ಕನ್ನಡ ಕಾವ್ಯ ಕುರಿತು

ಕಾವ್ಯವನ್ನು ಬಗೆಯುವ ಬಗೆ

White Ceramic Teacup With Saucer Near Two Books Above Gray Floral Textile

ರಾಮಸ್ವಾಮಿ ಡಿ.ಎಸ್.

ಕಾವ್ಯವನ್ನು ಬಗೆಯುವ ಬಗೆ

ಮೊನ್ನೆ ಭಾನುವಾರ ನಾವೆಲ್ಲ ಸ್ವಯಂ ಕರ್ಫ್ಯೂ ವಿಧಿಸಿಕೊಂಡು ಮನೆಯಲ್ಲೇ ಇದ್ದಾಗ ಬೆಳಗಾವಿಯ ಕವಿ ಪ್ರವೀಣ ಆಯ್ದ ಕೆಲ ಯುವ ಕವಿಗಳನ್ನು ಫೇಸ್ಬುಕ್ ಲೈವಲ್ಲಿ ಬರುವಂತೆ ಆಯೋಜಿಸಿ ಕವಿತೆಗೆ ಇರುವ ಅನನ್ಯ ಸಾಧ್ಯತೆಗಳ ವಿಸ್ತಾರವ‌ನ್ನು ಮತ್ತೊಮ್ಮೆ ಕಾವ್ಯಾಸಕ್ತರಿಗೆ ತಿಳಿಯಪಡಿಸಿದರು. ಶ್ರೀ ಪ್ರವೀಣ ಮತ್ತು ಅವರ ಎಲ್ಲ ಗೆಳೆಯರಿಗೂ ಅಭಿನಂದನೆಗಳು.

ಕೆಲಸವಿಲ್ಲದೆ ಸುಮ್ಮನೆ ಏನನ್ನೋ ಟ್ರೋಲ್ ಮಾಡುತ್ತಿದ್ದಾಗ ಈ ಕವಿಗೋಷ್ಠಿಯ ಮೊದಲ ಕವಿ ವೀರಣ್ಣ ಮಡಿವಾಳರನ್ನು ಕೇಳಿಸಿಕೊಂಡೆ. ಅವರ ಮೊದಲ ಸಂಕಲನ ಸಾಕಷ್ಟು ಹೆಸರು ಮಾಡಿತ್ತು. ಮತ್ತು ಆ ಸಂಕಲನ ಕುರಿತ ಮೊದಲ ವಿಮರ್ಶೆ ಕನ್ನಡಪ್ರಭ ನನ್ನಿಂದ ಬರೆಸಿ ಪ್ರಕಟಿಸಿತ್ತು. ಕುತೂಹಲ ಹೆಚ್ಚಿ ಅವತ್ತು ಕವಿತೆಗಳನ್ನು ಪ್ರಸ್ತುತ ಪಡಿಸಿದ ಎಲ್ಲ ಕವಿಗಳನ್ನೂ ಕೇಳುತ್ತ (ಹಲವೊಮ್ಮೆ ನೆಟ್ ವರ್ಕ್ ಸಮಸ್ಯೆ ಇದ್ದರೂ) ವರ್ತಮಾನದಲ್ಲಿ ಬರೆಯುತ್ತಿರುವ ಭರವಸೆಯ ಮುಖಗಳನ್ನು ಕಂಡೆ. ರಾಜೇಂದ್ರ ಪ್ರಸಾದ್, ಭುವನಾ ಹಿರೇಮಠ, ಪ್ರವೀಣ, ಅರುಣ ಜೋಳದ ಕೂಡ್ಲಗಿ, ಮಮತಾ ಅರಸೀಕೆರೆ, ಭಾಗ್ಯಲಕ್ಡ್ಮಿ, ಮುಲ್ತಾನಿ, ಋಗ್ವೇದಿ ಮೊದಲಾಗಿ ಭಗವಹಿಸಿದ ( ಕೆಲವರ ಹೆಸರು ಮರೆತೆ) ಎಲ್ಲರ ಕವಿತೆಗಳೂ ಬೇರೆ ಬೇರೆ ಆಶಯದ ಆದರೆ ಮನು ಕುಲದ ನಿತ್ಯ ಸತ್ಯದ ಬೇಡಿಕೆಯಾಗಿಯೇ ಇದ್ದುದು ವಿಶೇಷ.

ಕಾವ್ಯಾಸಕ್ತತೆ ಮತ್ತು ಪ್ರಯೋಗಶೀಲತೆ ಹೊಸ ಕವಿಯ ರಚನೆಗಳಲ್ಲಿ ಕಂಡೊಡನೆಯೇ ಪ್ರತಿಕ್ರಯಿಸುವುದು ನನ್ನ ಅಭ್ಯಾಸ. ವೀರಣ್ಣ, ಅರುಣ, ಮಮತಾ, ರಾಜೇಂದ್ರ ಪ್ರಸಾದ್ ಕುರಿತು ಪತ್ರಿಕೆಗೆ ಬರೆದಂತೆಯೇ ಪ್ರವೀಣ, ಭುವನಾ, ಕುರಿತು ಫೇಸ್ಬುಕ್ಕಲ್ಲಿ ಬರೆದು ಅನ್ನಿಸಿದನ್ನು ದಾಖಲಿಸಿದ್ದೇನೆ. ವಿಮರ್ಶೆಯ ಹರಿತ ಸ್ನೇಹಕ್ಕೆ ಮುಳುವಾದ ಸಂದರ್ಭಗಳೂ ಇವೆ!

ಇರಲಿ. ಕಳೆದ ಮೂವತ್ತೈದು ವರ್ಷಗಳಿಂದಲೂ ಕವಿತೆಯ ಸಾಗಂತ್ಯದಲ್ಲಿ ಬದುಕು ಕಂಡುಕೊಂಡ ನನಗೆ ಹೊಸಕಾಲದ ಅದರಲ್ಲೂ ಹೊಸ ಮಾಧ್ಯಮಗಳಾದ ಫೇಸ್ಬುಕ್ ಮತ್ತು ವಾಟ್ಸ್ ಅಪ್ ಗುಂಪುಗಳಲ್ಲಿ ಹಾಗೇ ವೈಯುಕ್ತಿಕ ಪೇಜಲ್ಲಿ ಬರೆಯುತ್ತಿರುವ ಹಲವರ ಬಗ್ಗೆ ಖುಷಿ ಮತ್ತು ಕೆಲವರ ಬಗ್ಗೆ ಸಂತಾಪಗಳೂ ಇವೆ. ಹೊಗಳಿಕೆಗೋ ಲೈಕಿಗೋ ಅಥವ ತುಂಬ ಈಸಿಯಾದ ಇಮೋಜಿಗಳಿಗೋ ಇರುವ ಪ್ರಾಧಾನ್ಯತೆ ವಿಮರ್ಶೆಯ ನಿಜದ ಮಾತುಗಳಿಗೆ ಪ್ರೋತ್ಸಾಹಕ್ಕೆ ಹೇಳಿದ ತಿದ್ದುಪಡಿಗಳಿಗೆ ಇಲ್ಲದುದನ್ನು ಕಂಡಾಗ ಬೇಸರವೂ ಆಗಿದೆ. ಕಾವ್ಯಕೇಳಿ, ಕಾಜಾಣ, ಪದ್ಯ, ಮೊದಲಾದ ತಾಣಗಳು, ಹಾಗೇ ಅವಧಿ, ಕೆಂಡಸಂಪಿಗೆ, ಸಂಗಾತಿ, ಸಂಪದ ಮೊದಲಾದ ವೆಬ್ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ಕವಿತೆಗಳೂ ಇದುವರೆಗೂ ನಂಬಿದ್ದ ಸಾಹಿತ್ಯ ಚರಿತ್ರೆ ಕಟ್ಟಿಕೊಟ್ಟಿದ್ದ ಮಿತಿ ಮತ್ತು ಪಾತಳಿಯನ್ನು ವಿಸ್ತರಿಸಿ ಹಾಗೇ ಕೆಡವಿ ಹೊಸದನ್ನು ಕಟ್ಟುತ್ತಿರುವ ಈ ಕಾಲದ ಎಲ್ಲ ನಿಜ ಕವಿಗಳನ್ನೂ ಅಭಿನಂದಿಸುತ್ತೇನೆ. ಈ ಕುರಿತು ಸದ್ಯ ಅನಿಸಿದ್ದನ್ನು ವಿಸ್ತರಿಸಿ ಈ ಲೇಖನ.

ನಮ್ಮಲ್ಲಿ ಬಹಳ ಜನ ಕವಿತೆಯೆಂದರೆ ಕವಿಗೋಷ್ಠಿಯೆಂದರೆ ಮೂಗು ಮುರಿಯುತ್ತೇವೆ. ಕವಿತೆಯನ್ನು ಓದುವುದು ಅಥವ ಬರೆಯುವುದೆಂದರೆ ಮಾಡಲು ಬೇರೇನೂ ಕೆಲಸವಿಲ್ಲದವರು ಹೊಂಚಿಕೊಂಡ ಕೆಲಸವೆಂದು ಅನ್ನುವವರೂ ಇದ್ದಾರೆ. ಆದರೂ ಸಾಹಿತ್ಯ ಸಮ್ಮೇಳನಗಳ ಮುಖ್ಯ ಆಕರ್ಷಣೆಯೇ ಕವಿಗೋಷ್ಠಿಗಳಾಗಿರುವುದೂ ವಿಶೇಷವೇ. ಪಂಡಿತರಿಗಷ್ಟೇ ಕವಿತೆ ಪಾಮರರಿಗೆ ಏಕದರ ಗೊಡವೆ ಅನ್ನುವವರೂ ಇದ್ದಾರೆ. ಇನ್ನು ಕವಿಯಲ್ಲದವರು ಅಥವ ಕವಿತೆಯ ಗೊಡವೆ ಬೇಡದೆಯೂ ಕವಿತೆಯ ಜೊತೆಗೆ ಅನಿವಾರ್ಯವಾಗಿ ಬೆರೆಯುವವರೆಂದರೆ ಅದನ್ನು ಪಠ್ಯವಾಗಿ ಓದಲೇಬೇಕಿರುವ ವಿದ್ಯಾರ್ಥಿಗಳು ಮತ್ತು ಅದನ್ನವರಿಗೆ ಪಾಠ ಹೇಳಬೇಕಾದ ಗುರುತರ ಜಾವಾಬ್ದಾರಿ ಹೊಂದಿರುವ ಅಧ್ಯಾಪಕರು.
ಕವಿತೆಯನ್ನು ಪಾಠ ಮಾಡುವುದು ಎಂದರೆ ಅಧ್ಯಾಪಕರಿಗೆ ಹಿಂಜರಿಕೆ.ವರ್ಷಾವಧಿ ಪರೀಕ್ಷೆಯಲ್ಲಿ ಕವಿತೆಗಳ ಮೇಲೆ ಕೇಳಿದ ಪ್ರಶ್ನೆಗಳಿಗೆ ಉತ್ತರಗಳನ್ನು ಬರೆಯುವುದೆಂದರೆ ವಿದ್ಯಾರ್ಥಿಗಳಿಗೆ ಅಂಜಿಕೆ. ಅರ್ಥವಾಗದು ಎಂಬ ಅಂಜಿಕೆ ಹುಡುಗರಿಗೆ. ಅರ್ಥವಾಗದಿದ್ದರೆ ಎಂಬ ಅಂಜಿಕೆ ಅಧ್ಯಾಪಕರಿಗೆ. ಓದಿದ ಕವಿತೆ ಅರ್ಥವಾಗದಿದ್ದರೆ ನಮ್ಮ ಅಹಂಕಾರಕ್ಕೆ ಪೆಟ್ಟು. ಅದಕ್ಕೇ ನಮಗೆ ಕವಿತೆಯ ಉಸಾಬರಿಯೇ ಬೇಡ ಎಂದು ಮುಖ ತಿರುಗಿಸುವ ಮಂದಿ ಬಹಳ. ಕವಿತೆಯೊಂದನ್ನು ಓದಿದೊಡನೆಯೇ ಅದು ಅರ್ಥವಾಗಲೇ ಬೇಕು ಎಂದು ದಯವಿಟ್ಟು ಹಠಮಾಡಬೇಡಿ. ಕವಿತೆಯನ್ನು ಅರ್ಥದ ಗೂಟಕ್ಕೆ ಕಟ್ಟಬೇಡಿ. ಅದನ್ನು ಸುಮ್ಮನೆ ವಿಹಾರಕ್ಕೆ ಬಿಡಿ. ಅಂಗಳದಲ್ಲಿ ಆಡಬಯಸುವ ಪುಟ್ಟ ಮಗುವಿನಂತೆ ಕವಿತೆ ಆರಾಮಾಗಿ ನಿಮ್ಮ ಮನದ ಅಂಗಳದಲ್ಲಿ ಆಡಿಕೊಳ್ಳಲಿ. ಕವಿತೆಯ ಭಯವನ್ನು ಗೆಲ್ಲಲು ನಾವು ಆರಂಭದಲ್ಲಿ ಕೈಗೊಳ್ಳಬೇಕಾದ ಸುಲಭ ಉಪಾಯವಿದು.

ಸುಮ್ಮನೆ ಓದುತ್ತಾ ಹೋದರೆ, ಓದುತ್ತಲೇ ಹೋದರೆ ಹೇಗೆ ಈಗ ತಾನೇ ಓಡಾಡಲು ಪ್ರಾರಂಭಿಸಿರುವ ಮಗು ತನ್ನ ಆಟದಲ್ಲಿ ಒಂದು ಲಯ ಕಂಡೀತೋ ಹಾಗೆಯೇ ನೀವೂ ಕವಿತೆಯನ್ನು ಕಾಣಬೇಕು. ಕವಿತೆ ಹೇಗೆ ನಡೆಯುವುದು, ಹೇಗೆ ನಗುವುದು, ಹೇಗೆ ಅತಾರ್ಕಿಕವನ್ನು ಪಲುಕುವುದು ಗಮನಿಸಿ.
ಕವಿತೆ ಎಂದರೆ ಮೊದಲು ಗಮನಿಸ ಬೇಕಾದದ್ದು ಅದನ್ನು ಕವಿಯು ಹೇಗೆ ಗುನುಗುನಿಸುವ ಮಾತುಗಳನ್ನು ಹಿಡಿದು ನೇಯ್ದು ಮಾಲೆ ಮಾಡಿದ್ದಾನೆ ಎಂಬುದನ್ನು ಓದಿನ ಮೂಲಕವೇ ದಕ್ಕಿಸಿಕೊಳ್ಳಬೇಕು.
ಕವಿತೆಯ ಗ್ರಹಿಕೆ ಎಂಬುದು ಕವಿತೆಯ ಶಬ್ದ ಸಾಮಗ್ರಿಯಿಂದ ನೀವೇ ಸ್ವಂತ ಕಟ್ಟಿಕೊಂಡ ಗ್ರಹಿಕೆ ಎಂಬುದನ್ನು ಮರೆಯದಿರಿ. ಈ ಪದ್ಯದ ಇನ್ನೊಬ್ಬ ಓದುಗ ಭಿನ್ನವಾದ ಬೇರೆ ಒಂದು ಗ್ರಹಿಕೆಯನ್ನೇ ತನ್ನ ಓದಿನಿಂದ ಕಟ್ಟಿಕೊಂಡರೆ ನೀವು ಆತಂಕಗೊಳ್ಳಬೇಕಿಲ್ಲ. ಸದ್ಯಕ್ಕೆ ಇದು ನಿಮ್ಮ ಕಾವ್ಯ ಗ್ರಹಿಕೆ. ಮುಂದೆ ನಿಮ್ಮ ಓದು ಪರಿಷ್ಕಾರಗೊಂಡಂತೆ ಕವಿತೆ ಬೇರೊಂದು ವಿಭಿನ್ನವಾದ ಗ್ರಹಿಕೆಯನ್ನೇ ಕಟ್ಟಿಕೊಳ್ಳಬಲ್ಲುದು. ಕವಿತೆ ಒಂದೇ; ಆದರೆ ಅದರ ಗ್ರಹಿಕೆಗಳೂ ಅನಂತ. ಈ ನಂಬಿಕೆ ಮತ್ತು ವಿಶ್ವಾಸದೊಂದಿಗೆ ಹೊಸ ಕಾವ್ಯಾರ್ಥಿಗಳು ತಮ್ಮ ಕಾವ್ಯ ಶೋಧವನ್ನು ಮುಂದುವರೆಸಲಿ. ಕವಿತೆಯೆಂಬುದು ನಿರಂತರ ವಿಕಸನಶೀಲವಾದ ಒಂದು ಜೈವಿಕ ಭಾಷಾನುಸಂಧಾನ ಎಂಬ ಅರಿವು ನಿಮಗಿರಲಿ. ಅದಕ್ಕಿಂತ ಮುಖ್ಯ ನಮ್ಮ ಪೂರ್ವಸೂರಿಗಳನ್ನೂ ಹಾಗೇ ಸಮಕಾಲೀನರನ್ನೂ ಎಷ್ಟು ಓದಿಕೊಂಡಿದ್ದೀರಿ ಎನ್ನುವುದು ಮುಖ್ಯ. ಸಾಹಿತ್ಯ ಚರಿತ್ರೆಯ ಅದು ನಡೆದ ಬಂದ ದಾರಿಯ ಬಗ್ಗೆ ಕೊಂಚವಾದರೂ ತಿಳುವಳಿಕೆ ನಾವು ನಡೆಯುತ್ತಿರುವ ದಾರಿಗೆ ತೋರುಬೆರಳು ಅನ್ನುವುದನ್ನು ಮರೆಯದಿರೋಣ. ಹಲವು ಯುವ ಬರಹಗಾರರು ಪರಂಪರೆಯನ್ನು ಧ್ಯಾನಿಸದೇ ಸುಮ್ಮನೇ ಮುಂದುವರಯುತ್ತಿರುವುದನ್ನೂ ಓದಿನಿಂದ ಬಲ್ಲೆ. ನಿಜಕ್ಕೂ ಭಾಷೆಯ ಸೊಗಸು, ಅದರ ನಿರ್ಮಿತಿಯ ವಿನ್ಯಾಸ ಹಾಗೂ ಮಿತಿ ಅರ್ಥವಾಗುವುದೇ ನಿರಂತರದ ಓದಿನಿಂದ‌. ಅನ್ಯರನ್ನು ಓದದೇ ನಾವು ನಮ್ಮ ಕಾವ್ಯ ಬೆಳೆಯಲಾರದು.

ಇನ್ನು ನವ್ಯ ನವೋದಯ ಬಂಡಾಯ ಇತ್ಯಾದಿ ಇತ್ಯಾದಿ ಪ್ರಬೇಧಗಳೆಲ್ಲ ನಮ್ಮ ಓದಿನ ರುಚಿಯನ್ನು ಮತ್ತು ಕವಿತೆಗಳ ಓದಿನ ಮೂಲಕ ನಾವೇ ಕಟ್ಟಿಕೊಂಡ ಗ್ರಹಿಕೆಗಳನ್ನು ಅಳೆಯುವ ಸಾಧನವಾಗಿವೆಯೇ ವಿನಾ ಅವೇ ಅಂತಿಮವಲ್ಲ. ಏಕೆಂದರೆ ಒಂದು ಕಾಲದಲ್ಲಿ ಗಣ ಪ್ರಸ್ತಾರ ಛಂದೋಬಂಧವಿರದುದನ್ನು ಕಾವ್ಯವೆಂದು ಒಪ್ಪುತ್ತಿರಲಿಲ್ಲ. ನಂತರ ಬಂದ ನವೋದಯ ಸಾಹಿತ್ಯ ಮಾರ್ಗ ಲಯ ಮತ್ತು ಭಾವಗೀತಾತ್ಮಕ ಶೈಲಿಯನ್ನು ಮೈಗೂಡಿಸಿಕೊಂಡಿದ್ದರೆ ನಂತರದ ಪ್ರಗತಿಶೀಲ ಮಾರ್ಗ ಸರ್ವ ಸಮಾನತೆಯನ್ನು ಒಟ್ಟು ಜನಕಲ್ಯಾಣವನ್ನು ಬಯಸುವ ಸಮಾಜವಾದದ ಆಯಕಟ್ಟಿನ ಮೇಲೆ ನಿಂತಿತ್ತು. ನವ್ಯ ಕಾವ್ಯವಂತೂ ಕನ್ನಡ ಕಾವ್ಯ ಕೃಷಿಯ ಜಮೀನಿನ ಮೇಲೆ ಬಿದ್ದ ಹೊಸ ಬಗೆಯ ಬೆಳೆ. ಅಲ್ಲಿಯವರೆಗೂ ಮನುಷ್ಯನ ಆಂತರಿಕ ಸಂಗತಿಗಳನ್ನು ಅಷ್ಟಾಗಿ ಪ್ರಕಟಪಡಿಸದೇ ಪ್ರಾಕೃತಿಕ ಬಣ್ಣನೆಯಲ್ಲೇ ಕಳೆದು ಹೋಗಿದ್ದವರು ತಮ್ಮ ತಮ್ಮ ಜೀವನದ ಖಾಸಗೀ ಸಂಗತಿಗಳಿಗೂ ಕಾವ್ಯದ ಸ್ಪರ್ಶ ಕೊಟ್ಟ ಸಂದರ್ಭವಿದು.

ಇನ್ನು ಬಂಡಾಯ ಮಾರ್ಗ ಕನ್ನಡಕಾವ್ಯ ಪರಂಪರೆಗೆ ಹೊಸ ದಿಕ್ಕು ದೆಸೆಗಳನ್ನು‌ ಕೊಟ್ಟು ಬೇಡಿಕೆಯನ್ನು ಹಕ್ಕಾಗಿ ಪ್ರಕಟಿಸುವ ಧೈರ್ಯವಾಗಿ ಮೊಳಗಿದ್ದು ಈಗ ಇತಿಹಾಸ.

ಇನ್ನು ಸದ್ಯದ ಕಾವ್ಯ ಇನ್ನೂ ತನ್ನ ದಾರಿಯನ್ನು ಸ್ಪಷ್ಟಗೊಳಿಸಿಕೊಳ್ಳಬೇಕಿದೆ. ನವೋದಯದ ರಮ್ಯತೆ ಕಳೆದು ನವ್ಯದ ಪ್ರತಿಮೆ ರೂಪಕಗಳೂ ಸವೆದು ಬಂಡಾಯದ ದನಿ ಉಡುಗಿಹೋಗಿರುವ ಸಂದರ್ಭದಲ್ಲಿ ಕಾವ್ಯವೆಂದರೆ ಆ ಕ್ಷಣ ಅನ್ನಿಸಿದ್ದನ್ನು ತತ್ ಕ್ಷಣವೇ ಬರೆದು ಪ್ರಕಟಿಸುವ ಸಾಮಾಜಿಕ ಜಾಲತಾಣಗಳ ಪುಟಗಳಾಗಿ ಬದಲಾಗುತ್ತಿದೆ. ಇದು ಗಮನಿಸಬೇಕಾದ ಮುಖ್ಯ ಸಂಗತಿ. ಕವಿತೆ ಬರೆಯುವವರೆಂದರೆ ಅದ್ಯಾಪಕರೇ ಎಂಬ ಹುಸಿಯನ್ನು ವರ್ತಮಾನದ ಕವಿಗಳು ಅಳಿಸಿಹಾಕಿದ್ದಾರೆ. ಬದುಕಿನ ಹಲವು ಸ್ತರಗಳಿಂದ ಅನುಭವಗಳಿಂದ ಹುರಿಗೊಂಡ ಅನೇಕ ಮನಸ್ಸುಗಳು ಆಧುನಿಕ ಕಾವ್ಯ ಪ್ರಕಾರವನ್ನು ಕಟ್ಟುತ್ತಿವೆ. ತಮಗನ್ನಿಸಿದ್ದನ್ನು ನಿರ್ಭಿಡೆಯಿಂದ ಸ್ಪಷ್ಟವಾಗಿ ಹೇಳುವ ಸಿದ್ಧ ಸಾಮಗ್ರಿ ಈಕಾಲದ ಕವಿಗಳಿಗಿರುವುದು ವಿಶೇಷ.

ದಿನಕ್ಕೊಂದು ಕವಿಯ ಒಂದೇ ಒಂದು ಕವಿತೆಯನ್ನು ಅಭ್ಯಾಸ ಮಾಡುವ ಕ್ರಮವನ್ನು ರೂಢಿಸಿಕೊಂಡರೆ ನಾವೇ ಅತ್ಯುತ್ತಮ ವಿಮರ್ಶಕರಾಗಲು ಸಾಧ್ಯ. ಆದರೆ ಅದಕ್ಕೂ ಮೊದಲು ನಮಗೆ ನಾವೇ ಹಾಕಿಕೊಂಡಿರುವ ಆದರ್ಶದ ಗೆರೆಗಳನ್ನು ಅಳಿಸಿಕೊಳ್ಳಬೇಕು. ಎಲ್ಲವನ್ನೂ ಎಲ್ಲವನ್ನೂ ಮುಗ್ಧತೆಯಿಂದ ನೋಡುವ ಗುಣವನ್ನು ಸಾಧಿಸಬೇಕು. ಆಗ ಬರಿಯ ಪ್ರಕಟಿತ ಕವಿತೆಯೇನು ಬದುಕಿನ ಹಲವು ಪಲುಕಗಳಲ್ಲಿ ನಿತ್ಯನೂತನ ಸಂಗತಿಗಳಲ್ಲಿರುವ ಕಾವ್ಯವನ್ನು ಅರಿಯಲು ಸಾಧ್ಯ. ಏನಂತೀರಿ?

– ಡಿ.ಎಸ್.ರಾಮಸ್ವಾಮಿ

Leave a Reply

Back To Top