ಕಾವ್ಯ ಸಂಗಾತಿ
ಲಕ್ಷ್ಮೀದೇವಿ ಕಮ್ಮಾರ,
ಗುರುತ್ವಾಕರ್ಷಣೆ
ಯಾವ ಸೆಳೆತವ ಕಾಣೆ
ಈ ಬದುಕಿನ ಮೇಲೆ
ಯಾವ ಅಂಟಿನ ನಂಟು ಬಂಧಿಸಿಟ್ಟಿದೆ ಈ ಭೂಮಿ ಮೇಲೆ
ಚಿಂತೆಗಳು ಕಂತೆ ಕಂತೆ ಇರಲಿ
ದುಃಖದ ಕಟ್ಟೆ ಒಡೆದಿರಲಿ
ಬವಣೆಗಳು ಭಾದಿಸಲಿ
ಮುಪ್ಪು ಅಡರಿ ಸುಕ್ಕುಗಟ್ಟಲಿ
ರೋಗ ರುಜಿನಗಳು ರೇಜಿಗೆ ಹಿಡಿಸಲಿ
ಭಯದ ಭೂತ ವಿಭ್ರಮೆ ತರಲಿ
ಮತ್ತೆ ಮತ್ತೆ ಬದುಕಿ ಬಾಳ ಬೇಕೆಂಬ ಒತ್ತಾಸೆ ಹುಟ್ಟೋದು ಎಲ್ಲಿಂದ ತಿಳಿಯದಾಗಿದೆ
ಯುದ್ದಗಳು ಬದುಕನ್ನು ಛಿದ್ರಗೊಳಿಸಿರಲಿ
ಪ್ರಕೃತಿ ವಿಕೋಪ ಕಷ್ಟಗಳ ಕೂಪಕ್ಕೆ ತಳ್ಳಲಿ
ತನ್ನವರೆಲ್ಲರನ್ನು ಕಿತ್ತು ಕೊಂಡು ಬೊಳು ಮರ
ಮಾಡಿರಲಿ
ಮತ್ತೆ ಹೋಸ ಚಿಗುರು ಚಿಗುರುವದೆಂಬ ಭರವಸೆ ಬತ್ತದಿರುವುದು
ಫಲ ಪುಷ್ಪದ ಕನಸು ಕಮರದಿರುವುದೆ
ಈ ಮಣ್ಣಿನ ಗುಣ ಇರಬಹುದೆ?
ಕರುಳು ಬಳ್ಳಿಯ ಸೆಳೆತವೋ
ರುಚಿ ಕಂಡ ದೇಹದ ಚಪಲವೊ
ಹಣ ಅಧಿಕಾರ ಅಂತಸ್ತಿನ ಮೋಹವೊ
ನಾಳೆ ಬರುವ ತರಣಿ ಹೊಸ ಬೆಳಕ
ತರುವನೆಂಬ ಆಶಾಭಾವನೆಯೊ
ಪ್ರೇಮವೊ,ಕಾಮವೊ
ಭಕ್ತಿಯೊ,ಶಕ್ತಿಯೊ
ಒಟ್ಟಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದೇವೆ
ಹಲವು ಬಗೆಯ ಬಣ್ಣದ ಬಾಳಪಂಜರದಲಿ
ಚೆನ್ನಾಗಿ ಕವಿಗಳ ಸಾಹಿತ್ಯದ ಸಾಲುಗಳು
ಎತ್ತ ಸಾಗುವ.ಈ ಲೊಕ ಮತ್ತೆ ಹಾಗೇ
ಸೊಗಸಾಗಿದೆ