ಯಾ.ಮ.ಯಾಕೊಳ್ಳಿ ಲಲಿತ ಪ್ರಬಂಧ-ಚಹಾದ ಜೋಡಿ….

ಪ್ರಬಂಧ ಸಂಗಾತಿ

ಯಾ.ಮ.ಯಾಕೊಳ್ಳಿ

ಚಹಾದ ಜೋಡಿ….

ನಮ್ಮ‌ ಕಡೆ ಕಾಫಿ‌ ಕುಡಿಯೊದು‌ ಕಡಿಮೆ .ಹೋಟೇಲ್ ಹೊಕ್ಕು ಬೈಟೂ ಚಹಾ‌ ಕುಡಿಯೋ‌ ಮಂದಿ ನಾವು ಗುಲ್ಬರ್ಗಾ‌ ಕಡೆ ಅಂತೂ ಚಾ ದುಖಾನ ಅದಾವು.ಬೆಂಗಳೂರ್‌ ಕಡೆಯವರಾದ್ರ ” ಏನ್ ಸರ್ ಕಾಫಿ ಆಯ್ತಾ” ಅಂತ ಸ್ಟೈಲಿಸ್ ಆಗಿ ಕೇಳಿದ್ರೆ ನಮ್ಮ ಬಿಜಾಪೂರ ಕಡೆ ” ಚಹಾ ಆತೇನ್ರಿ ಗೌಡ್ರ ಅಂತ ಜವಾರಿ ಭಾಷೆಲಿ ಕೇಳೂದ ಮಜಾ.
ಚಹಾಕಂತನ ಆಫಿಸ್ ಕ ಆಫಿಸ ಮದ್ಯಾನ್ಹ ಖಾಲಿ ಯಾಗ್ತಾವು.ಎಲ್ಲಿ ಹೋಅಂತ ಕೇಳೂದ ಬ್ಯಾಡ ಮತ್ತ ಅಕಸ್ಮಾತ ಆ ಟೈಮಿನಾಗ ನೀವೆನರ ಅಲ್ಲಿ ಹೋದರ ಚಹಾದ ಬಿಲ್ ನಿಮ್ಮ ತಲಿಮ್ಯಾಲ ಬೀಳುದ ಗ್ಯಾರಂಟಿ.ಇರಲಿ.
‘ಚಹಾದ ಜೋಡಿ ಚೂಡಾದಂಗ’ ಎನ್ನುವದು ನಮ್ಮ ವರಕವಿ ಬೇಂದ್ರೆಯವರ ಪ್ರಸಿದ್ಧವಾದ ಕವಿತೆ ಯೊಂದರ ಸಾಲು. ‘ಇನ್ನು ಯಾಕ ಬರಲಿಲ್ಲವ್ವ ಹುಬ್ಬಳ್ಳಿಯಾಂವ ವಾರದಾಗ ಮೂರ ಸರ್ತೇ ಬಂದ ಹೋಗಾವ’ ಎಂದು ತನ್ನ ಪ್ರಿಯಕರನ್ನು ನೆನಯುವ ಕವಿತೆಯ ನಾಯಕಿ ‘ಚಹಾದ ಕೂಡಾ ಚೂಡಾದಂಗ ಬಂದ ಬಿಡಾಂವ’ ಎಂಬ ಕವಿತೆಯ ಸಾಲಿನಲ್ಲಿ ತನ್ನ ಮತ್ತು ಬಾರದಿರುವ ನಲ್ಲನ ಸಂಬಂಧವನ್ನು ವರ್ಣಿಸಲು ‘ಚಹಾದ ಜೋಡಿ ಚೂಡಾದಂಗ’ ಎಂಬ ರೂಪಕವನ್ನು ಬಳಸಿದ್ದಾಳೆ.
ಉತ್ತರ ಕರ್ನಾಟಕದ ನಮಗೆ ಚಹಾ ಮತ್ತು ಚೂಡಾ ಪಾರ್ವತಿ ಪರಮೇಶ್ವರರಿದ್ದ ಹಾಗೆ. ಸದಾ ಎರಡೂ ಕೂಡಿಯೇ ಇರುವಂಥವು. ಯಾರದಾದರೂ ಮನೆಗೆ ಚಹಾ ಕುಡಿಯಲು ಬನ್ನಿ ಎಂಬ ಆಹ್ವಾನ ಬಂದರೆ ನಮಗೆ ಅಲ್ಲಿ ಚಹಾದೊಂದಿಗೆ ಚೂಡಾ ಇರುತ್ತದೆ ಎಂತಲೇ ಸಾಮಾನ್ಯವಾದ ಅರ್ಥ.
ಚೂಡಾ ಎಂಬುದು ವಗ್ಗರಣೆ ಅಥವಾ ಖಾರಾ ಹಚ್ಚಿದ ಚುರುಮರಿಗೆ ನಮ್ಮಲ್ಲಿ ಜನಪ್ರಿಯವಾದ ಹೆಸರು. ಒಮ್ಮೊಮ್ಮೆ ಚೂಡಾ ಎನ್ನುವದನ್ನು ವಗ್ಗರಣೆ ಹಚ್ಚಿದ ಗಟ್ಟಿ ಅವಲ್ಕಕಿಗೂ ಬಳಸುವರಾದರೂ ಅದು ಚುರಮರಿ ಖಾರಕ್ಕೆ ಹೆಚ್ಚು ಸಲ ಅನ್ವಯವಾಗುತ್ತ ಬಂದಿದೆ.
ದಿನಾ ಆಫೀಸಿನ ಕೆಲಸವನ್ನೋ, ಹೊಲದ ಕೆಲಸವನ್ನೋ ಅಂಗಡಿಯ ಕೆಲಸವನ್ನೋ ಮುಗಿಸಿ ಕೊಂಡು ಸಂಜೆಯಾದರೆ ಸಾಕು ಹೊಟೆಲಿನ ದಾರಿ ಹಿಡಿಯುವ ನಮ್ಮ ಅಣ್ಣಂದಿರುಗಳು ಬರೀ ಚಹಾ ಕುಡಿದು ಹೊರ ಬರುವವರೇ ಅಲ್ಲ. ಅಲ್ಲಿ ಬಿಸಿ ಬಿಸಿ ಕುರುಂ ಕುರುಂ ಮಂಡಕ್ಕಿ, ಜೊತೆಗಿದ್ದರೆ ಒಂದು ಸಿಂಗಲ್ ಮಿರ್ಚಿ ಬಜಿ ತಿಂದು ಆಮೇಲೆ ಹಾಫ್ ಚಹಾ ಕುಡಿದಾಗಲೇ ಅವರ ಸಂಜೆಗಳು ರಂಗೇರುತ್ತವೆ.
ಅಂದ ಹಾಗೆ ಚೂಡಾ ಎಂದು ಪ್ರಸಿದ್ದ ಆಗಿರುವ ಈ ಖಾದ್ಯಕ್ಕೆ ಮಂಡಕ್ಕಿ, ,ಚುನಮರಿ, ಚುರುಮರಿ, ಚುರಮರಿ ಖಾರ ಮೊದಲಾದ ಹೆಸರುಗಳಿವೆ. ಚುರುಮರಿಗೆ ಖಾರಾ ಹಚ್ಚಿದ ಮೇಲೆ ಅದು ಚುರುಮರಿ ಖಾರ, ವಗ್ಗರಣಿ ಖಾರ ಮೊದಲಾದ ಹೆಸರಿನಿಂದ ಕರೆಯಲ್ಪಡುತ್ತದೆ. ಬಹುತೇಕ ಅದರಲ್ಲಿರುವ ಖಾರವೇ ಮೊದಲು ನೆನಪಿಗೆ ಬರುವದರಿಂದ ಅದಕ್ಕೆ ಖಾರ ಎಂಬ ಹೆಸರೇ ಸಂಕ್ಷಿಪ್ತವಾಗಿ ಜಾರಿಯಲ್ಲಿರುವದು ಗಮನಾರ್ಹ. ದಕ್ಷಿಣ ಕರ್ನಾಟಕ, ಮಂಗಳೂರಿನಿಂದ ಬಂದ ಬಂಧುಗಳು ಅದರ ಬಣ್ಣಕ್ಕೆ ಮನಸ್ಸು ನೀಡಿ ಬಹಳಷ್ಟು ಸಲ ಚುರುಮುರಿ ತಿನ್ನುವಾಗ ಖಾರದಿಂದಾಗಿ ಉಸುಗುಡುವದನ್ನು ನೋಡುವದು ಸರ್ವೇ ಸಾಮಾನ್ಯ.
ನೆಲದ ಗುಣವೋ ಅಥವಾ ಪರಂಪರೆಯ ಬಲವೋ ನಮ್ಮ,ವರಿಗೆ ಮಾತ್ರ ಬರಿ ಚುರುಮರಿ ತಿನ್ನುವದು ಸಾಧ್ಯವೇ ಇಲ್ಲದ ಮಾತು. ಹೊಟೆಲಿನವರು ಬರಿ ಚುರುಮರಿಯನ್ನು ಹಾಳೆಯಲ್ಲಿಯೋ, ಪ್ಲೇಟಿ ನಲ್ಲಿಯೋ ಹಾಕಿಕೊಟ್ಟರೆ ಇವರಿಗೆ ಸಮಧಾನವೇ ಇಲ್ಲ. ಅದರ ಪಕ್ಕಕ್ಕೆ ಶಾಸ್ತಿಯ ಸಂಗೀತಗಾರರ ಬದಿಯಲ್ಲಿ ಸದಾ ಇರುವ ಪಕ್ಕವಾದ್ಯಗಳಂತೆ ಉಳ್ಳಾಗಡ್ಡಿ, ಮೆನಸಿನಕಾಯಿ ಇರಲೇಬೇಕು. ಕಿಲೋಗೆ ಐವತ್ತೋ, ನೂರೋ ರೂಪಾಯಿ ಅಗಿರುವ ಉಳ್ಳಾಗಡ್ಡಿಯನ್ನು ಚುರುಮರಿಯ ಜೊತೆಗೆ ಕೊಟ್ಟು ಕೊಟ್ಟು ಹೊಟೇಲಿನಾತ ಬೇಸರಗೊಳ್ಳು ವದಂತೂ ಇವತ್ತಿನ ತುಟ್ಟಿಯ ಕಾಲಕ್ಕೆ ಸಹಜವಾದದ್ದು.
ಚುರಮರಿ ತಿನ್ನಲು ಯೋಗ್ಯವಾದ ಸಮಯ ಯಾವದು? ಎಂಬುದು ಬಹು ಚರ್ಚಿತ ಪ್ರಶ್ನೆ. ಚುರುಮರಿ ನಮ್ಮ ಆಹಾರದ ಮುಖ್ಯ ಭಾಗವೇ ಆದ್ದರಿಂದ ಅದನ್ನು ತಿನ್ನಲು ಇಂತಿಂಥ ಸಮಯ ಅಂತ ನಿಗದಿ ಮಾಡುವದು ಸರಿಯಾದ ಮಾತಲ್ಲವಾದರೂ ಸಂಜೆ ಗೆಳೆಯರೊಂದಿಗೆ ವಾಕ್ ಮುಗಿಸಿದ ಕೂಡಲೇ, ಅಥವಾ ಹೊಲದಿಂದ ಎತ್ತುಗಳನ್ನು ಬಿಚ್ಚಿ ಮನೆಗೆ ಹೊಡೆದು ಅವು ಮನೆಗೆ ಹೋಗುತ್ತಿರುವ ಸಮಯ ದಲ್ಲಿಯೋ ನಮ್ಮ ಜನ ಹೊಟೇಲಿಗೆ ಹೋಗಿ ಚುರುಮರಿ ಖಾರ ತಿನ್ನುವ ಸಮಯವೇ ಪ್ರಶಸ್ತವಾದದ್ದು ಎನ್ನಬಹುದು. ಆದರೂ ಕೊನೆಗೆ ಊಟದ ಜೊತೆಗೂ ಅದನ್ನು ಬದಿಗೆ ಇಟ್ಟುಕೊಂಡು (ಆಧುನಿಕರು ಹೇಳುವ ಸೈಡ್ಸ ರೀತಿಯಲ್ಲಿ) ಆಗಾಗ ರೊಟ್ಟಿ ಪಲ್ಲೆದೊಂದಿಗೆ ಪಕ್ಕಕ್ಕೆ ಬಾಯಾಡಿಸುತ್ತಲೇ ಊಟ ಮಾಡುವ ಚುರಮರಿ ಪ್ರಿಯರೂ ಇರುವದನ್ನು ನಾನು ಕಂಡಿದ್ದೇನೆ .ಉಪ್ಪಿಟ್ಟು ಚುರುಮರಿಗಳಿಲ್ಲದೇ ನಮ್ಮ ಮದುವೆಗಳಂಥ ಮಹಕಾರ್ಯಗಳೂ ಸಾಂಗವಾಗುವದಿಲ್ಲ ಮದುವೆಗೆ ಬಂದ ಬೀಗರಿಗೆ ಮೊದಲು ಹೊಟ್ಟೆ ತುಂಬ ಉಪ್ಪಿಟ್ಟು ಚುರುಮರಿ ಹೊಡೆಸಿದ ಮೇಲೆಯೆ ಉಳಿದ ಕಾರ್ಯಗಳು ಆರಂಭವಾಗುತ್ತವೆನ್ನಿ.ಒಂದು ರೀತಿಯಲ್ಲಿ ನಮ್ಮ ಹಳ್ಳಿ ತಾಯಂದಿರಿಗೆ ಸದಾ ಮಾಡಿ ಡಬ್ಬಿಯಲ್ಲಿ ತುಂಬಿಟ್ಟಿರುವ ಚುರಮರಿ ಸಕಲ ಕಾಲಕ್ಕು ಸಹಾಯಕ್ಕೆ ಬರುವ ಅನಿಮಿತ್ತ ಬಂಧುವೆನ್ನಿ. ಅಕಾಲಕ್ಕೆ ಬರುವ ಅತಿಥಿಗಳಿಗೆ ಒಣ ಚಹ ಕೊಟ್ಟು ಕಳಿಸುವದಕ್ಕಿಂತ ತಮ್ಮ ಡಬ್ಬಿಯೊಳಗಡೆ ಸುರಕ್ಷಿತವಾಗಿರುವ ಚುರಮರಿ ಚೂಡಾವನ್ನು ಕೊಟ್ಟು ಸತ್ಕರಿಸುವ ಮೂಲಕ ತಮ್ಮ ‘ಅತಿಥಿ ದೇವೋ ಭವ’ ಮಾತನ್ನೂ ಉಳಿಸಿಕೊಂಡು ಮನೆಯ ಮಾನವನ್ನು ಉಳಿಸುತ್ತಾರೆ. ಜೊತೆಗೆ ಕಾಲವಲ್ಲದ ಕಾಲದಲ್ಲಿ ಒಲೆಯನ್ನು ಊದುವ ಶ್ರಮವನ್ನೂ ಉಳಿಸಿಕೊಂಡು ಪಾರಾಗುತ್ತಾರೆ.
ಒಂದು ಕಾಲಕ್ಕೆ ಹಳ್ಳಿಯಲ್ಲಿ ಚಹಾದಂಗಡಿಗಳು ಇರುವದು ನಿಷಿದ್ಧ ಎನ್ನುವ ಕಾಲವೂ ಇತ್ತು ಇಂದು ಹೊಟೇಲಿಲ್ಲದ ಊರಿಗೆ ಕನ್ಯೆಯನ್ನು ಕೊಡುವದಕ್ಕೂ ಹಿಂಜರಿಯುವ ಕಾಲ ಬಂದಿದೆ. ಹೀಗಾಗಿ ಊರೆಂದ ಮೇಲೆ ಆ ಊರಲ್ಲಿ ಮೊದಲಿಗೆ ನಿಮ್ಮನ್ನು ಸ್ವಾಗತಿಸುವವು ಹಳ್ಳಿಯ ಚಹಾದಂಗಡಿಗಳೇ. ಖ್ಯಾತ ಪ್ರಬಂಧ ಕಾರರಾದ ವೀರೇಂದ್ರ ಸಿಂಪಿಯವರು ಈ ಹಳ್ಳಿಯ ಹೊಟೇಲುಗಳೆಷ್ಟು ಮುಖ್ಯ ಎನ್ನುವದನ್ನು ತಮ್ಮ ಪ್ರಬಂಧವೊಂದರಲ್ಲಿ ವಿಸ್ತರಿಸಿರುವದು ಓದುಗರಿಗೆ ಗೊತ್ತು. ನಮ್ಮಹಳ್ಳಿಗಳ ಗೌರವವೂ ಇಂದು ಹೊಟೆಲುಗಳ ಮೇಲೆ ನಿಂತಿದೆ.” ಅದೆನ್ರಿ ಚಂದಂಗ ಒಂದಕಪ್ಪ ಚಹಾ ಸಿಗಂಗಿಲ್ಲ ” ಎಂದು ಚಹಾ ದಣನ ಅಷ್ಟೇ ಅಲ್ಲ, ಯಾವುದೇ ಮುಖ್ಯ ಕಾರ್ಯ ಮುಗಿಯಲಿ, ಅದು ಲಕ್ಷಾಂತರ ರೂಪಾಯಿ ವ್ಯವಹಾರವೆ ಆಗಿರಲಿ, ಅದು ಮುಗಿದ ಮೇಲೆ ಅದರ ಮುಕ್ತಾಯದ ಸಂಕೇತವಾಗಿ ಚಹಾ ಕುಡಿದು ಅದಕ್ಕೆ ಒಮ್ಮತದ ಮುದ್ರೆಯೊತ್ತುವದನ್ನು ನಾವು ಕಾಣುತ್ತೇವೆ. ಇಂದು ಹಳ್ಳಿಗಳಿಗೂ ಹೋಟೇಲು ಎಷ್ಟು ಮುಖ್ಯವಾಗಿವೆ ಎಂಬ ಮಾತಿಗೆ ಇದು ಉದಾಹರಣೆಯಷ್ಟೇ.
ನೀವು ನಮ್ಮ ಕಡೆ ಹೊಟೇಲಿಗೆ ಹೋದರೆ ಎಲ್ಲಾ ಕಾಲಕ್ಕೂ ಸಿಗುವ ಏಕಮೇವ ತಿನಿಸು ಎಂದರೆ ಚುನಮರಿಯೊಂದೇ. ಏನಿರಲಿ ಬಿಡಲಿ , ಚುರುಮರಿ ಇಲ್ಲದೇ ಹೋದರೆ ಆ ಹೊಟೆಲಿನ ಕೀರ್ತಿಗೇ ಅಪಮಾನ ಎಂಬ ಭಾವ ನಮ್ಮಲ್ಲಿ ಇದ್ದಂತಿದೆ. ‘ಅದು ಎಂಥಾ ಹೊಟೆಲರಿ ಒಂದ ಚುರುಮರಿ ಖಾರ ಸಹಿತ ಸಿಗೂದಿಲ್ಲ ’ ಅಂತ ಮೂಗು ಮುರಿಯುವ ಮಾತಿನಿಂದ ಚುರಮರಿ ಸಿಗದೇ ಇರುವ ಹೊಟೇಲನ್ನು ಹಿಯಾಳಿಸುವವರೂ ಇದ್ದಾರೆ.
ಇಷ್ಟೆಲ್ಲಾ ಅದರೂ ಎಲ್ಲಾ ಮಹಾತ್ಮರಿಗೂ ನಿಂದೆ ಪೀಡೆ ತಪ್ಪದ ಹಾಗೆ ಚುರುಮರಿಯನ್ನೂ ಗೊಳ್ಳ ಚುರುಮರಿ ಎಂದು ಟೀಕಿಸುವ ಚುರುಮರಿ ವಿರೋಧಿಗಳೂ ಇದ್ದಾರೆ. ಆದರೆ ಅದೇ ಗೊಳ್ಳ ಚುರುಮರಿಯನ್ನ ಬಾಯ್ತುಂಬ ಬಾಯಾಡಿಸುತ್ತಲೇ ಅವರು ಆ ಬಗೆಯ ಟೀಕೆಯನ್ನು ಮಾಡುತ್ತಾರೆ ಎನ್ನುವದು ಅನುಭವ ವೇದ್ಯವಾದ ಮಾತು.
ಚುರುಮರಿ ಕೇವಲ ವಗ್ಗರಣೆ ಹಚ್ಚಿದ ಖಾರವಾಗಿ ಮಾತ್ರ ನಮ್ಮಲ್ಲಿ ಸಿಗಲಾರದು. ಅದನ್ನು ಎಷ್ಟು ಬಗೆ ಯಿಂದ ಸ್ವರೂಪ ಬದಲಿಸಿ ತಿಂದರೂ ನಮ್ಮವರಿಗೆ ರುಚಿಯೇ. ತೊಯ್ದ ಚುಮ್ಮರಿ, ಮಿಸಳ ಚುರಮರಿ, ಗಟ್ಟಿ ಚುರಮರಿ, ಗಿರಮಿಟ್ಟು ಮುಂತಾಗಿ ಅನೇಕ ರೀತಿಯ ತಿನಿಸುಗಳಾಗಿಯೂ ತಿನ್ನುತ್ತಾರೆ. ಇನ್ನು ಅದಕ್ಕೆ ಒಂದಿಷ್ಟು ಕಡಲೆಯ ಹಿಟ್ಟು ಹುಳಿ ಹಾಕಿ ಬೊಗಾಣಿಯಲ್ಲಿ ಗಿರ್ ಗಿರ್ ಮಾಡಿ ಪ್ಲೇಟಿಗೆ ಸುರಿದು ಕೊಡುವ ಗಿರಮಿಟ್ಟನ ರುಚಿಯನ್ನಂತೂ ಸವಿದೇ ಅನುಭವಿಸಬೆಕು. ಅದರೊಂದಿಗೆ ಒಂದು ಮಿರ್ಚಿ ಭಜಿ ಇದ್ದರಂತೂ ಸ್ವರ್ಗ ಸುಖವೆ ಬಂದಂತೆ ಎನ್ನುವ ಮಹಾಶಯರೂ ಇದ್ದಾರೆ.ಯಾವ ವೈದ್ಯರು ಅದೆಷ್ಟೇ ಭಜಿ ತಿನ್ನಬೇಡಿ ರೆಂದು ತಾಕಿತು ಮಾಡಿದ್ದರೂ ‘ಹುಟ್ಟಿದ ಜನ್ಮ ಹಗಲೆಲ್ಲ ಬರೂದೈತೆನ್ರಿ ಅವರೆನ್ ಡಾಕ್ಟರು ಎಲ್ಲಾ ಬಿಡ ಅಂತಾರು ಬಿಡೂದೈತೆನ್ರಿ’ ‘ಎಂದು ಉಡಾಫೆಯ ಮಾತಾಡುತ್ತಲೇ ಭಜಿ ಚುರುಮರಿ ಬಾಯಾಡಿಸುವವರನ್ನೂ ಕಾಣುತ್ತೇವೆ.
ಜಾಗತಿಕರಣದ ಪ್ರಭಾವವೋ ಅಥವಾ ಜಗತ್ತೇ ಸಂಕುಚಿತವಾಗುತ್ತಿರುವ ಪರಿಣಾಮವೋ ಇಂದು ನಮ್ಮ ಹಳ್ಳಹಳಿಗೂ ಉಡುಪಿ ಹೊಟಲ್ಗಳು ದೌಡಾಯಿಸಿ ಅವರ ಇಡ್ಲಿ ದೋಸೆಗಳ ಬೆನ್ನು ಬಿದ್ದಿರುವ ನಮ್ಮ ಅಣ್ಣ ತಮ್ಮಂದಿರು ಚುರುಮರಿಯ ಏಕಸ್ವಾಮ್ಯಯಿತ್ತೀಚೆಗೆ ಕುತ್ತು ತಂದಿದ್ದಾರೆ ಎಂದರೆ ತಪ್ಪಿಲ್ಲ. ನಮ್ಮ ಉಪ್ಪಿಟ್ಟು ಚುರಮರಿ ಸೂಸಲಾ, ಅವಲಕ್ಕಿಗಳ ಜಾಗಕ್ಕೆ ಅವರ ವಿಭಿನ್ನ ಖಾದ್ಯಗಳು ಬಂದು ರಾಜ್ಯವೇ ಒಂದೇ ರೀತಿಯ ಆಹಾರ ಪದ್ಧತಿಗೆ ಒಳಗಾಗುತ್ತಿರುವದು ನಮ್ಮತನವನ್ನು ಉಳಿಸಿಕೊಳ್ಳಬೇಕೆನ್ನುವ ನನ್ನಂಥವರಿಗಂತು ಖುಷಿಯ ವಿಚಾರವೇನೂ ಅಲ್ಲ.
ಜಿಟಿ ಜಿಟಿ ಮಳೆಗಳ ತಂಪು ಸಂಜೆಯಲಿ,್ಲ ಕುರು ಕುರುಂ ಚುರುಮರಿ ತಿನ್ನುತ್ತ, ಬಿಸಿ ಬಿಸಿ ಚಹಾ ಕುಡಿಯುತ್ತ ಮನೆಯಾಕೆಯೊಡನೆ ಮತನಾಡುತ್ತ ಬೆಚ್ಚಗೆ ಕುಳಿತಿರುವ ಖುಷಿ ಮುಂಜಾನೆ ಮಾಡಿದ ಇಡ್ಲಿ ಸಾಂಭಾರ್ಗಳನ್ನೆ ಸಂಜೆಯವರೆಗೂ ಕೊಡುವ ಅವರ ದರ್ಶಿನಿಗಳಿಗೆಲ್ಲಿಂದ, ಯಾವ ಕಾಲಕ್ಕೆ ಬಂದೀತು? ಏನಿದ್ದರೂ ಜಾನಪದ ಗಾರುಡಿಗ ಹುಕ್ಕೇರಿ ಬಾಳಪ್ಪನವರು ಹಾಡಿದಂತೆ ನಮಗೆ ನಮ್ಮ ಹಳ್ಳಿಯ ಊರೇ, ನಮ್ಮ ಆ ಹಳೆಯ ತಿನಿಸುಗಳೇ ಮೇಲಲ್ಲವೇ?
ಡಾಕ್ಟರ್ ಗಳು ಎಷ್ಟೇ ಚಜಾ ಬಿಡಿರೆಂದರೂ ಶುಗರ್ ಲೆವಲ್ ಗರಿಷ್ಟ ಮುಟ್ಟಿದ್ಸರೂ ಕಡೆ್ಎ ಸುಗರ್ ಲೆಸ್ ಬಿಸಿಬಿಸಿ ಚಹಾ ಕುಡದಾಗಲೇ ನಮಗೆ ಒಂದಿಷ್ಟು ಸಮಾಧಾನ..ನಮ್ಮ ಹಳ್ಳಿಯ ಎಲ್ಲಹಿರಿತನ ಗಳೂ ಕಾರ್ಯೆಕಟ್ಟುಗಳೂ ಮುಗಿಯುವದು ಚಹಾದೊಂದಿಗನೆ‌.
ನಡಿರಿ ಮತ್ ಯಾಕ ತಡಾ ಒಂದ ಸಿಂಗಲ್ ಮಿರ್ಚಿ ಹೊಡದ ಹಾಪ್ ಚಹಾ‌ ಕುಡದ ಬರುನಲಾ! ಏನಂತಿರಿ?


ಯಾ.ಮ.ಯಾಕೊಳ್ಳಿ

2 thoughts on “ಯಾ.ಮ.ಯಾಕೊಳ್ಳಿ ಲಲಿತ ಪ್ರಬಂಧ-ಚಹಾದ ಜೋಡಿ….

  1. ಚಹಾದ ಜೊತೆ ಜೂಡಾದಂಗಿರುವ ನಿಮ್ಮ ಪದಗಳು ವಿಚಾರಗಳು ಮನಸ್ಸಿಗೆ ಖುಷಿ ಕೊಟ್ಟವು ಸರ್. ಒಳ್ಳೆಯ ಪ್ರಬಂಧ. ಅಭಿನಂದನೆಗಳು ಸರ್.

  2. ನ್ಯೆಜ್ಯ ಪ್ರಭಂದ ಮನೆ ಮುಟ್ಟಿತು

Leave a Reply

Back To Top