ಮಹಾವೀರ ಜಯಂತಿ ವಿಶೇಷ

ಮಹಾವೀರ ಜಯಂತಿ ವಿಶೇಷ

ಡಾ. ಗುರುಸಿದ್ಧಯ್ಯಾ ಸ್ವಾಮಿ

ಅಹಿಂಸಾ ಗುರು

ಋಷಭದೇವರು ಹೊತ್ತಿಸಿದ ಅಹಿಂಸಾ ಜ್ಯೋತಿ
ಅನುದಿನ ಬೆಳಗಿದರು ಭಗವಾನ್ ತೀರ್ಥಂಕರರು
ಆಚರಿಸುವರು ಮುನಿ ತ್ಯಾಗ ವೈರಾಗ್ಯ ತಪಸ್ಸು
ಸದಾಚಾರ ದಾರಿ ತೋರುವರು ಅರಿಹಂತರು

ಇಳೆಯ ‘ತೀರ್ಥಂ ಕರೋತಿ ಇತಿ’ ಇಳಿದು ಬಂದರು
ಅವತರಿಸಿದರು ಧರೆಗೆ ಭಗವಾನ ಮಹಾವೀರರು
ವೈಶಾಲಿಯ ತ್ರಿಶಲಾದೇವಿ ಉದರದಿ ಜನಿಸಿದರು
ವರ್ಧಿಸಿದರು ಸಿದ್ಧಾರ್ಥರ ಸುತ ವರ್ಧಮಾನರು

ಕಠೋರಾತಿ ಕಠೋರ ತಪವ ಮಾಡಿದರು ವೀರ
ಕಡೆಯ ಮೂರು ದಶಕ ಕಾಲ ಜೀವಿಗಳ ಉದ್ಧಾರ
ಅರ್ಧಮಾಗಧಿಯೊಳು ಜಿನತತ್ವವ ಸಾರಿದರು
ಹಲವು ಶಿಷ್ಯ ‘ಗಣಧರ’ ಕಮಲಗಳ ಅರಳಿಸಿದರು

ಓದಿನಲ್ಲಿ ‘ಸನ್ಮತಿ’, ರಾಜಭೋಗದಲ್ಲಿ ಅತಿ ವಿರಕ್ತಿ
ಜಿನಮಾರ್ಗದಿ ಅಡಿಯಿಟ್ಟು, ಸುತ್ತಿದರು ನಾಡೆಲ್ಲ
ದ್ವಾದಶ ಕಾಲ ತಪದ ಫಲವದು ಜ್ಞಾನೋದಯ
ಏರಿ ದ್ವಿ ದ್ವಾದಶ ಪೀಠ, ಬಂತು ಸ್ಥಾಪಕ ಮುಕುಟ

‘ಪುದ್ಗಲ’ ಮಲದಿ ಸರಸವಾಡುವ ಜೀವಿಗಳಿಗೆ
ಪ್ರಾಕೃತದಿ ಬೋಧಿಸಿದರು ಇವರು ಪಂಚಶೀಲಗಳ
ನಿರ್ಜರದಿಂದ ‘ಕೇವಲಜ್ಞಾನ’ ಸೂರ್ಯೋದಯ
ಪುದ್ಗಲಶೂನ್ಯ ನಿರ್ಜರದಿ ಸಂವರಣ ನಿರ್ಮಾಣ

‘ಅಹಿಂಸಾ ಪರಮೋ ಧರ್ಮ’ ಎಂದು ಬೋಧಿಸಿ
‘ದುಷಮಾ’ ಧರೆಯನು ಮಾಡಿದರು ‘ಸುಷಮಾ’
ಸಮಿತಿ ಗುಪ್ತಿ ಅಷ್ಟಸೋಪಾನಗಳಾಚೆ ನಿರ್ವಾಣ
ಪಡೆದ ಶ್ರಮಣ ನಿಗ್ಗಂಥ ಓಂ ಣಮೋ ಣಮೋ


ಡಾ. ಗುರುಸಿದ್ಧಯ್ಯಾ ಸ್ವಾಮಿ

Leave a Reply

Back To Top