ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ
ಗಜಲ್
ನೀಲಿಬಾನ ಮುತ್ತುಂಡು ಮತ್ತೇರಿ ಮಲಗಿದ ಮುಗಿಲ ಚಂದಿರನಂತೆ ಅವನ ಪ್ರೀತಿ
ಬೇಲಿಹೂವ ತುತ್ತುಂಡು ಹೊತ್ತೇರಿ ದುಂಬಿ ಮೈದುಂಬಿ ಮೆರೆದಂತೆ ಅವನ ಪ್ರೀತಿ
ನಭದ ಉಪ್ಪರಿಗೆಯಲಿ ಕುಳಿತು ಕೊಪ್ಪರಿಗೆ ಹೊನ್ನಸುರಿವ ಸೂರ್ಯನಂತೆ ಅವನ ಪ್ರೀತಿ
ಇರುಳ ಮೊಗ್ಗೆಯರಳುವ ಮುನ್ನ ಅಂಬರದ ಅರುಣ ಅಂಬುಧಿಯೊಡಲ ಸೇರಿದಂತೆ ಅವನ ಪ್ರೀತಿ
ನೀರವತೆ ತೇರಿನಲಿ ತೇಲುತಿಹ ನಿಶೆಯ ಮೋಡಿಗೆ ಚುಕ್ಕಿಗಳು ಕಣ್ಣುಮಿಟುಕಿಸಿದಂತೆ ಅವನ ಪ್ರೀತಿ
ಮುಸ್ಸಂಜೆಯ ಅರೆಬಿರಿದ ತುಟಿಯ ದುಂಡು ಮಲ್ಲಿಗೆಮೊಗ್ಗ ಘಮಲಂತೆ ಅವನ ಪ್ರೀತಿ
ಗಲ್ಲಿಗಲ್ಲಿಯ ಗಲ್ಲ ಸವರುತ ನಡೆದ ತಿಂಗಳನ ಬೆಳದಿಂಗಳ ತುಂಟಾಟದಂತೆ ಅವನ ಪ್ರೀತಿ
ದುಂಬಿಕಂಗಳ ಮುಖ ಕಮಲ ಚುಂಬಿಸುವ ಮುಂಗುರುಳ
ಜೂಟಾಟದಂತೆ ಅವನ ಪ್ರೀತಿ
ನಾಗೊಂದಿಗೆ ಮೇಲೆ ನುಲಿಯುತಿಹ ನೂರು ನಗೆ ದೀಪಗಳ ನರ್ತನದಂತೆ ಅವನ ಪ್ರೀತಿ
ಗುಳೆಹೋದ ಕನಸುಗಳ ಎಳೆತಂದು ಇಂದುವಿನ ಎದೆಯಲಿ ಬಿತ್ತಿದಂತೆ ಅವನ ಪ್ರೀತಿ