ಅಕ್ಕಮಹಾದೇವಿ ಜಯಂತಿ ವಿಶೇಷ

ವಿಜಯಲಕ್ಷ್ಮೀ ಕೊಟಗಿ

ಅಕ್ಕ ನನ್ನಕ್ಕ.

ಅಕ್ಕ ನನ್ನಕ್ಕ.
ಅದೊಂದು ಶತಮಾನ
ನಸ್ತ್ರೀ ಸ್ವಾತಂತ್ರ್ಯಂ ಅರ್ಹತಿ
ಎಂದ ಮನುವಿನ ಮಾತ ಧಿಕ್ಕರಿಸಿ
ಸ್ತ್ರೀಪರ ಧ್ವನಿಯಾದ ಬಂಡಾಯಗಾರ್ತಿ ವೀರ ವೀರಾಂಗನೆ ನನ್ನಕ್ಕ

ಹೆಣ್ಣಿಗಾಧಾರ ಗಂಡೆಂಬರು ಇಂತಪ್ಪ
ಲೌಕಿಕದ ಗಂಡನ ಒಲೆಯೊಳಗಿಕ್ಕೆಂದು
ಗಂಡನಾಸರೆಯೆಂಬ ರಿವಾಜ ಮುರಿದು
ಸಂಸಾರದ ಹಂಗು ತೊರೆದ ಹೋರಾಟಗಾರ್ತಿ ವೀರವನಿತೆ ನನ್ನಕ್ಕ

ಮುಖವೇ ಇಲ್ಲದ ಶೋಷಿತೆಗೆ ಪರದೆಯೇ?
ರಜಸ್ವಲೆ ಶೂದ್ರಾಣಿಗುಂಟೆ ಧಾರ್ಮಿಕ ಹಕ್ಕು? ಎಂದವರ ಎದುರಿಸಿ ದಿಟ್ಟತನದಿ ಧರ್ಮದೀಕ್ಷೆಯ ತೊಟ್ಟು ಲಿಂಗಪೂಜೆಗೈದು
ಮೂಢನಂಬಿಕೆಯ ಖಂಡಿಸಿದ ಶ್ರುತಕೀರ್ತಿ
ವೀರ ವಿರಾಗಿಣಿ ನನ್ನಕ್ಕ

ವಸ್ತ್ರದ ಮರೆಯಲ್ಲಿಹುದೆಂಬರು ಸೌಂದರ್ಯ ಬಿಚ್ಚಿ ಬಿಸುಟಲೇನಿದೆ ಅಲ್ಲಿ? ಏನಿಲ್ಲ
ವಸ್ತ್ರದಿ ಕಾಮ ವಿವಸ್ತ್ರದಿ ಭ್ರಮನಿರಸನ ದಿಗಂಬರತ್ವದಿ ಮೆರೆದ ಚೇತನ ಮೂರ್ತಿ
ವೈರಾಗ್ಯನಿಧಿ ನನ್ನಕ್ಕ

ಪಂಕಜ ಪತ್ರದ ಮಂಜಿನಂತಿದ್ದು ಭವದಿ
ಅನುಭವದಿ ಅನುಭಾವವ ಅನುಸಂಧಿಸಿ
ಜಗದ ಕಣ್ಣು ತೆರೆಸಿಹಳು ಧಾಷ್ಠಿಕದಿ
ನಮ್ಮ ಉಜ್ವಲಭಿಮಾನದ ಸೊಡರು ವೀರಮಾತೆ ನನ್ನಕ್ಕ.


ವಿಜಯಲಕ್ಷ್ಮೀ ಕೊಟಗಿ

Leave a Reply

Back To Top