ಒಂದು ಕವಿತೆ
ಅಮೃತಾ ಮೆಹಂದಳೆ
ಈಗ ನಿನ್ನ ವಿರಾಮ ಸಮಯವಲ್ಲವೇ?
ಬಿಡುವಿನಲ್ಲಿ ನೆನೆಯುತ್ತಿರುವೆಯಾ ನನ್ನ ನೀನು?
ಲಟಿಗೆ ಮುರಿದ ಬೆರಳು
ಸ್ಪರ್ಶಕ್ಕಾಗಿ ಹಂಬಲಿಸಿರಬಹುದೇನು?
ಚಾಚಿದ ಕಾಲು ಬಯಸಿತಾ ಸಹನಡಿಗೆಯನ್ನು?
ಏನೋ ಹುಡುಕುವ ಕ್ಯಾಮರಾ ಕಣ್ಣು
ನನ್ನದೇ ಚಿತ್ರ ಸೆರೆಹಿಡಿಯುತ್ತಿದೆಯೇನು?
ತುಟಿಸೋಕಿ ಸುಟ್ಟ ಕಹಿಕಾಫಿ
ನಿನ್ನ ಪಾಲಿನ ನಾನಲ್ಲವೇನು?
ನನ್ನ ಪ್ರೀತಿಯ ಹಾಡು ನಿನ್ನ ಪಾಡಾಗಿ
ಕಿವಿಯ ಸೋಕುತ್ತಿರಬಹುದೇನು?
ಇಲ್ಲಿ ಬೀಸಿದ ಗಾಳಿ ಸುತ್ತಿ ಸುಳಿದು
ನಿನ್ನಾತ್ಮವ ಪುಳಕಿಸಬಾರದಿತ್ತೇನು?
ನನ್ನ ಕಣ್ಣು ಕತ್ತಲು ಕಪ್ಪುಪಟ್ಟಿ ಕಟ್ಟದೆಯೇ..
ಕಿವಿ ಮುಚ್ಚಿಹೋಗಿದೆ ಧ್ವನಿ ತಲುಪಲಾಗದೆಯೇ..
ನಾಲಿಗೆ ಸೀಳಿದೆ ಮತ್ತೆಂದೂ ಹೊಲಿಯಲಾಗದೆಯೇ..
ಅವಯವಗಳೇ ಸುಟ್ಟುಹೋಗಿದೆ ಭಾವ ಚಿಗುರಲಾಗದೆಯೇ..
ನಾನೇ ಹೂತುಹೋಗಿರುವೆ ಅಸ್ತಿತ್ವವಿಲ್ಲದೆಯೇ..
ಮಾತೇ ಇಲ್ಲದ ಮೌನದಾಯುಧಗಳು ಸೋತು ಎರಡೂ ಕಡೆ..
ಮನಸು ಜಾರಿ ಹೃದಯದೆಡೆ..ಕದನವಿರಾಮ ಜಾರಿಯಾಗಬಾರದೇ?
**********