ಅಂಕಣ ಸಂಗಾತಿ

ಸಿನಿ ಸಂಗಾತಿ

ಕುಸುಮ ಮಂಜುನಾಥ್

ಹೊಂದಿಸಿ ಬರೆಯಿರಿ.”

ಜೀವನದಲ್ಲಿ ಬಂದುದನ್ನು ಬಂದ ಹಾಗೆ ಸ್ವೀಕರಿಸಿ ಸಂಬಂಧಗಳಲ್ಲಿ ಹೊಂದಿಕೊಂಡು ಹೋಗಬೇಕೆಂಬ ಸಂದೇಶವನ್ನು ನೀಡುವ ಚಿತ್ರ “ಹೊಂದಿಸಿ ಬರೆಯಿರಿ.”
ಚಿತ್ರದ ಪ್ರಾರಂಭದಲ್ಲಿಇಂಜಿನಿಯರಿಂಗ್ ಕಾಲೇಜಿನಲ್ಲಿ ಸಹಪಾಠಿಗಳಾದ ನಾಲ್ಕು ಜನರು ಹಲವು ವರ್ಷಗಳ ನಂತರ ಭೇಟಿಯಾಗಿ ತಮ್ಮ ಹಿಂದಿನ ದಿನಗಳನ್ನು ಮೆಲುಕು ಹಾಕುವುದಲ್ಲದೆ ತಮ್ಮ ಇಂದಿನ ಬದುಕಿನ ಬಗ್ಗೆ ಹಂಚಿಕೊಳ್ಳುತ್ತಾರೆ, ಹೋಲಿಕೆ ಮಾಡಿಕೊಳ್ಳುತ್ತಾರೆ, ಪ್ರಭಾವಿತರಾಗುತ್ತಾರೆ, ಅಲ್ಲಿಂದ ಮುಂದೆ ಅವರ ಬದುಕಿನ ಪಯಣ ಹೇಗೆ ಸಾಗುತ್ತದೆ ಎಂಬುದು ಚಿತ್ರದ ಕಥೆ.
ರಂಜಿತ್ (ನವೀನ್ ಶಂಕರ್) ಕುಮಾರ್ (ಶ್ರೀ) ಸನಿಹಾ (ಐಶಾನಿ ಶೆಟ್ಟಿ )ಜಗನ್ (ಪ್ರವೀಣ್ ತೇಜ್) ಟೈಗರ್ ಸೋಮ (ಅನಿರುದ್ಧ ಆಚಾರ್ಯ) 2008ನೇ ಬ್ಯಾಚ್ ನ ದಾವಣಗೆರೆಯ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಗಳು, ಸಮಾಜದ ವಿಭಿನ್ನ ಸ್ತರಗಳಿಂದ ಇವರೆಲ್ಲ ಬಂದಿದ್ದರೂ ಅವರೆಲ್ಲ ಉತ್ತಮ ಸ್ನೇಹಿತರು. ಅವರಲ್ಲಿ ಸನಿಹ ಹಾಗೂ ಕುಮಾರ ಮದ್ಯೆ ಪ್ರೀತಿ ಏರ್ಪಡುತ್ತದೆ. ಆರಂಭದಲ್ಲಿ ಈ ಸಿನಿಮಾ ಕಾಲೇಜು ಜೀವನದ ದರ್ಶನ ಮಾಡಿಸುತ್ತದೆ .ಚಿತ್ರದ ಮೊದಲ ಭಾಗ ಪೂರ್ತಿ ವಿದ್ಯಾರ್ಥಿ ಜೀವನದ ನೋವು ನಲಿವು ತುಂಟಾಟ ಹಾಸ್ಯಗಳಲ್ಲಿ ತುಂಬಿಹೋಗಿದೆ.
ಇಂಜಿನಿಯರಿಂಗ್ ಕಾಲೇಜ್ ಹಾಸ್ಟೆಲ್ ಜೀವನ, ರಾಗಿಂಗ್, ಎಲೆಕ್ಷನ್, ಪ್ರೀತಿ ಪ್ರಣಯ, ಪರೀಕ್ಷೆ, ಪ್ರಾಜೆಕ್ಟ್ , ಕ್ಯಾಂಪಸ್ ಸೆಲೆಕ್ಷನ್ ಇವುಗಳಿಂದ ತುಂಬಿಹೋಗಿದೆ. ಇವುಗಳ ಮಧ್ಯೆ ವಿದ್ಯಾರ್ಥಿನಿಯೊಬ್ಬಳ ಆತ್ಮಹತ್ಯೆ ಪ್ರಸಂಗವು ನಡೆಯುತ್ತದೆ .ಚಿತ್ರದ ಎರಡನೇ ಭಾಗದಲ್ಲಿ ಚಿತ್ರಕ್ಕೆ ಭಾವನಾತ್ಮಕ ತಿರುವು ದೊರೆಯುತ್ತದೆ.
ತನ್ನ ತಂದೆಯೊಂದಿಗೆ ಒಡಕು ಸಂಬಂಧದಿಂದ ನೊಂದ ರಂಜಿತ್ ತನ್ನ ಬದುಕಿನ ನೆಮ್ಮದಿಯನ್ನರಸುತ್ತಾ ನೆಲೆ ಕಾಣುವುದು ಒಂದು ಪುಟ್ಟ ಹಳ್ಳಿಯ ಶಿಕ್ಷಕನಾಗಿ. ಇನ್ನು ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಕೆಲಸವನ್ನು ಒಂದೇ ಕಂಪನಿಯಲ್ಲಿ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಡುವ ಜೋಡಿ ಸನಿಹ ಹಾಗೂ ಕುಮಾರ್. ಟೈಗರ್ ಸೋಮ ಪ್ರಯಾಸದಿಂದ ಕಾಲ್ ಸೆಂಟರ್ ನಲ್ಲಿ ಕೆಲಸ ಪಡೆದರೆ ಜಗನ್ ಈವೆಂಟ್ ಮ್ಯಾನೇಜ್ಮೆಂಟ್ ನಲ್ಲಿ ವೃತ್ತಿಯನ್ನು ಆರಂಭಿಸುತ್ತಾನೆ.


ಇವರೆಲ್ಲ ತಮ್ಮ ವಿದ್ಯಾರ್ಥಿ ಜೀವನ ಮುಗಿಸಿ ಬದುಕಿನೊಂದಿಗೆ ನೇರವಾಗಿ ಮುಖಾಮುಖಿಯಾದಾಗ ಅವರ ಸಂಬಂಧಗಳಲ್ಲಿ ಆಗುವ ಏರುಪೇರುಗಳು ವೃತ್ತಿಯಲ್ಲಿ ಪಡೆಯುವ ಅವಕಾಶಗಳು, ಪ್ರೀತಿಯನ್ನು ಅರಸುತ್ತ ಕಳೆದುಕೊಳ್ಳುವ ಸಂಬಂಧಗಳು, ತೆರೆದುಕೊಳ್ಳುವ ಹೊಸ ಭಾವಗಳು ಚಿತ್ರದ ಮುಂದಿನ ಭಾಗದಲ್ಲಿ ರೂಪಗೊಂಡಿದೆ.
ಪ್ರೀತಿಸುವ ಹೃದಯಗಳಿಗಾಗಿ ಹಾತೊರೆಯುವ ಇವರೆಲ್ಲ ಒಂದು ರೀತಿ ವಿಫಲ ಪ್ರೇಮಿಗಳು, ಪ್ರೀತಿಸಿ ಮದುವೆಯಾದ ಸನಿಹ ಹಾಗೂ ಕುಮಾರ್ ಸಂಬಂಧದಲ್ಲಿ ಒಡಕು ಕಂಡರೆ, ಹಿರಿಯರು ನಿರ್ಧರಿಸಿ ಮದುವೆಯಾದ ಜಗನ್ ಗೆ ಪತ್ನಿಯ ಪ್ರೀತಿ ದೊರೆಯುವುದಿಲ್ಲ, ಅವಳೋ ತನ್ನ ಹಿಂದಿನ ಪ್ರೇಮಿಯ ಕುರಿತ ಯೋಚಿಸುತ್ತ ಈ ಸಂಬಂಧ ಕಡೆಗಣಿಸುತ್ತಾಳೆ. ಆದರೆ ಟೈಗರ್ ಸೋಮ ತನ್ನ ಸಹೋದ್ಯೋಗಿಯನ್ನೇ ಪ್ರೀತಿಸಿ ಅವಳನ್ನು ಮದುವೆಯಾಗಲು ಬಯಸುತ್ತಾನೆ .ಅವಳು ಸಹ ಇವನಿಂದ ಆಕರ್ಷಿತಳಾಗುತ್ತಾಳೆ.
ಗಂಭೀರ ಸ್ವಭಾವದ ಆದರ್ಶಮಯವಾಗಿ ಚಿತ್ರತವಾಗಿರುವ ರಂಜಿತ್ ನ ಪಾತ್ರವೇ, ಇಲ್ಲಿ ವಿಶೇಷ, .ಅನಿರೀಕ್ಷಿತವಾಗಿ ಭೇಟಿಯಾಗುವ ಯುವತಿಯೊಂದಿಗೆ ಅವನಿಗೆ ಪ್ರೇಮ ಹುಟ್ಟುತ್ತದೆ, ಆಕೆ ವಿಧವೇ ಹಾಗೂ ಗರ್ಭಿಣಿ ಎಂದು ತಿಳಿದೂ ಅವಳಿಗೆ ಬಾಳು ಕೊಡಲು ನಿರ್ಧರಿಸುತ್ತಾನೆ. ಇಲ್ಲಿ ಕುವೆಂಪುರವರ ಮಂತ್ರ ಮಾಂಗಲ್ಯ ಮುನ್ನಡೆಗೆ ಬಂದಿದೆ, ಹೀಗೆ ರಂಜಿತ್ ಮದುವೆಗೆ ಆಮಂತ್ರಿತರಾಗುವ ಹಳೆಯ ಸ್ನೇಹಿತರು ಅವನ ಆದರ್ಶಗಳಿಂದ ವ್ಯಕ್ತಿತ್ವದಿಂದ ಪ್ರಭಾವಿತರಾಗಿ ತಮ್ಮ ದಾಂಪತ್ಯದ ಹಳಸಿದ ಸಂಬಂಧಗಳನ್ನು ಸರಿಪಡಿಸಿಕೊಂಡು ಪರಿವರ್ತಿತರಾಗುವುದು ಚಿತ್ರದ ಭಾವನಾತ್ಮಕ ಹಾಗೂ ಚಿತ್ರಕಥೆಯ ಗಟ್ಟಿ ಅಂಶ.
ಕಟ್ಟುವ ಕನಸುಗಳಿಗೂ ವಾಸ್ತವ ಬದುಕಿಗೆ ಇರುವ ಸಂಬಂಧವನ್ನು ಈ ಸಿನಿಮಾ ಚೆನ್ನಾಗಿ ತಿಳಿಸುತ್ತದೆ ಸಂಬಂಧಗಳಲ್ಲಿ ಅಹಂನಿಂದ ಉಂಟಾಗುವ ಒಡಕುಗಳು , ಹೊಂದಾಣಿಕೆ ಕಡಿಮೆಯಾಗುತ್ತಿರುವ ಇಂದಿನ ಯುವ ಜೋಡಿಗಳಿಗೆ ಪ್ರೇಮವೆಂಬುದು ಬರಿಯ ಆಕರ್ಷಣೆಯಲ್ಲ, ಅದರಿಂದ ಆಚೆಗೆ ಗಟ್ಟಿ ಆಗುತ್ತಾ ಸಾಗುವ ಸುದೀರ್ಘ ಪಯಣ ಎಂಬ ಸಂದೇಶವನ್ನು ಚಿತ್ರ ನೀಡುತ್ತದೆ.
ಇಲ್ಲಿ ಸ್ನೇಹ ಪ್ರೀತಿ ತಮಾಷೆ ತ್ಯಾಗ ಹುಡುಕಾಟ ಹುಡುಗಾಟ ಎಲ್ಲವೂ ಇದೆ, ಮೊದಲಾರ್ಧ ಭಾಗದಲ್ಲಿ ಕಾಲೇಜು ಹುಡುಗರ ಪ್ರೀತಿ ಪ್ರಣಯಗಳು ಹೈಸ್ಕೂಲ್ ಮಕ್ಕಳ ಎಳಸು ಪ್ರೇಮದಂತೆ ಕಂಡರೂ ದ್ವಿತೀಯ ಭಾಗದಲ್ಲಿ ಚಿತ್ರಗಂಭೀರತೆಯನ್ನು ಪಡೆದು ಸದಭಿರುಚಿಯ ಚಿತ್ರವಾಗಿ ಮಾರ್ಪಾಟಾಗಿದೆ ಸೋಮು ರವರ ಹಾಸ್ಯ ಸಂಭಾಷಣೆ ಟೈಮಿಂಗ್ ಅದ್ಭುತವಾಗಿದ್ದು ಚಿತ್ರದ ಓಟಕ್ಕೆ ಬೆಂಬಲ ನೀಡುತ್ತದೆ.
ಇಂದಿನ ಇಂಜಿನಿಯರಿಂಗ್ ಕಾಲೇಜುಗಳ ವಾತಾವರಣ ಯುವ ಪ್ರೇಮಿಗಳ ಜೀವನ ಸಾಫ್ಟ್ವೇರ್ ಉದ್ಯಮಿಗಳ ಕಥನ ಲವಲವಿಕೆಯಿಂದ ಕೂಡಿದ್ದು ಚಿತ್ರವನ್ನು ನೋಡಿಕೊಂಡು ಹೋಗುವಂತೆ ಮಾಡುತ್ತದೆ ಉತ್ತಮ ಅಭಿರುಚಿಯ ಹಾಸ್ಯ ,ಮುಜುಗರ ಪಡುವ ದೃಶ್ಯಗಳಿಲ್ಲದ ಚಿತ್ರ ಅಚ್ಚುಕಟ್ಟಾಗಿ ಮೂಡಿ ಬರಲು ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಈ ಸಿನಿಮಾದ ಮೂಲಕ ಉತ್ತಮ ನಿರ್ದೇಶಕರಾಗುವ ಭರವಸೆ ಮೂಡಿಸುತ್ತಾರೆ ಅವರು.


ಚಿತ್ರದಲ್ಲಿ ನವೀನ್ ಶಂಕರ್ ನಟನೆಯ ( ರಂಜಿತ್ )ಪಕ್ವತೆಗೆ ಪೂರ್ಣ ಅಂಕ ನೀಡಬಹುದು, ಅಂತರ್ಮುಖಿ ಯುವಕ, ಆದರ್ಶ ಯುವಕ ಹೀಗೆ ವಿಭಿನ್ನ ಆಯಾಮದಲ್ಲಿ ಅವರು ಮಿಂಚಿದ್ದಾರೆ. ಅರ್ಚನಾಜೋಯಿಸ್ ಅವರ ಅಭಿನಯ ಗಾಂಭೀರ್ಯದಿಂದ ಮನಮುಟ್ಟುತ್ತದೆ. ಐಶಾನಿ ಶೆಟ್ಟಿ ಮುದ್ದು ಗೊಂಬೆಯಂತೆ ಕಾಣುತ್ತಾರೆ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.‌ ಸಂಯುಕ್ತ ಹೊರನಾಡುರವರು ಹೀಗೆ ಬಂದು ಹಾಗೆ ಹೋಗುತ್ತಾರೆ. ಪುಟ್ಟ ಪಾತ್ರದಲ್ಲಿ ಸಿಸಿಲಿಯ ಡೆಬ್ಬರಮ ನೆನಪಿನಲ್ಲಿ ಉಳಿಯುತ್ತಾರೆ.
ಈ ಸಿನಿಮಾಗೆ ನಿರ್ದೇಶಕರ ಜೊತೆಗೆ ಪ್ರಶಾಂತ್ ರಾಜಪ್ಪ ಮತ್ತು ಮಾಸ್ತಿ ಉತ್ತಮ ಸಂಭಾಷಣೆ ಬರೆದಿದ್ದಾರೆ. ಬದುಕಿನ ಬಗ್ಗೆ ಕೆಲವು ಅರ್ಥಪೂರ್ಣ ಸಂಭಾಷಣೆಗಳು ಸಿನಿಮಾದಲ್ಲಿ ಮೂಡಿವೆ, ಹಾಸ್ಯ ಸಂಭಾಷಣೆ ಕೂಡ ನಕ್ಕು ನಗಿಸುತ್ತದೆ. ಚಿತ್ರಕ್ಕೆ ಲವಲವಿಕೆ ತಂದುಕೊಟ್ಟಿದೆ. ಸಿನಿಮಾದ ಮೂಡ್ ಕಟ್ಟಿಕೊಡುವಲ್ಲಿ ಸಂಗೀತದ ಪಾತ್ರ ಹಿರಿದಾಗಿದೆ, ಹಿನ್ನೆಲೆ ಸಂಗೀತ ತುಂಬಾ ಚೆನ್ನಾಗಿದೆ ಮತ್ತು ಪರಿಣಾಮಕಾರಿಯಾಗಿದೆ , ಜೋಕೋಸ್ಟ ಅವರ ಸಂಗೀತ ನಿರ್ದೇಶನದಲ್ಲಿ ಬೆಳಕಲ್ಲಿ ಕಾಣದ ಇರುಳಿಗೂ …ತಲೆಹರಟೆ ಮಾಡುತ್ತಿದೆ ಈ ಹೃದಯ ….ಎಂಬ ಹಾಡುಗಳು ಚೆನ್ನಾಗಿವೆ. ಛಾಯಾಗ್ರಹಣದಲ್ಲಿ ಶಾಂತಿ ಸಾಗರ್ ರವರ ಕಾರ್ಯ ಮೆಚ್ಚುವಂತದ್ದಾಗಿದೆ, ಕುಪ್ಪಳ್ಳಿ ಯ ಕವಿ ಶೈಲ ಮಲೆನಾಡಿನ ತಾಣಗಳು ಸಮುದ್ರ ತೀರಗಳನ್ನು ಸುಂದರವಾಗಿ ಸೆರೆಹಿಡಿಯಲಾಗಿದೆ.
ಬದುಕಿನಲ್ಲಿ ಬಹಳ ನಿರೀಕ್ಷೆಗಳನ್ನು ಇಟ್ಟುಕೊಳ್ಳದೆ ಅಹಂನ ಗೋಡೆಗಳನ್ನು ಕಟ್ಟಿಕೊಳ್ಳದೆ ಹೊಂದಿಕೊಂಡು, ಬಂದಿದ್ದನ್ನು ಬಂದಹಾಗೆ ಸ್ವೀಕರಿಸಬೇಕೆಂಬ ಸಂದೇಶ ಸಾರುವ ಈ ಸಿನಿಮಾ ಆರ್ಭಟವಿಲ್ಲದೆ ಶಾಂತವಾಗಿ ತೆರೆಯ ಮೇಲೆ ಹರಿದಾಡಿದೆ. ಚೇತೋಹಾರಿ ಕಥೆಯನ್ನು ಹೊಂದಿ ಬಹುತಾರಗಣದ ಈ ಚಿತ್ರ ಅಬ್ಬರ ಬಯಸದೆ ಶಾಂತ ಹರವಿನ ಸಿನಿಮಾ ನೋಡಬಯಸುವವರಿಗೆ ಇಷ್ಟವಾಗುತ್ತದೆ, ಅಮೆಜಾನ್ ಪ್ರೈಮ್ ನಲ್ಲಿ ಚಿತ್ರ ವೀಕ್ಷಣೆಗೆ ಲಭ್ಯವಿದೆ.
ತಾರಾಗಣ – ನವೀನ್ ಶಂಕರ್ ,ಶ್ರೀ ಮಹದೇವ್, ಐಶಾನಿ ಶೆಟ್ಟಿ ,ಅರ್ಚನಾ ಜೋಯಿಸ್ ,ಸಂಯುಕ್ತ ಹೊರನಾಡು ಭಾವನಾ ರಾವ್, ಅನಿರುದ್ಧ ಆಚಾರ್ಯ
ನಿರ್ದೇಶನ -ರಾಮೇನಹಳ್ಳಿ ಜಗನ್ನಾಥ್
ಛಾಯಾಗ್ರಹಣ- ಶಾಂತಿ ಸಾಗರ್ ಹೆಚ್ ಜಿ
ಸಂಗೀತ -ಜೋಕೋಸ್ಟ
ನಿರ್ಮಾಣ -ಸಂಡೇ ಸಿನಿಮಾಸ್.


ಕುಸುಮ ಮಂಜುನಾಥ್

ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಕುಸುಮಾ ಮಂಜುನಾಥ್ ರವರು ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತಿ ಯನ್ನು ಹೊಂದಿದ್ದಾರೆ. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ “ಸಾಧನ ವಿದ್ಯಾ” ಮಾಸ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ನಾಲ್ಕೈದು ವರ್ಷಗಳು ಕೆಲಸ ಮಾಡಿದ ಅನುಭವವಿದೆ. ರೋಟರಿ ಸಹಯೋಗದಲ್ಲಿ ಸಾಕ್ಷರತಾ ಮಿಷನ್ ಕಾರ್ಯಕ್ರಮದಡಿ ಕೂಲಿ ಕಾರ್ಮಿಕರಿಗೆ ಅಕ್ಷರ ಕಲಿಸುವ ಸೇವೆ ಮಾಡಿದ್ದಾರೆ. ಕಥೆ ,ಕವನ, ಲೇಖನ ಬರೆಯುವುದು ಇವರ ಹವ್ಯಾಸ. ಹಲವು ಬ್ಲಾಗ್ ಗಳಲ್ಲಿ ,ನಿಯತ ಕಾಲಿಕೆಗಳಲ್ಲಿ ಇವರ ಲೇಖನ ಪ್ರಕಟವಾಗಿದೆ. ಸಂಗೀತ ಕೇಳುವುದು ,ಪತ್ರಿಕೆ ಓದುವುದು ಇವರ ಇತರೆ ಹವ್ಯಾಸ.

Leave a Reply

Back To Top