ಮಕ್ಕಳ ಕವಿತೆ

ಅರುಣಾ ರಾವ್

ಕರುವೆ-ಕರುವೇ!

ಕರುವೇ ಕರುವೇ ಮುದ್ದಿನ ಕರುವೆ
ನಿನಗೂ ಒಂದು ಹೆಸರಿಡಲೇ?
ಗೌರಿ ಗಂಗೆ ಕಾಮಧೇನು
ಲಕ್ಷ್ಮಿ ಕಪಿಲೆ ಬೇಡವೇ?

ಮೈಯದು ಬಿಳುಪು ಬಟ್ಟಲುಗಣ್ಣು
ಕುಚ್ಚು ಬಾಲವು ಎನಿತು ಚಂದವೆ
ಕಪ್ಪನೆ ನಾಮ ಹಣೆಯ ಮೇಗಡೆ
ಯಾರಿರಿಸಿದರು ನೀ ಹೇಳಲೆ?

ಚಂಗ್ ಚಂಗ್ ಎಂದು ಕುಪ್ಪಳಿಸುತ್ತ
ಓಡುತ ಗಮನವ ಸೆಳೆಯುವೆ
ಅಮ್ಮನ ಅಗಲಿ ಕ್ಷಣವಿರಲಾರೆ
ಅಂಬಾ ಎನ್ನುತ ಕರೆಯುವೆ

ಮುದ್ದಾಗಿರುವ ಎನ್ನಯ ಕರುವಿಗೆ
ಹಳೆಯ ಹೆಸರೇನು ಚಂದವೆ?
ಕರೆಯಲು ಯೋಗ್ಯ ನೂತನ ನಾಮ
ಹುಡುಕುವೆ ನಾನು ಈಗಲೇ

ಅಂದದ ಮಗುವಿಗೆ ಚಂದದ ಹೆಸರು
ಪುಸ್ತಕವನ್ನೂ ತಂದಿರುವೆ
ಬಗೆಬಗೆಯಾಗಿ ನವೀನ ಹೆಸರಲಿ
ಒಂದನು ನಿನಗೆ ಆರಿಸುವೆ


ಅರುಣಾ ರಾವ್

Leave a Reply

Back To Top