ಸುಧಾ ಪಾಟೀಲ್ ಕವಿತೆ-ಕಾಡುತಿವೆ ನೆನಪುಗಳು

ಕಾವ್ಯ ಸಂಗಾತಿ

ಸುಧಾ ಪಾಟೀಲ್

ಕಾಡುತಿವೆ ನೆನಪುಗಳು

ಹೃದಯದ ಮೂಲೆಯಲ್ಲಿ
ಹುಟ್ಟುತಿವೆ ನೆನಪುಗಳು
ಕಾಡುತಿವೆ ಬಿಡಿಬಿಡಿಯಾಗಿ
ಅನುಕ್ಷಣವೂ ಅನುದಿನವೂ

ಬೇಡೇ0ದರೂ ಬಿಡದ
ನಿರ್ಲಕ್ಷಿಸಿದರೂ ಹೋಗದ
ನನ್ನಲ್ಲೇ ತಳವೂರಿದ
ಈ ಬೆಂಬಿಡದ ನೆನಪುಗಳು

ಯಾರಿಗೂ ಹೇಳಲಾಗದ
ಬಗೆಹರಿಸಲಾರದ ಒಗಟುಗಳು
ಅಂತರಾತ್ಮದಲ್ಲಿ ನೆಲೆಸಿದ
ಈ ವ್ಯಕ್ತಪಡಿಸಲಾರದ ನೆನಪುಗಳು

ಯಾವಾಗಲೂ ಜರ್ಜರಿತಳಾಗುವಂತೆ ಮಾಡುವ
ನೆನಪುಗಳು
ಹಂಚಿಕೊಂಡರೆ ಇನ್ನಷ್ಟು
ಕ್ಲಿಷ್ಟಗೊಳ್ಳುವ ಬಿಡಿಸಲಾರದ
ನೆನಪುಗಳು
ಯಾವುದೇ ಬಿಗುಮಾನವಿಲ್ಲದೆ
ನನ್ನಲ್ಲೇ ನೆಲೆಸಿರುವ ನೆನಪುಗಳು
ಮಗ್ಗುಲ ಹೊರಳಿಸಿದಾಗೊಮ್ಮೆ
ಸರಿದಾಡುವ ನೆನಪುಗಳು

ಕೇಳಿಸಿಕೊಳ್ಳಲು ಕಿವಿಗಳಿದ್ದರೂ
ಹೇಳಲು ಮುಜುಗುರ ಪಡುವ ನೆನಪುಗಳು
ಹೇಳಲಾರದೆ ಚಡಪಡಿಸಿದೆ
ಮ್ಲಾನವದನಳಾದೆ… ಅಂತರ್ಮುಖಿಯಾದೆ…
ಗೂಡಿನಲ್ಲೇ ಅವಿತುಕೊಂಡೆ…
ಮನಸಿನ ಒಳಪದರಗಳ ಬಿಚ್ಚಿ
ತೋರಿಸದಾದೆ…ತೋರಿಸದಾದೆ


2 thoughts on “ಸುಧಾ ಪಾಟೀಲ್ ಕವಿತೆ-ಕಾಡುತಿವೆ ನೆನಪುಗಳು

  1. ಮೇಡಮ್… ನೆನಪುಗಳ ಕುರಿತು ಬರೆದ ಕವಿತೆ ಸೊಗಸಾಗಿದೆ.

    1. ಬಸವರಾಜ ಘೋಡಗೇರಿ ಪ್ರೌಢಶಾಲೆ ಶಿಕ್ಷಕರು ಖಾನಾಪುರ.

Leave a Reply

Back To Top