥೆಯನ್ನು ಕಟ್ಟುವಲ್ಲಿ ನಾವು ಹಿನ್ನಡೆಯನ್ನು ಅನುಭವಿಸುತ್ತೇವೆ ಎನ್ನುವುದನ್ನು ಮರೆಯುವಂತಿಲ್ಲ.
ಅಂದರೆ ಉತ್ತಮವಾ ಸರ್ಕಾರವು ಉತ್ತಮವಾದ ಅಭಿವೃದ್ಧಿ ಕೆಲಸವನ್ನು ಮಾಡುವುದು ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ನಾವು ಮತದಾನ ಮಾಡಬೇಕು. ಯಾರು ದೇಶ, ನಾಡಿಗಾಗಿ ಜವಾಬ್ದಾರಿಯುತವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾರೋ ಅವರನ್ನು ಆರಿಸಿದಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ಹೊಸ ಅರ್ಥ ಬರುತ್ತದೆ.
ಮತದಾನ ಮಾಡುವುದಕ್ಕಿಂತ ಮುಂಚಿತವಾಗಿ “ನಮ್ಮ ಮತವು ಮಾರಾಟಕ್ಕಿಲ್ಲ” ಎನ್ನುವ ಘೋಷಣೆಯನ್ನು ಎಚ್ಚರಿಕೆಯಿಂದ ನಮ್ಮ ಎದೆಯೊಳಗಿರಬೇಕಾಗಿದೆ.
ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಲು ಕೇಂದ್ರ ಚುನಾವಣಾ ಆಯೋಗ ಅನೇಕ ಕ್ರಮಗಳನ್ನು ಕೈಗೊಂಡಿರುವುದು ನಮ್ಮೆಲ್ಲರಿಗೂ ಗೊತ್ತಿರುವ ಸಂಗತಿ. ಕೇವಲ ಚುನಾವಣಾ ಆಯೋಗ ಲ, ಸರ್ಕಾರಗಳು, ಆಡಳಿತ ವ್ಯವಸ್ಥೆ ಪಾಲ್ಗೊಂಡು ಸಂಪೂರ್ಣವಾಗಿ ಬದಲಾವಣೆ ಮಾಡುತ್ತೇನೆ ಎನ್ನುವುದು ಬಾಲಿಸತನದ ಮಾತಾದೀತು. ಇದರಲ್ಲಿ ಸಾರ್ವಜನಿಕರು, ಪಕ್ಷಗಳು, ಯುವಕರು, ಸಕ್ರಿಯವಾಗಿ ಕೈಜೋಡಿಸಿದಾಗ ವ್ಯವಸ್ಥೆಯನ್ನು ಬದಲಾವಣೆ ಮಾಡಲು ಸಾಧ್ಯ. ಮತದಾರರ ಪಟ್ಟಿಗೆ ಹೆಸರು ಸೇರಿಸುವುದರಿಂದ ಹಿಡಿದು ಫಲಿತಾಂಶ ಘೋಷಣೆ ಮಾಡುವವರೆಗೂ ಚುನಾವಣಾ ಆಯೋಗದ ಗುರುತರ ವಾದ ಕರ್ತವ್ಯ ಮೆಚ್ಚುವಂತಹದ್ದು.
ಇಲ್ಲಿಯ ಪೊಲೀಸ್ ವ್ಯವಸ್ಥೆ, ಸಿಬ್ಬಂದಿ ವರ್ಗದ ನೇಮಕಾತಿಯ ವ್ಯವಸ್ಥೆ, ಪ್ರತಿಯೊಂದು ರಲ್ಲಿಯೂ ಪಾರದರ್ಶಕ ಹಾಗೂ ನಿಷ್ಕಳಂಕವಾದ ಕರ್ತವ್ಯವನ್ನು ಮಾಡುತ್ತಲೇ ಇದೆ. ಒಂದು ಉತ್ತಮವಾದ ಸರ್ಕಾರ ರಚನೆಯಲ್ಲಿ ಚುನಾವಣಾ ಆಯೋಗ ಕೆಲಸ ಮಾಡುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಈ ಕೇಂದ್ರ ಚುನಾವಣಾ ಆಯೋಗದ ಸೂಚನೆಗಳನ್ನು ನಾವು ಚಾಚು ತಪ್ಪದೇ ಪಾಲಿಸುತ್ತಾ, ಸಮಾಜದಲ್ಲಿರುವ ಪ್ರತಿಯೊಬ್ಬರೂ ಅಂದರೆ 18 ವರ್ಷ ತುಂಬಿದವರೆಲ್ಲರೂ ಮತದಾರರ ಪಟ್ಟಿಗೆ ಹೆಸರನ್ನು ಸೇರಿಸುವುದರ ಮೂಲಕ ನಮ್ಮ ದೇಶದ ನಾಗರಿಕತ್ವವನ್ನು ಪಡೆದುಕೊಂಡು, ನಮ್ಮ ಪ್ರತಿನಿಧಿಗಳನ್ನು ನಾವೇ ಆರಿಸಿ ಹೊಸ ಆಡಳಿತಕ್ಕೆ ಚುರುಕನ್ನು ಮೂಡಿಸಬೇಕಾಗಿದೆ.
ಅಮೆರಿಕದ ಶ್ರೇಷ್ಠ ರಾಜಕೀಯ ತಜ್ಞ ಅಬ್ರಾಹಂ ಲಿಂಕನ್ ಅವರವರು,
“ದೇಶದ ನನ್ನಂತಹ ಒಬ್ಬ ಕಟ್ಟಕಡೆಯ ವ್ಯಕ್ತಿಯೂ ಕೂಡ ಈ ದೇಶದ ಉನ್ನತ ಸ್ಥಾನವನ್ನು ಏರುವುದು ಅದು ಪ್ರಜಾಪ್ರಭುತ್ವದ ಉನ್ನತವಾಗಿರುವ ಗುರಿ, ಅದೇ ಪ್ರಜಾಪ್ರಭುತ್ವದ ಸುಂದರವೂ ಹೌದು..” ಎಂದು ನುಡಿಯುತ್ತಾರೆ.
ಪ್ರಜಾಪ್ರಭುತ್ವದಲ್ಲಿ ಯಾವುದೇ ಆಮಿಷಗಳಿಗೆ ಬೆಲೆ ಇಲ್ಲ. ಪ್ರಜೆಗಳ ಮಾತೇ ಅಂತಿಮ ಎನ್ನುವುದನ್ನು ನಾವು ತೋರಿಸಬೇಕಾಗಿದೆ. ಹಾಗಾಗಿ ನಾವೆಲ್ಲರೂ ಕಡ್ಡಾಯ ಮತದಾನ ಮಾಡುವುದರ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾಗಿದೆ. ಈ ನಾಡಿನ ಅಭಿವೃದ್ಧಿಗೆ ಹೊಸ ಮನ್ವಂತರವನ್ನು ಹಾಡಬೇಕಾಗಿದೆ. ನಾವೆಲ್ಲರೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ತೋರಿಸೋಣವೆಂದು ಹಾರೈಸುತ್ತೇನೆ.
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಲೇಖನಗಳ ಪ್ರಕಟ