ಯಾ.ಮ.ಯಾಕೊಳ್ಳಿ ಗಜಲ್

ಕಾವ್ಯಸಂಗಾತಿ

ಯಾ.ಮ.ಯಾಕೊಳ್ಳಿ

ಗಜಲ್

ಹಾಗೊಮ್ಮೆ ಹೀಗೊಮ್ಮೆ ಮುಗಿದು ಹೋಗಲಲ್ಲ, ಬಾಳ ಬೇಕು ಬದುಕು
ಹೇಗು ಹೇಗೋ ಮುಗಿದು ಹೋಗಲು ಬಿಡದೆ ಸಾಧಿಸ ಬೇಕು ಬದುಕು

ಹರಿವ ಗಂಗೆಯ ತೆರದಿ ಹರಿಯಬೇಕು ತಟವ ತುಂಬುತ್ತ ಬದುಕು
ಸುತ್ತಲೆಲ್ಲ ಜೀವ ಜಲವ ಹರಿಸಿ ಬಳ್ಳಿ ಮರ ಹರಸಬೇಕು ಬದುಕು

ಸುಮ್ಮನೇ ಸೃಷ್ಟಿಸಿಲ್ಲ ಸಮಯ ಮೀಸಲಿಟ್ಟ ಶಿವ ಜಗದಿ ಈ ಬದುಕು
ಗುರಿಯನಿತ್ತಿದ್ದಾನೆ ಸೀಮೆಯೆಳೆದಿದ್ದಾನೆ ಮಿತಿಯಲಿ ಸಾಗಬೇಕು ಬದುಕು

ಬೀದಿಯ ದೀಪದ ಕಂಬವೂ ಕತ್ತಲೆಯಾದೊಡನೆ ಬೆಳಗುತ್ತದೆ
ಕಂಟಿ‌ಮೇಲಿನ ಗಿಡವೂ ಹೂವು ಬಿಡುತ್ತದೆ,ಅರಳಿ ಬೆಳಗಬೇಕು ಬದುಕು

ದ್ವೇಷಿಸುವವರೂ ಕರುಬುವವರೂ ಕೂಗಿ ಗುಲ್ಲೆಬ್ಬಿಸುವರಿದ್ದಾರೆ ಸುತ್ತ
ಯಯಾ ಗಮನವಿಡದೆ ನಿನ್ನ ದಾರಿಯ ಪಯಣ ಮಾದರಿಯಾಗಬೇಕು ಬದುಕು


One thought on “ಯಾ.ಮ.ಯಾಕೊಳ್ಳಿ ಗಜಲ್

Leave a Reply

Back To Top