ಅಂಕಣ ಸಂಗಾತಿ
ಒಲವ ಧಾರೆ.
ರಮೇಶ ಸಿ ಬನ್ನಿಕೊಪ್ಪ ಹಲಗೇರಿಯವರ ಅಂಕಣ
ನಾವು ಪರಕೀಯ ಎಂಬ ಅನಾಥ ಭಾವ ಅವರಳೊಗೆ ಮೂಡದಿರಲಿ…
ಅವರೂ ನಮ್ಮಂತಲ್ಲವೇ ಎಂದು ಭಾವಿಸದೆ ಹೋದರೆ…?
ಬಲಿಷ್ಠ ಜಾತಿಗಳ ಅಹಿಂನ ಮೆರವಣಿಗೆಯಲ್ಲಿ ಚಿಕ್ಕ ಚಿಕ್ಕ ಜಾತಿಗಳ ಅಸ್ತಿತ್ವವು ಸದ್ದಿಲ್ಲದೆ ಅಳುಕಿ ಹೋಗುವ ಆತಂಕ ಎದುರಾಗಿದೆ ಇಂದು.
ಒಂದು ಬಲಿಷ್ಠ ಸಮಾಜ ನಿರ್ಮಾಣವಾಗುವದರಲ್ಲಿ ಚಿಕ್ಕ ಚಿಕ್ಕ ಸಮುದಾಯಗಳು ತುಂಬಾ ಪಾತ್ರವನ್ನು ವಹಿಸುತ್ತವೆ. ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಮನುಷ್ಯನ ಮೂಲಭೂತ ಅಗತ್ಯಗಳನ್ನು ಪೂರೈಸುವ ಸಮುದಾಯಗಳೆಂದರೆ ಅವು ತಳಸಮುದಾಯಗಳು..!! ನಿಜವಾಗಿಯೂ ಯಾರಿಗೆ ಗೌರವ ಸಲ್ಲಬೇಕು, ಅವರಿಗೆ ಸಲ್ಲದಿರುವುದು ವಿಷಾದನೀಯ. ಸಮಾಜದ ಕಟ್ಟಕಡೆಯ ಚಿಕ್ಕ ಚಿಕ್ಕ ಸಮುದಾಯಗಳು ಇವತ್ತು ಹಲವಾರು ಸಮಸ್ಯೆಗಳನ್ನು ಎದುರಿಸುತ್ತವೆ. ಹಾಗೆ ನೋಡಿದರೆ ಸಮಾಜಿಕ ವ್ಯವಸ್ಥೆಯಲ್ಲಿ ಅವರ ಸೇವೆ ಅತ್ಯಂತ ವಿಶಾಲವಾದದು. ವೃತ್ತಿಪರ ಜಾತಿಗಳಾಗಲಿ, ಅಲೆಮಾರಿ ಜಾತಿಗಳಾಗಲಿ, ಶೋಷಣೆಗೆ ಒಳಗಾದ ಚಿಕ್ಕ ಚಿಕ್ಕ ಸಾಮಾಜಿಕ ವ್ಯವಸ್ಥೆಯ ಜಾತಿಗಳಾಗಲಿ, ನಮ್ಮ ಇಡೀ ಸಾಮಾಜಿಕ ಸಂರಕ್ಷಣೆಯ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರ ಅಗತ್ಯಗಳನ್ನು ಪೂರೈಸುತ್ತಾ, ಉತ್ತಮ ಸಮಾಜ ನಿರ್ಮಾಣಕ್ಕೆ ಅವರು ಕಾರಣರಾಗಿದ್ದಾರೆ.
ಆದರೆ ಅವರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಸಾಮೂದಾಯಕ ಚಿಂತನೆಗಳು, ಸಮಸ್ಯೆಗಳು ಹಲವು. ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಇಂತಹ ಚಿಕ್ಕ ಚಿಕ್ಕ ಸಮುದಾಯದ ಸಮಸ್ಯೆಗಳಿಗೆ ಸ್ಪಂದನೆ ದೊರಕದಿರುವುದು ದುರಂತವೆಂದೆ ಹೇಳಬಹುದು. ಅದಕ್ಕೆ ವ್ಯವಸ್ಥೆಯೊಳಗಿನ ‘ಮತ ಬ್ಯಾಂಕ್’ ಎಂದರೆ ತಪ್ಪಲ್ಲ. ಹಾಗಾದರೆ ‘ಈ ನೆಲದ ಜೀವಗಳು’ ನಮ್ಮಂತೆ ಅವರೂ ಮನುಷ್ಯರು ; ನಮ್ಮ ಸಮುದಾಯದಂತೆ ಅವರದು ಸಮುದಾಯ’ ಎಂದು ತಿಳಿಯುವ ವಿಶಾಲ ಮನೋಭಾವ ಬರಬೇಕಾಗಿರುವುದು ಅಗತ್ಯವಾಗಿದೆ.
ಮೀಸಲಾತಿಯ ಹೆಸರಿನಲ್ಲಿ, ಸರ್ಕಾರಿ ಸೌಲಭ್ಯಗಳ ಪಡೆಯುವಿಕೆಯ ಪೈಪೋಟಿಯಲ್ಲಿ ದೊಡ್ಡ ದೊಡ್ಡ ಸಮುದಾಯಗಳು ವಿಜೃಂಭಿಸುತ್ತಿರುವಾಗ ಚಿಕ್ಕ ಚಿಕ್ಕ ಸಮುದಾಯಗಳು ಮೌನವಾಗಿ ಅವುಗಳನ್ನು ಅವಲೋಕಿಸುವದಷ್ಟೇ ಉಳಿದಿರುವ ದಾರಿಯೇ..?
ಈ ಸಮಾಜದಲ್ಲಿ ಆ ವೃತ್ತಿಪರ ಜಾತಿಗಳಾದ ಮಡಿವಾಳ ಬಟ್ಟೆಯನ್ನು ಮಡಿ ಮಾಡದೆ ಹೋದರೆ..? ಹಡಪದ ಸಮಾಜದವರು ವ್ಯಕ್ತಿಗಳ ಕ್ಷೌರ ಮಾಡದೆ ಹೋದರೆ..? ಸಿಂಪಿಗ ಸಮಾಜವು ಬಟ್ಟೆಗಳನ್ನು ಹೊಲಿಯದೆ ಹೋದರೆ…? ಅದೇ ರೀತಿಯಲ್ಲಿ ಚಮ್ಮಾರರು, ಕಂಬಾರರು, ಕುಂಬಾರರು, ಕಬ್ಬಲಿಗರು ಇನ್ನೂ ಮುಂತಾದ ವೃತ್ತಿಪರ ಚಿಕ್ಕ ಚಿಕ್ಕ ಜಾತಿಗಳು ಸಂಖ್ಯೆಯಲ್ಲಿ ಬಹಳ ಸಣ್ಣವಿದ್ದವರೂ ಅವರ ದೊಡ್ಡ ಸೇವೆಯನ್ನು ನಾವೇರೂ ಮರೆಯುವಂತಿಲ್ಲ.
ಇನ್ನೂ ಶೋಷಿತ ಸಮುದಾಯಗಳನ್ನು ಅವಲೋಕನ ಮಾಡಿಕೊಂಡಾಗ ವೃತ್ತಿಪರ ವಿಷಯದಲ್ಲಿ ಪೌರಕಾರ್ಮಿಕರಾಗಿ ದುಡಿಯುವ ತಳ ಸಮುದಾಯಗಳಾದ ದಕ್ಕಲಿಗರು,ಮಾದಿಗರು,ಛಲವಾದಿಗರು, ಡೋಹರರು,ಮಹರರು, ಮುಂತಾದ ಸಮುದಾಯಗಳು ನಗರ,ಗ್ರಾಮದ ಸ್ವಚ್ಚತಾ ಕಾರ್ಯ ನಿರ್ವಹಿಸಿದೇ ಹೋದರೆ…? ಒಂದು ಕ್ಷಣ ಆಲೋಚಿಸಿದರೆ ಮೈ ಜುಮ್ ಎನ್ನುತ್ತದೆ. ಅವರ ಅಗಾಧವಾದ ಸೇವಾ ಮನೋಭಾವವೇ ಇಂದು ನಾವು ಉತ್ತಮ ನಾಗರಿಕ ಬದುಕನ್ನು ಮಾಡಲು ಸಾಧ್ಯವಾಗಿದೆ.
ಅಲ್ಲದೆ, ಅಲೆಮಾರಿ ಸಮುದಾಯಗಳಾದ ಸಿದ್ದಿ ಜನಾಂಗ, ಕುಡುಮಿ, ಸೋಲಿಗರು, ಕಾಡು ಕುರುಬ, ಜೇನು ಕುರುಬ, ಚಂಚರು, ಬೈಲ್ ಪತ್ತಾರರು, ಕಾಡು ಸಿದ್ಧರು, ಲಂಬಾಣಿಗರು, ಬೋವಿಗಳು,ಹೀಗೆ ಹೆಸರು ಕೂಡ ಪ್ರಸ್ತಾಪ ಮಾಡಲು ಗುರುತು ಸಿಗದಷ್ಟು ಚಿಕ್ಕ ಚಿಕ್ಕ ತಳ ಸಮುದಾಯಗಳ ಇಲ್ಲಿರುವವು. ದೊಡ್ಡ ಸಮುದಾಯಗಳು ಮನಗಣ ಬೇಕಾಗಿರುವುದು ಅಗತ್ಯ.
ಮೀಸಲಾತಿಯ ಹೆಸರಿನಲ್ಲಿಯೋ, ಸರ್ಕಾರಿ ಸೌಲಭ್ಯಗಳನ್ನು ಬಳಸಿಕೊಳ್ಳುವಾಗ ನಾವು ಮಾನವೀಯ ಅಂತ:ಕರಣದಿಂದ ಮೌಲ್ಯಗಳನ್ನು ರೂಢಿಸಿಕೊಂಡಾಗ ಮಾತ್ರ ಮಾತು ಇಲ್ಲದವರಿಗೂ ಸೌಲಭ್ಯಗಳನ್ನು ಹಂಚುವ ದೊಡ್ಡ ಬುದ್ಧಿ ನಮ್ಮಲ್ಲಿ ಬರಬಲ್ಲದು.
ಹಸಿದವರಿಗೆ ಅನ್ನ ಹಾಕಿದಾಗ ಒಡಲು ತುಂಬುತ್ತದೆ. ಹೊಟ್ಟೆ ತುಂಬಿದವರಿಗೆ ಹಾಕಿದರೆ ಹೇಗೆ..? ಎನ್ನುವ ವಾಸ್ತವಿಕ ಪ್ರಜ್ಞೆಯ ಪ್ರಶ್ನೆಯು ನಮ್ಮ ಸಮಾಜದೊಳಗೆ ಮೂಡಬೇಕು. ಇಲ್ಲದೆ ಹೋದರೆ ಚಿಕ್ಕ ಚಿಕ್ಕ ಸಮುದಾಯಗಳು ಅನಾಥವಾಗುತ್ತವೆ. ಇಂತಹ ಅನಾಥ ಪ್ರಜ್ಞೆ ಕಾಡಬಾರದೆಂದು ನಮ್ಮ ಹಿರಿಯರು, ಸಂತರು, ಶರಣರು, ಸಾಮಾಜಿಕ ಹೋರಾಟಗಾರರು, ಸಾಹಿತಿಗಳು, ಪ್ರಗತಿಪರ ಚಿಂತಕರು ಒಳ್ಳೆಯ ಆಶಯಗಳನ್ನೇ ಇಟ್ಟುಕೊಂಡು ಅವರ ಬದುಕಿಗಾಗಿ ಹೋರಾಟ ಮಾಡಿರುವುದು ನಮ್ಮ ಕಣ್ಣಮುಂದೆ ಇದೆ. ನಮಗೆ ಹೋರಾಟ ಒಂದು ಭಾಗವಾದರೆ, ಹೃದಯವೂ ಇದೆ ಅಂದರೆ ಹೃದಯ ಮಿಡಿಯುವ ಮಮಕಾರ ನಮ್ಮದಾದಾಗ ಅಲಕ್ಷಿತ ಸಮುದಾಯಗಳನ್ನು ಮುನ್ನೆಲೆಗೆ ತರಲು ಸಾಧ್ಯ. ಹೊಣೆಗಾರಿಕೆಯುಳ್ಳ ಸಮಾಜದ ದೊಡ್ಡ ದೊಡ್ಡ ಸಮುದಾಯಗಳ ಜವಾಬ್ದಾರಿ ಎಂದೇ ಭಾವಿಸಬೇಕು. ಇಲ್ಲದೇ ಹೋದರೆ ಸೌಲಭ್ಯಗಳನ್ನು ಪಡೆದವರು, ಮುಂದುವರೆದವರೇ ಮತ್ತೆ ಮತ್ತೆ ಬೆಳೆಯುತ್ತಲೇ ಹೋಗುತ್ತಾರೆ. ಶ್ರೀಮಂತರು ಶ್ರೀಮಂತರಾಗುವುದು ದೊಡ್ಡ ವಿಷಯವಲ್ಲ. ಬಡವರನ್ನ ಮೇಲೆತ್ತಿ ಶ್ರೀಮಂತರನ್ನಾಗಿ ಮಾಡುವುದಾಗಲಿ, ಇಲ್ಲದವರನ್ನು ಉಳ್ಳವರನ್ನಾಗಿ ಮಾಡುವುದಾಗಲಿ, ಅದು ಒಂದು ಪ್ರಗತಿಪರ ಸಮಾಜದ ಆರೋಗ್ಯಕರ ಲಕ್ಷಣ. ಅಂತಹ ಸಮಾಜದ ಕಟ್ಟುವಿಕೆಯ ಭಾಗವಾಗಿ ನಾವು ಕೆಲವು ವಿಷಯಗಳಲ್ಲಿ ರಾಜಿಯಾಗಬೇಕಾಗಿರುವುದು ಇವತ್ತಿನ ಪ್ರಜ್ಞಾವಂತ ನಾಗರಿಕರ ಜವಾಬ್ದಾರಿಯ ಎಚ್ಚರಿಕೆ.
“ಜನಸಂಖ್ಯಾ ದೃಷ್ಟಿಯಿಂದ ದೊಡ್ಡದಿದೆ ಈ ಸಮುದಾಯವೆಂದು ನಾವು ಕೇಳುವ ಎಲ್ಲಾ ಸೌಲಭ್ಯಗಳನ್ನು ಪ್ರಜಾಸತಾತ್ಮಕ ಸರ್ಕಾರಗಳ ನೀಡಿದರೆ ಹೇಗೆ..? ಜನಸಂಖ್ಯಾದೃಷ್ಟಿಯಿಂದ ಚಿಕ್ಕ ಚಿಕ್ಕ ಸಮುದಾಯಗಳನ್ನು ಕೂಡ ಪರಿಗಣಿಸಬೇಕಾದ ಅಗತ್ಯ ಇಂದಿನ ಸರ್ಕಾರಗಳ ಮುಖ್ಯವಾದ ಕರ್ತವ್ಯ ಎಂದು ಭಾವಿಸಬೇಕಾಗುತ್ತದೆ.
ಚಿಕ್ಕ ಚಿಕ್ಕ ಸಮುದಾಯಗಳು ಸಮಾಜದ ಪ್ರತಿಯೊಬ್ಬರ ಅಗತ್ಯಗಳನ್ನು ಪೂರೈಸುವ ನಮ್ಮವರ ಅಗತ್ಯ ಸೇವೆಗಳನ್ನು ಸದ್ದಿಲ್ಲದೇ ನಿತ್ಯವೂ ನಿಮಗೆ ಒದಗಿಸುತ್ತಾರೆ.
ಹಾಗೆಯೇ ನಾಗರಿಕ ಸಮಾಜದಿಂದ ಕಾಡಿನಂಚಿನಲ್ಲಿ ಬದುಕುತ್ತಿರುವ ಅಲೆಮಾರಿ ಸಮುದಾಯಗಳು ಕಾಡಿನ ಉತ್ಪನ್ನಗಳನ್ನು ಬಳಸಿಕೊಂಡು ತಮ್ಮದೇ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಬದುಕುತ್ತಿರುವವರ ಮಧ್ಯ ದೊಡ್ಡ ಸಮುದಾಯಗಳು ಸಾಕಷ್ಟು ಪ್ರಗತಿ ಕಂಡರೂ ಮತ್ತೆ ಮತ್ತೆ ಮುನ್ನೆಲೆಗೆ ಬಂದು ಹೋರಾಟದ ಹಾದಿ ಹಿಡಿದು ಪ್ರಜಾಸತ್ತಾತ್ಮಕ ಸರ್ಕಾರಗಳ ವತಿಯಿಂದ ಸೌಲಭ್ಯಗಳನ್ನು ಪಡೆಯುವಾಗ ಚಿಕ್ಕ ಚಿಕ್ಕ ಸಮುದಾಯಗಳು ಹೋರಾಟ ನಡೆಸದೆ ಅಸಹಾಯಕರಾಗಿ ಮೂಕ ಪ್ರೇಕ್ಷಕರಂತೆ ಇವುಗಳನ್ನೆಲ್ಲವನ್ನು ನೋಡುವುದಾದರೆ.. ಹಾಗಾದರೆ ನಮ್ಮಿಂದ ಸಮಾಜಕ್ಕೆ ಉಪಯೋಗವಿಲ್ಲವೇ..? ನಾವು ಈ ಸಮಾಜದ ಭಾಗವಲ್ಲವೇ..? ಎನ್ನುವ ಅನಾಥಭಾವ ಮೂಡುವುದು ಸಹಜ. ಅಂತಹ ಅನಾಥಭಾವ ಮೂಡದಂತೆ ಅವರನ್ನು ಕೂಡ ಮುಖ್ಯವಾಹಿನಿಗೆ ತರಲು ಪ್ರಯತ್ನಪಡದೆ ಹೋದರೆ ಈ ಸಮಾಜದ ಆರೋಗ್ಯಕರ ವ್ಯವಸ್ಥೆ ಏರೂಪೇರಾಗುವದರಲ್ಲಿ ಸಂಶಯವಿಲ್ಲ.
ಜಗತ್ತಿನ ಶ್ರೇಷ್ಠ ಮಾನವಶಾಸ್ತ್ರಜ್ಞ ಚಾರ್ಲ್ಸ್ ಡಾರ್ವಿನ್ ನ ಸಿದ್ದಾಂತ ನಮಗೆ ನೆನಪಾಗುತ್ತದೆ. ಆತನ ಸಿದ್ದಾಂತದ ಪ್ರಕಾರ,
“ಈ ಸಮಾಜಿಕ, ಪ್ರಾಕೃತಿಕ, ಜೈವಿಕ ವ್ಯವಸ್ಥೆಯಲ್ಲಿ ಬಲಿಷ್ಠವಾಗಿರುವುದು ಬದುಕುತ್ತದೆ ; ಅಶಕ್ತವಾಗಿರುವುದು ನಾಶ ಹೊಂದುತ್ತದೆ” ಎನ್ನುವ ಸಿದ್ಧಾಂತ ಸತ್ಯವಾಗುತ್ತದೆ.
ಆದರೆ…
ಅಶಕ್ತರನ್ನು ನಾಶ ಮಾಡುವಂತಹ ಮೃಗೀಯ ಗುಣ ನಮ್ಮಲ್ಲಿ ಬರಬಾರದು. ವಿಶಾಲವಾಗಿರುವ ಮನೋಭಾವ ಬೆಳೆಸಿಕೊಳ್ಳಬೇಕು. ಕಾಯಕ ಯೋಗಿ ಬಸವಣ್ಣನವರ, “ದಯವೇ ಧರ್ಮದ ಮೂಲವಯ್ಯ ದಯವಿರಬೇಕು ಸಕಲ ಪ್ರಾಣಿಗಳಲ್ಲಿ…” ಎನ್ನುವ ಮಾತು ಕೇವಲ ಪ್ರಾಣಿಗಳಿಗಷ್ಟೇ ಅಲ್ಲದೆ ‘ಅವರು ನಮ್ಮಂತೆ ಎನ್ನುವ ಪ್ರಜ್ಞೆ’ ಎನ್ನುವ ಮಾತು ಚಿಗುರೊಡೆದಾಗ ಚಿಕ್ಕ ಚಿಕ್ಕ ಸಮುದಾಯಗಳು ವಿಶ್ವಾಸ, ನಂಬಿಕೆ ಮತ್ತು “ಈ ಸಮಾಜದೊಳಗೆ ನಮಗೂ ಅಸ್ತಿತ್ವವಿದೆ” ಎನ್ನುವ ವಿಶ್ವಾಸ ಮೂಡಿಸಬೇಕಾಗಿದೆ. ಕೇವಲ ಸರ್ಕಾರ, ಕಾನೂನುಗಳು, ಅಧಿಕಾರಿಗಳು… ಇವುಗಳಿಂದ ಮಾತ್ರ ಅಂತಹ ವಿಶ್ವಾಸ ಮೂಡಿಸಲು ಅಸಾಧ್ಯ.
ಸಾಮುದಾಯಕ ಕಾರ್ಯಕ್ರಮಗಳಲ್ಲಿ ಸಮುದಾಯ – ಸಮುದಾಯಗಳ ನಡುವೆ ಪರಸ್ಪರ ನಂಬಿಕೆ ಮೂಡಿಸಿದಾಗಲೇ ದೊಡ್ಡ ದೊಡ್ಡ ಸಮುದಾಯಗಳು ಚಿಕ್ಕ ಚಿಕ್ಕ ಸಮುದಾಯಗಳನ್ನು ತನ್ನ ಜೊತೆಗೆ ಕರೆದುಕೊಂಡು ಹೋಗಬೇಕಾದ ಅಗತ್ಯ ಮತ್ತು ಅನಿವಾರ್ಯತೆ ಇಂದು ಇದೆ. ದೊಡ್ಡ ದೊಡ್ಡ ಸಮುದಾಯಗಳು ಚಿಕ್ಕ ಸಮುದಾಯಗಳನ್ನು ಪ್ರೀತಿ – ವಿಶ್ವಾಸದಿಂದ ಕಂಡಾಗಲೇ ಅವರ ಒಲವನ್ನು ಗಳಿಸಲು ಸಾಧ್ಯ. ಇಲ್ಲದೆ ಹೋದರೆ ಚಿಕ್ಕ ಚಿಕ್ಕ ಸಮುದಾಯಗಳು ಅನಾಥ ಪ್ರಜ್ಞೆಯಿಂದ ಬದುಕುತ್ತವೆ. ಹಾಗಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ದೊಡ್ಡ ಸಮುದಾಯಗಳ ಮೇಲೆ ಇದೆ. ಅಂತಹ ಕೆಲಸವನ್ನು ಮಾಡುವ ಮಠ – ಮಾನ್ಯಗಳು, ಸಾಮಾಜಿಕ ಸೇವಾ ಸಂಸ್ಥೆಗಳ ಹಿರಿಮೆ ಇನ್ನೂ ಹೆಚ್ಚಾಗಲೆಂದು ಆಶಿಸುತ್ತಾ, ನಾವು ಕೂಡ ಅವರ ಜೊತೆ ಕೈಜೋಡಿಸೋಣ. ತುಳಿತಕ್ಕೆ ಒಳಗಾದ ಅಲಕ್ಷಿತ ಸಮುದಾಯಗಳನ್ನು ಮೇಲೆತ್ತುವ ಕೆಲಸವನ್ನು ಒಲವಿನಿಂದ ಮಾಡೋಣ ಎಂದು ಹಾರೈಸೋಣ.
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಲೇಖನಗಳ ಪ್ರಕಟ