ಅಂಕಣ ಸಂಗಾತಿ

ಗಜಲ್ ಲೋಕ

ರತ್ನರಾಯಮಲ್ಲ ಅವರ ಲೇಖನಿಯಿಂದ

ಅಲಿಯವರ ಗಜಲ್ ಗಳಲ್ಲಿ

ಸಾಮಾಜಿಕ ನ್ಯಾಯದ ಹುಡುಕಾಟ

ತುಂಬಾ ಶೆಕೆ ಅಲ್ವಾ, ಏನೂ; ಬೇಸಿಗೆಯಲ್ಲಿ ಶೆಕೆ ಇಲ್ಲದೆ ಚಳಿಗಾಲದಲ್ಲಿರುತ್ತಾ ಅಂತ ಗುರಾಯಿಸ್ತಾ ಇದ್ದೀರಾ? ಕೂಲ್.. ಕೂಲ್..ಕೂಲ್..ಆ ಶೆಕೆ ಕಡಿಮೆ ಮಾಡಲು ಬೀಸಣಿಕೆ ತಂದಿದ್ದೇನೆ, ಗಜಲ್ ಲೋಕದ ಬೀಸಣಿಕೆ. ಇದರಿಂದ ಬರುವ ಗಾಳಿ ಮೈ, ಮನಕೆ ಮುದ ನೀಡುವುದರಲ್ಲಿ ಯಾವ ಸಂಶಯವೂ ಇಲ್ಲ. ಪ್ರತಿ ಗುರುವಾರದಂತೆ ಈ ಗುರುವಾರವೂ ಸಹ ಒಬ್ಬ ಶಾಯರ್ ನ ಜೊತೆ ಬಂದಿದ್ದೀನಿ.‌ ಮತ್ತೇಕೆ ಈ ಪುರಾಣ ಅಂತೀರಾ.. ಓಕೆ, ಓಕೆ. ತಮ್ಮೆಲ್ಲರ ಅಪ್ಪಣೆಯ ಮೇರೆಗೆ ಒಂದು ಷೇರ್ ಹೇಳುವೆ…!!

“ಆತ್ಮಹತ್ಯೆ ಮಾಡಿಕೊಳ್ಳುವ ಧೈರ್ಯ ಎಲ್ಲರಿಗೂ ಇರುವುದಿಲ್ಲ
ಇನ್ನೂ ಕೆಲವು ದಿನಗಳವರೆಗೆ ಇತರರನ್ನು ಹಾಗೆಯೇ ಕಾಡಿಸಿದರಾಯ್ತು”
-ನಿದಾ ಫಾಸಲಿ

        ನಾವು ವಾಸಿಸುತ್ತಿರುವ ಭೂಮಿ ತುಂಬಾ ವಿಶಾಲವಾಗಿದೆ. ಆದರೆ ನಮ್ಮ ಮುಂದೆ ಪ್ರಶ್ನೆ ಇರೋದು ಈ ಭೂಮಿಯಲ್ಲಿ ಪ್ರೀತಿಯ ಮಲ್ಲಿಗೆ ಚಿಗುರೋಕೆ ಕಾರಣವಾಗುವ ಫಲವತ್ತತೆ ಎಷ್ಟಿದೆ ಎಂಬುದು. ದುರಂತವಾದರೂ ಸತ್ಯ ಏನೆಂದರೆ ನಮ್ಮ ಸುತ್ತಲಿನ ಹೆಚ್ಚಿನ ಭೂಮಿ ಬರಡುತನದಿಂದ ಕೂಡಿರೋದು!! ಈ ಹಿನ್ನೆಲೆಯಲ್ಲಿ ಪ್ರತಿ ನಾಗರಿಕರ ಮೂಲ ಕರ್ತವ್ಯವೆಂದರೆ ಪರಸ್ಪರರನ್ನು ಗೌರವಿಸುವ, ಪ್ರೀತಿಸುವ ಗುಣವನ್ನು ವೃದ್ಧಿಸುವ, ಅನುಸರಿಸುವ ಹಾಗೂ ಅನುಮೋದಿಸುವ ಕೆಲಸ ಆಗಬೇಕಿದೆ. ಪ್ರೀತಿ ಎಂಬುದು ತುಂಬಾ ಪವಿತ್ರವಾದದ್ದು ಹಾಗೂ ಪ್ರಭಾವಿಯಾದದ್ದು!! ಇದು ಯಾರನ್ನು ಬೇಕಾದರೂ ಬದಲಾಯಿಸುತ್ತದೆ, ಪರಿವರ್ತಿಸುತ್ತದೆ. ನಾವು ಪ್ರೀತಿಗೆ ಅರ್ಹರಾಗಿದ್ದರೆ ಮಾತ್ರ ಅದು ನಮ್ಮನ್ನು ಆವರಿಸಲು ಸಾಧ್ಯ. ಅಂತೆಯೇ ಪ್ರೀತಿ ಗೆಲ್ಲುತ್ತದೆ, ಯಾವಾಗಲೂ ಗೆಲ್ಲುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇದು ಎಲ್ಲರಿಂದಲೂ ಸಾಧ್ಯನಾ ಎನ್ನುವ ಪ್ರಶ್ನೆ ಎದುರಾಗೋದು ಸಹಜ. ಉತ್ತರ ಮಾತ್ರ ನಿರುತ್ತರ!! ಇಲ್ಲಿ ನಮಗಿರುವ ದಾರಿದೀಪ ಎಂದರೆ ಸಮೂಹ ಪ್ರಜ್ಞೆಯ ನೀಲನಕ್ಷೆ ಸಾಹಿತ್ಯ. ಸಾಹಿತ್ಯವು ನಮ್ಮ ಅನುಭವಕ್ಕೆ ಅರ್ಥವನ್ನು ನೀಡುವ ಕ್ರಿಯೆಯಾಗಿದೆ. “Literature is the garden of wisdom” ಎಂಬ ಐರ್ಲೆಂಡಿನ ಬರಹಗಾರ ಹಾಗೂ ನಟನಾದ ಜೇಮ್ಸ್ ಎಲ್ಲಿಸ್ ರವರ ಮಾತು ಸಾಹಿತ್ಯದ ಸಾಂದ್ರತೆಯನ್ನು ಸಾರುತ್ತದೆ. ಸತ್ತವರನ್ನು ಬದುಕಿಸಲು ಮತ್ತು ಜೀವಂತವಾಗಿ ಸಾಯುವುದನ್ನು ತಡೆಯುವಲ್ಲಿ ಇದು ಬಹು ಮುಖ್ಯ ಪಾತ್ರವನ್ನು ನಿರ್ವಹಿಸುತ್ತದೆ. ಸಾಹಿತ್ಯವು ಒಂದು ಯುಗ ಮತ್ತು ರಾಜ್ಯದ ಧ್ವನಿಯಾಗಿದ್ದು, ಕಾಲದ ಅಂಗವಾಗಿದೆ. ಇದರ ಉದ್ದೇಶ ಮಾನವನ ಸ್ವಭಾವವನ್ನು ಬೆಳಗಿಸುವುದಾಗಿದೆ. ಅಮೇರಿಕನ್ ಇತಿಹಾಸ ತಜ್ಞ ವಿಲಿಯಂ ಹಿಕ್ಲಿಂಗ್ ಪ್ರೆಸ್ಕಾಟ್ ರವರ ಈ ಹೇಳಿಕೆ “The history of literature is the history of the human mind” ಎಂಬುದು ಸಾಹಿತ್ಯ ಮನುಕುಲವನ್ನು ಬೆಸೆಯುವ ಬಂಧುವಾಗಿದೆ ಎಂಬುದನ್ನು ಪ್ರತಿಧ್ವನಿಸುತ್ತದೆ. ಕೆಡುಕು ಅಳಿದು ಒಳಿತು ಉಳಿಯುವುದು ಸಾಹಿತ್ಯದ ಧ್ಯೇಯವಾಗಿದೆ. ಇಂಥಹ ಸಾಹಿತ್ಯದ ಕುಲುಮೆಯಲ್ಲಿ ನಳನಳಿಸುವ ಮುತ್ತೆಂದರೆ ಅದುವೇ ಅರಬ್ ನಾಡಿನ ಖರ್ಜೂರ ಗಜಲ್. ಇದು ಸಿಹಿಯಷ್ಟೇ ಅಲ್ಲ, ಆರೋಗ್ಯಕ್ಕೆ ಒಳ್ಳೆಯದು ಸಹ! ಇಂದು ನಮ್ಮ ಕರುನಾಡಿನಾದ್ಯಂತ ಗಜಲ್ ಗಮ್ಮತ್ತು ತುಸು ಹೆಚ್ಚೇ ಪಸರಿಸಿದೆ, ಪಸರಿಸುತ್ತಿದೆ. ಜಾತಿ, ಮತ, ಪಂಥ, ಲಿಂಗ ತಾರತಮ್ಯವಿಲ್ಲದೆ ಅಸಂಖ್ಯಾತ ಬರಹಗಾರರು ಗಜಲ್ ಮಧುಬಾಲೆಯ ಮೋಹಕ್ಕೆ ಒಳಗಾಗಿ ನಿರಂತರವಾಗಿ ಗಜಲ್ ಗಳನ್ನು ಬರೆಯುತ್ತಿದ್ದಾರೆ. ಅವರಲ್ಲಿ ಸೈಯದ್ ಸಿಕಂದರ್ ಮೀರ್ ಅಲಿ ಅವರು ಸಹ ಒಬ್ಬರು.

      ಕವಿ, ಗಜಲ್ ಕಾರ ಹಾಗೂ ಉತ್ತಮ ಸಂಘಟಕರಾದ ಶ್ರೀ ಸೈಯದ್ ಸಿಕಂದರ ಮೀರ್ ಅಲಿ ಯವರು ಶ್ರೀ ಸೈಯದ್ ರವೂಫ್
ಮತ್ತು ಶ್ರೀಮತಿ ನುರ್ ಜಹಾನ್ ದಂಪತಿಗಳ ಮಗನಾಗಿ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ತೋರಣಗಲ್ಲಿನಲ್ಲಿ ೧೯೮೩ರಲ್ಲಿ ಜನಿಸಿದರು. ಅಲಿಯವರು ತಮ್ಮ ಬಾಲ್ಯದ ದಿನಗಳಲ್ಲಿ ಅಜ್ಜ-ಅಜ್ಜಿ ಹಾಡುತಿದ್ದ ಉರ್ದು-ಹಿಂದಿ ಗಜಲ್ ಗಳನ್ನು ಕೇಳುತ್ತಾ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಒಡನಾಟದೊಂದಿಗೆ ಬೆಳೆದಿದ್ದಾರೆ. ಕಥೆ, ಕಾವ್ಯ, ವಿಮರ್ಶೆ, ಶಾಯರಿ, ಅನುವಾದ, ಸಾಮಾಜಿಕ -ರಾಜಕೀಯ ವ್ಯವಸ್ಥೆಯ ಲೇಖನ ಹಾಗೂ ಗಜಲ್ ಕಾವ್ಯ ಪ್ರಕಾರಗಳಲ್ಲಿ ಕೃಷಿಯನ್ನು ಮಾಡುತ್ತ ಬಂದಿದ್ದಾರೆ, ಬರುತ್ತಿದ್ದಾರೆ. “ಮೌನ ನಗರಿಯ ಮಾತು” ಎಂಬ ಗಜಲ್ ಸಂಕಲನವನ್ನು ಪ್ರಕಟಿಸಿ ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. “ಶರಾಬಿಯ ಶಾಯರಿಗಳು” ಎಂಬ ಶಾಯರಿ ಸಂಕಲನ ಪ್ರಕಟಣೆಯ ಹೊಸ್ತಿಲಲ್ಲಿದೆ. ಬಳ್ಳಾರಿ ಜಿಲ್ಲೆಯ ಖ್ಯಾತ ವೆಬ್ ಪೋರ್ಟಲ್ ‘ಜನಧ್ವನಿ’ ನಲವತ್ತೈದು ಪ್ರಮುಖ ಕವಿಯತ್ರಿ ಯರ ಸಂದರ್ಶನ ಮಾಡಿರೋದು ಶ್ರೀಯುತರ ಸೃಜನಶೀಲತೆಗೆ ಹಿಡಿದ ಕನ್ನಡಿಯಾಗಿದೆ. ಉತ್ತಮ ಸಂಘಟಕರಾಗಿರುವ ಅಲಿಯವರು ‘ಮನ್ವಂತರ ಧರೆಯಮಾತು’ ಸಂಸ್ಥೆಯ ಸಂಸ್ಥಾಪನ ಅಧ್ಯಕ್ಷರಾಗಿ ಪ್ರತಿವರ್ಷ ತೋರಣಗಲ್ಲುವಿನಲ್ಲಿ ಪ್ರಗತಿಪರ ಚಿಂತನೆಯುಕ್ತ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಜೊತೆಗೆ ‘ಮನ್ವಂತರ ಪ್ರಕಾಶನ’ದ ಮೂಲಕ ಪ್ರತಿಭಾನ್ವಿತ ಮನಸುಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ.

     ಸೈಯದ್ ಸಿಕಂದರ್ ಮೀರ್ ಅಲಿ ಯವರ ಹಲವಾರು ಬರಹಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಶ್ರೀಯುತರು ನಾಡಿನ ಹಲವಾರು ಕವಿಗೋಷ್ಠಿ, ಗಜಲ್ ಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಸಾಹಿತ್ಯದ ಮುಖಾಂತರ ಸಹೃದಯಿಗಳ ಮನವನ್ನು ತಣಿಸಿದ್ದಾರೆ. ಇವರಿಗೆ ಹಲವಾರು ಸಂಘ ಸಂಸ್ಥೆಗಳು ಗೌರವಿಸಿ ಸತ್ಕರಿಸಿವೆ.

      “ಹೆಣ್ಣಿನ ಕಲ್ಪನೆಯು ತುಂಬಾ ವೇಗವಾಗಿರುತ್ತದೆ; ಅದು ಒಂದು ಕ್ಷಣದಲ್ಲಿ ಅಭಿಮಾನದಿಂದ ಪ್ರೀತಿಗೆ, ಪ್ರೀತಿಯಿಂದ ದಾಂಪತ್ಯಕ್ಕೆ ಜಿಗಿಯುತ್ತದೆ” ಎಂಬ ಆಂಗ್ಲ ಕಾದಂಬರಿಕಾರ್ತಿ ಜೇನ್ ಆಸ್ಟೆನ್ ರವರ ಮಾತು ನಮ್ಮ ಗಜಲ್ ಗೆ ಹೆಚ್ಚು ಅನ್ವಯಿಸುತ್ತದೆ. ಕಾರಣ, ‘ಗಜಲ್’ ಎಂಬುದು ಸ್ತ್ರೀ ಲಿಂಗ. ಮೂಲಭೂತವಾಗಿ ಇದು ಸ್ತ್ರೀ ಸಂವೇದನೆಯ ಕಾವ್ಯ. ನಾವು ಸ್ತ್ರೀಯರೊಂದಿಗೆ ಸಮೀಕರಿಸುವ ಸೌಂದರ್ಯ, ಕೋಮಲತೆ, ನಯ, ನಾಜೂಕು, ಮೃದು, ಮೃದುಭಾಷಿಣಿ, ಅಂತರ್ಮುಖಿ… ಎಲ್ಲವನ್ನೂ ನಾವು ಗಜಲ್ ಗಳಲ್ಲಿ ಕಾಣುತ್ತೇವೆ, ಅರಸುತ್ತೇವೆ; ಬಯಸುತ್ತೇವೆಯೂ ಕೂಡ. ಈ ಹಿನ್ನೆಲೆಯಲ್ಲಿ ಗಜಲ್ ಗಳು ನಮ್ಮ ಮನಸ್ಸಿಗೆ ತಂಪನೆರೆಯುವ ಸುಂದರ ಭಾವಧಾರೆಗಳು. ತಾಯಿ ತನ್ನ ಕಂದಮ್ಮನ ಅಳುವನ್ನು ಕಂಡು ಖುಷಿ ಪಡುವಂತೆ, ಗಜಲ್ ನೋವನ್ನೂ ಪ್ರೀತಿಸುವಂತೆ ಮಾಡುವ ದೈವಿಕ ಶಕ್ತಿಯನ್ನು ಹೊಂದಿದೆ. “ಮೌನ ನಗರಿಯ ಮಾತು” ಗಜಲ್ ಸಂಕಲನದ ಪುಟ ತಿರುವುತ್ತಾ ಹೋದಂತೆ ನಮಗೆ ಮನುಷ್ಯನ ತೊಳಲಾಟ, ಸಾಮಾಜಿಕ ವ್ಯವಸ್ಥೆಯ ವಿಡಂಬನೆ, ಧಾರ್ಮಿಕ ಡಾಂಭಿಕತೆ, ಅಸ್ತಿತ್ವಕ್ಕೆ ಹೋರಾಡುತಿರುವ ಧಾರ್ಮಿಕ ಮುಖಂಡರುಗಳ ಮುಖವಾಡ, ಕೋಮು ಸೌಹಾರ್ದತೆ ಬಯಸುವ ಮನಸು, ರಾಜಕೀಯದ ಅಧಃಪತನ, ಬಡತನದ ಬೇಗುದಿ, ಅಸಹಾಯಕತೆಯ ಅನಾವರಣ, ಭಗ್ನ ಪ್ರೇಮಿಯ ಆರ್ತನಾದ, ವಿರಹದ ಕಾವು, ಪ್ರೇಮಿಗಳ ಸರಸ-ಸಲ್ಲಾಪ.. ಎಲ್ಲವೂ ನಮಗೆ ಎದುರಾಗಿ ಇಂದು ಸಮಾಜದಲ್ಲಿ ಮಾನವೀಯತೆ ಇದೆಯೋ, ಇಲ್ಲವೊ ಎಂದು ಜಿಜ್ಞಾಸೆ ಮಾಡಲು ಹೆಚ್ಚುತ್ತದೆ.

        ನಮ್ಮ ಜೀವನವು ನಾವು ಅಂದುಕೊಂಡಂತೆ ಜಟಿಲವಾಗಿಲ್ಲ, ನಿಜಾವಗಿಯೂ ಸರಳವಾಗಿದೆ. ಆದರೆ ದುರಂತವೆಂದರೆ ಅದನ್ನು ಸಂಕೀರ್ಣಗೊಳಿಸುವಂತೆ ನಾವು ಒತ್ತಾಯಿಸುತ್ತಿದ್ದೇವೆ. ಜೀವನದ ತರಗತಿಯಲ್ಲಿ ನಾವು ಸಾಕಷ್ಟು ಗಮನ ಹರಿಸಿದರೆ ಪ್ರತಿದಿನ ಹೊಸ, ಹೊಸ ಪಾಠಗಳನ್ನು ಕಲಿಯಬಹುದು. ಕಾರಣ ಬದುಕು ಯಾವತ್ತೂ ಕಲಿಸುವುದನ್ನು ನಿಲ್ಲಿಸುವುದಿಲ್ಲ. ಬಾಳಿನಲ್ಲಿ ಬಂದೊದಗುವ ಸಮಸ್ಯೆಗಳು ನಿಲ್ಲುವ ಚಿಹ್ನೆಗಳಲ್ಲ, ಬದಲಿಗೆ ಅವುಗಳು ನಮಗೆ ಮಾರ್ಗಸೂಚಿಗಳಾಗಿವೆ. ಈ ದಿಸೆಯಲ್ಲಿ ಕೆಳಗಿನ ಷೇರ್ ಬಹುಮುಖ್ಯ ಅನಿಸುತ್ತದೆ.

“ಸದ್ದಿಲ್ಲದೆ ಶುರುವಾದ ಜೀವನದ ಜಂಜಾಟದಲಿ ನನ್ನನೆ ಅಡವಿಟ್ಟಿದ್ದೆ
ಸಾವು ಸೆಡ್ಡು ಹೊಡೆದು ಮುಗುಳ್ನಕ್ಕಾಗ ಯಾರಿಗೆ ಕೇಳಲಿ ನ್ಯಾಯ

ಇಲ್ಲಿ ಶಾಯರ್ ಸೈಯದ್ ಸಿಕಂದರ್ ಮೀರ್ ಅಲಿ ಅವರ ಷೇರ್ ನಲ್ಲಿ ಬದುಕಿನ ಅನಿಶ್ಚಿತತೆಯ ವ್ಯಾಕುಲತೆ ಹರಡಿಕೊಂಡಿದೆ. ಈ ಬದುಕೆನ್ನುವುದು ಸೈಕಲ್ ಸವಾರಿಯಂತೆ. ಬಾಳಿನಲ್ಲಿ ಸಮತೋಲನವನ್ನು ಉಳಿಸಿಕೊಳ್ಳಲು, ನಾವು ಚಲಿಸುತ್ತಲೇ ಇರಬೇಕಾಗುತ್ತದೆ. ಏಕೆಂದರೆ ಪ್ರತಿಯೊಂದು ಸಾತ್ವಿಕತೆಗೆ ಭೂತಕಾಲವಿದ್ದಂತೆ ಪ್ರತಿ ತಾಮಸಕ್ಕೂ ಭವಿಷ್ಯವಿದೆ ಎಂಬುದನ್ನು ಮರೆಯಲಾಗದು. ಸೋಲುಗಳನ್ನು ಎದುರಿಸಬೇಕೆ ಹೊರತು ಅವುಗಳು ನಮ್ಮನ್ನು ಸೋಲಿಸಲು ಬಿಡಬಾರದು ಎಂಬ ಸುಂದರ ಆಶಯ ಇಲ್ಲಿದೆ.

        ಧರ್ಮ ಎಂದರೆ ನಮ್ಮ ನಡೆ, ನುಡಿ, ನಾವು ಬದುಕುವ ರೀತಿ, ನೀತಿಯನ್ನು ಪ್ರತಿಬಿಂಬಿಸುವ ನಾಜೂಕಿನ ದರ್ಪಣ. ಯಾವಾಗ ಇದಕ್ಕೆ ರಾಜಕೀಯದ ಗಾಳಿ ಸುಳಿಯುತ್ತದೊ ಆವಾಗ ದರ್ಪಣ ಚೂರು ಚೂರಾಗೋಗುತ್ತದೆ. ಅಂತಲ್ಲಿ ಪ್ರೀತಿ ಸಿಗುವುದಾದರೂ ಹೇಗೆ ಎಂದು ಸುಖನವರ್ ಸಿಕಂದರ್ ಅಲಿಯವರು ತಮ್ಮ ಈ ಷೇರ್ ನಲ್ಲಿ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
a
“ಮಂದಿರ ಮಸೀದಿ ಚರ್ಚಿನೊಳಗೆ ಪ್ರೀತಿಯೇ ಇಲ್ಲ ಗೆಳೆಯ
ನಮ್ಮ ನಿಮ್ಮ ಮನಸಿನಲಿರುವ ಅಹಮಿಕೆಗೆ ಸುಟ್ಟು ಬಿಡಿ”

ಬಾಳಿನಲ್ಲಿ ಸಂತೋಷವು ಆಕಸ್ಮಿಕವಲ್ಲ. ಅದೊಂದು ಆಯ್ಕೆಯ ಫಲ. ಇದು ಸಾಧ್ಯವಾಗಬೇಕಾದರೆ ನಾವು ಹೋದಲ್ಲೆಲ್ಲಾ ಪ್ರೀತಿಯನ್ನು ಹರಡಬೇಕಿದೆ. ಪ್ರೀತಿ ಎಂಬುದು ಎಲ್ಲಿಯೂ ಸಿಗುವುದಿಲ್ಲ, ಹುಡುಕಲುಬಾರದು. ಹುಡುಕುತ್ತಾ ಹೋದರೆ ನಮಗೆ ಸಿಗುವುದು ಕಪಟ, ಮೋಸ, ವಂಚನೆ, ಸ್ವಾರ್ಥ, ಅನ್ಯಾಯ…. ಹೊರತು ಬೇರೇನೂ ಅಲ್ಲ. ಆದರೆ ಎಲ್ಲವೂ ನಾನೇ, ಎಲ್ಲವೂ ನನ್ನಿಂದ ಎಂಬ ಮತ್ತು ನಮ್ಮನ್ನು ಆವರಿಸಿದರೆ ನಮ್ಮ ಅಂತರಂಗದ ಕಣ್ಣು ಕುರುಡಾಗುತ್ತದೆ, ಮನೋವ್ಯಾಕುಲತೆ ಆಲಂಗಿಸುತ್ತದೆ. ಆವಾಗ ಮನಸ್ಸಿನ ಒಂದು ಭಾಗವು ತಾನು ಸೋತವನು ಎಂದು ಅನುಮಾನಿಸಿದರೆ, ಇನ್ನೊಂದು ಭಾಗವು ತಾನೇ ಸರ್ವಶಕ್ತ ದೇವರು ಎಂದು ಭಾವಿಸುತ್ತದೆ. ಇದಕ್ಕೆ ಪರಿಹಾರವೆಂದರೆ ಬಾಹ್ಯಲೋಕದ ಮೇಲೆ ಹೆಚ್ಚಿನ ಅವಲಂಬನೆಯಿಂದ ಹೊರಬಂದು ಆತ್ಮಾವಲೋಕನದತ್ತ ಮುಖ ಮಾಡಿ ನಿಲ್ಲಬೇಕು. ನಮಗೆ ಎರಡು ಕಿವಿಗಳಿವೆ ಎಂಬುದನ್ನು ಮರೆಯದೆ ಸಂವೇದನೆಗಳಿಗೆ ಸ್ಪಂದಿಸಬೇಕಿದೆ.

“ನೀವು ಯಾವಾಗಲೂ ವರ್ತಮಾನದ ಮೇಲೆ ಕೇಂದ್ರೀಕರಿಸಲು ಸಾಧ್ಯವಾದರೆ, ನೀವು ಸಂತೋಷದ ವ್ಯಕ್ತಿಯಾಗುತ್ತೀರಿ. ಜೀವನವು ನಾವು ಈಗ ಬದುಕುತ್ತಿರುವ ಕ್ಷಣವಾಗಿದೆ” ಎಂಬ ಬ್ರೆಜಿಲಿಯನ್ ಗೀತರಚನೆಕಾರ ಮತ್ತು ಕಾದಂಬರಿಕಾರ ಪಾಲೊ ಕೊಯೆಲೊ ರವರ ಮಾತು ಬದುಕುವ ಬಗೆಯನ್ನು ಪ್ರತಿನಿಧಿಸುತ್ತದೆ. ಈ ಹಿನ್ನೆಲೆಯಲ್ಲಿ ಇಂದು ಗಜಲ್ ನ ಹರಹು ಇಡೀ ಮನುಕುಲವನ್ನು ಹೊಂದಿದೆ. ಗಜಲ್ ಗೋ ಸೈಯದ್ ಸಿಕಂದರ್ ಮೀರ್ ಅಲಿ ಅವರಿಂದ ಮತ್ತಷ್ಟು ಮೊಗೆದಷ್ಟೂ ಗಜಲ್ ಕೃಷಿ ಆಗಲಿ, ಸಹೃದಯ ಓದುಗರ ಮನವನ್ನು ತಣಿಸಲಿ ಎಂದು ಶುಭ ಕೋರುತ್ತೇನೆ.

ದುಃಖದ ಮೋಡಗಳಿಂದ ಸಂತಸದ ಚಂದ್ರ ಉದಯಿಸುತ್ತಾನೆ
ಕತ್ತಲ ರಾತ್ರಿಯ ಮುಸುಕಿನಲ್ಲಿ ಹಗಲಿನ ಬೆಳಕು ಇದೆ”
-ಅಕ್ತರ್ ಶಿರಾನಿ

ಸುಖನವರ್ ಅವರ ಹೆಜ್ಜೆ ಗುರುತುಗಳೊಂದಿಗೆ ಚಲಿಸುತಿದ್ದರೆ ಒಂಥರಾ ಕಚಗುಳಿ ಇಟ್ಟಂತೆ ಆಗುತ್ತೆ ಅಲ್ವಾ, ಹಾಗಂತ ಕಚಗುಳಿ ಇಡ್ತಾನೆ ಇರೋಕೆ ಆಗಲ್ಲ ಅಲ್ವಾ…? ಸಮಯದ ಮುಂದೆ ಮಂಡಿಯೂರಲೆಬೇಕು. ಇವಾಗ ಹೋಗಿ ಮತ್ತೇ ಮುಂದಿನ ಗುರುವಾರದಂದು ತಮ್ಮ ಮುಂದೆ ಬರ್ತೀನಿ. ಅಲ್ಲಿಯವರೆಗೆ ಶುಭವಾಗಲಿ!!
ಧನ್ಯವಾದಗಳು..


ಡಾ. ಮಲ್ಲಿನಾಥ ಎಸ್. ತಳವಾರ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top