ಮಕ್ಕಳ ಕವಿತೆ

ಅರುಣಾ ರಾವ್

ಅಳಿಲು ಭಕ್ತಿ

ರಾಮ ಸೀತೆಯನು
ಹುಡುಕುತ ಹೊರಟ
ಸಾಗರವೊಂದು
ಎದುರಾಯ್ತು

ಕಡಲನು ಹೇಗೆ
ದಾಟುವುದೆಂದು
ರಾಮಚಂದ್ರನಿಗೆ
ವ್ಯಥೆಯಾಯ್ತು

ವಾನರ ಸೇನೆಯು
ಉಪಾಯ ಹೂಡಿ
ಸೇತುವೆ ಕಟ್ಟಲು
ಒಂದಾಯ್ತು

ಬಂಡೆಗಲ್ಲುಗಳ
ಮೇಲ್ಗಡೆ ತಾವೇ
ರಾಮ ನಾಮವನು
ಬರೆದಾಯ್ತು

ನೀರಿಗೆ ಎಸೆದ
ಕಲ್ಗಳು ಮುಳುಗದೆ
ಹೂವಿನಂದದಿ
ತೇಲಾಯ್ತು

ಕಾರ್ಯ ವೈಖರಿ
ಕಂಡು ಅಳಿಲೊಂದು
ತಾನೂ ಕೆಲಸಕೆ
ಮುಂದಾಯ್ತು

ಹಸಿ ಮೈಯಲ್ಲಿ
ಮರಳ ಮೇಗಡೆ
ಆ ಕಡೆ ಈ ಕಡೆ
ಹೊರಳಾಯ್ತು

ಮೈಗೆ ಮೆತ್ತಿದ
ಮರಳ ಕಣಗಳ
ಸೇತುವೆ ಮೇಲೆ
ಒದರಾಯ್ತು

ದಶರಥ ಕುವರಗೆ
ಅಳಿಲಿನ ಸೇವೆ
ಕಾಣುತ ಅತೀವ
ಬೆರಗಾಯ್ತು

ಆದರದಿಂದಲಿ
ಅಳಿಲನು ಕರೆದು
ಬೆನ್ನ ಮೇಗಡೆ
ಸವರಾಯ್ತು

ಈಗಲೂ ಬೆನ್ನಲಿ
ರಾಮನ ಬೆರಳು
ಶಾಶ್ವತವಾಗಿ
ಉಳಿದಾಯ್ತು

ಮಳಲಿನ ಶಕ್ತಿ
ಅಳಿಲನ ಭಕ್ತಿ
ಕೀರ್ತಿ ಶಿಖರವನು
ಮುಟ್ಟಾಯ್ತು


ಅರುಣಾ ರಾವ್

Leave a Reply

Back To Top