ಕಾವ್ಯ ಸಂಗಾತಿ
ವಿಮಾಲಾರುಣ ಪಡ್ಡoಬೈಲು
ಪ್ರೇಮ ಮಿಲನ
ನೂರಾರು ಭಾವಕೆ ನೀನಾದೆರಾಗ
ಕನಸಿನ ತೆನೆಗೆ ನೀರೆರೆದ ಜೀವ
ಹಸಿಬಿಸಿ ಉಸಿರಲಿ ಬೆಳೆದ ಈ ಪ್ರೇಮ
ರಕ್ತ ಚಂದನದಿ ಮೂಡಿತು ನಿನ್ನ ನಾಮ
ಗಿಡದಲರಳಿದ ಹೂ ಚೆಲುವಲ್ಲಿ
ಕಂಡೆ ನಿನ್ನ ಹೊಳೆವ ಚಂದ್ರನ್ನಂತ ಮೊಗವ
ನುಣುಪು ಕೆನ್ನೆಗೆ ಸವರಿಟ್ಟ ಮುತ್ತು
ರಂಗೇರಿತು ಕೆಂಪುಕಾಂತಿಯಲಿ
ನೆನಪಿನ ಸೆಲೆಯಲ್ಲಿ ಸಿಲುಕಿದ ಮನ
ದಡವೇರಿಸಿತು ಆ ಮಧುರ ಪ್ರೀತಿ
ಇಂದು ನಾಳೆಗಳ ತೊಳಲಾಟದಿ
ಕಾಯುತಿಹುದು ಮನ ನಿನ್ನ ತೋಳತೆಕ್ಕೆಗಾಗಿ
ಹಾರುವ ಹಕ್ಕಿಗೆ ರೆಕ್ಕೆಯ ಮೋಹ
ಈಜುವ ಮೀನಿಗೆ ನೀರಿನ ದಾಹ
ನನ್ನ ಬಾಳ ಹಸಿರ ಕನಸಿಗೆ
ನಿನ್ನ ಒಲಮೆಯ ಪ್ರೇಮದ ವ್ಯಾಮೋಹ
ಕಾಲ ಜಾರುವ ಮುನ್ನ ಹೃದಯ ಬೆರೆಯಲಿ
ಮಧುರಯಾತನೆಯ ಭಾವ
ಕಣ್ಣಂಚಲ್ಲಿ ಬತ್ತದಿರಲಿ
ಅರಳಿದ ಒಲವ ಪ್ರೀತಿ
ಪ್ರೇಮ ದೀಪವಾಗಿ ಹೊಳಹು ಚೆಲ್ಲಲಿ
ಹೃದಯ ಹೃದಯದ ಪ್ರೇಮ ಮಿಲನ
ಮನದೊಳಗೆ ಹಸಿರಾಗಿರಲು
ಭೀತಿ ಇರದು ಬಾಳಲಿ
ನೀ ನಡೆಸು ಕೈ ಹಿಡಿದೆನ್ನ
ನೆರಳಾಗುವೆ ನಿನ್ನ ಬಾಳ ಪಯಣದಿ