ಮಕ್ಕಳ ಕವಿತೆ
ಪುಟ್ಟಿಯ ಹೊಂಗನಸು
ಈರಪ್ಪ ಬಿಜಲಿ
ಕಣ್ಣನು ಮುಚ್ಚಿ ಮನಸನು ಬಿಚ್ಚಿ
ಪುಟ್ಟಿಯು ಕನಸಲಿ ತೇಲಿದಳು|
ರೆಕ್ಕೆಯ ಕಟ್ಟಿ ಕೈಯನು ತಟ್ಟಿ
ಚಂದಿರನಂಗಳ ಸೇರಿದಳು ||೧||
ಪಳಪಳ ಮಿನುಗೊ ತಾರೆಯ ಕಂಡು
ಹಿರಿಹಿರಿ ಮನದಲಿ ಹಿಗ್ಗಿದಳು |
ಚಲಿಸುವ ಬೆಳ್ಳಿ ತಟ್ಟೆಯ ಕಂಡು
ಪುಟ್ಟಿಯು ಮುಟ್ಟಲು ನುಗ್ಗಿದಳು ||೨||
ಮೆಲ್ಲಗೆ ಚಂದ್ರ ಬಳಿಯಲಿ ಬಂದು
ಪುಟ್ಟಿಗೆ ಮುತ್ತನು ಕೊಟ್ಟಿಹನು
ಮಲಿಗೆ ಹೂವು ಅರಳಿದ ಹಾಗೆ
ಪುಟ್ಟಿಯ ವದನವು ಹೊಳೆದಿತ್ತು ||೩||
ನಿಗೂಢ ಗಗನ ವಿಷ್ಮಯ ತಾಣ
ಅಂತಃರಿಕ್ಷೆಯ ಈ ಪಯಣ
ಜೇಡರ ಬಲೆಯ ಮಾದರಿ ನೆಲೆಯು
ಗ್ರಹ ಉಪಗ್ರಹ ಸಂಚಲನ ||೪||
ರಾಕೆಟ್ ಬಂದು ಅಪ್ಪಳಿಸಿದಂತೆ
ಬಾಸವಾಯಿತು ಈ ಪುಟ್ಟಿಗೆ
ಚಿಟ್ಟನೆ ಚೀರಿ ಮೈಕೊಡವಲು
ಪುಟ್ಟಿಯು ಇಳಿದಳೀ ಧರಣಿಗೆ ||೫||