‌‌ಡಾ. ನಿರ್ಮಲ ಬಟ್ಟಲ ಗಜಲ್

ಕಾವ್ಯ ಸಂಗಾತಿ

ಡಾ. ನಿರ್ಮಲ ಬಟ್ಟಲ

ಗಜಲ್

ತುಟಿಯಂಚಲಿ ಮಧು ಪಾತ್ರೆ ಹಿಡಿದ ಸರಸಿಯ ಸರಿಸಿ ಬಂದವನು ನಾನು
ಮುತ್ತಿಡುವ ಮುಂಗುರುಳ ಚೆಲುವೆಯ ಮರೆಸಿ ಬಂದವನು ನಾನು

ಕುಡಿಗಣ್ಣ ನೋಟದಲ್ಲಿ ಕರೆದು ಕಣ್ಗಾವಲಿನಲ್ಲಿಡುವ ಕೋಮಲೆಯ
ಪ್ರೇಮ ಕಾಮದ ಇಂದ್ರಜಾಲವನ್ನು ಕತ್ತರಿಸಿ ಬಂದವನು ನಾನು

ಮೃದು ಸ್ಪರ್ಶ ಮಧುರ ಸ್ವರ ಸಮ್ಮೋಹದಲ್ಲಿ ಮೈಮರೆಯದೆ ಮನದನ್ನೆಯ
ಒಲವ ಬಲೆಯನು ತುಂಡರಿಸಿ ಬಂದವನು ನಾನು

ಬಾಹುಬಂಧನದ ಘಮಲಿನ ಅಮಲಲಿ ತೇಲಿ ಮುಳುಗದೆ
ಬಿಸಿ ಉಸಿರಿಗೆ ಕರಗಿ ನೀರಾಗದೆ ಧಿಕ್ಕರಿಸಿ ಬಂದವನು ನಾನು

ಓ ಸಖಿ ಎಲ್ಲಿರುವೆ ಬಿಡದೆ ನಿನ್ನ ಹುಡುಕುತ್ತಲಿರುವೆ ಕಾರಿರುವ ಕತ್ತಲಲಿ
ಎದೆಯ ಬೆಳಕನ್ನು ಅರಸಿ ಬಂದವನು ನಾನು


Leave a Reply

Back To Top