ವಸುಂಧರಾ ಕದಲೂರು ಕವಿತೆ-ಮುಖ್ಯ- ಅಮುಖ್ಯದಾಟ

ಕಾವ್ಯ ಸಂಗಾತಿ

ವಸುಂಧರಾ ಕದಲೂರು.

ಮುಖ್ಯ- ಅಮುಖ್ಯದಾಟ

ಮೇಲುಕೀಳಾಟದ ಯುದ್ಧ ಯಾವತ್ತೂ
ಅಮುಖ್ಯ: ಈ ಹೊತ್ತಿನ ತುತ್ತು, ಒಲೆ ಹೊತ್ತಿ
ಅನ್ನವೋ ಗಂಜಿಯೋ ಬೆಂದರಾಗುತ್ತಿತ್ತು
ಇದೇ ಸತ್ಯದ ಮುಖ್ಯ ಬಾಬತ್ತು

ಕಣ್ಣಾಮುಚ್ಚೇ ಚದುರಂಗ ಆಡಿa
ದಾಳಹೂಡಿ ಗಾಳಹಾಕಿ ಕೋಟೆಗೋಡೆ
ಕಟ್ಟಿ – ಕೆಡವಿ; ಕೆಟ್ಟ ಆಟಹೂಡಿ ಸಿಂಹಾಸನ
ಆರೋಹಣದ ಹಿಂದೆಯೇ ಅಧಃಪತನ
ನೋಡಿ, ಇದು ಅಮುಖ್ಯದಾಟ ಎಂದರಿವಾಗುವ
ಮುನ್ನ ಶಿರ ಬಾಗಿದರೆ ಮುಗಿಯಿತು ಜೀವದಾಟ!

ಯುದ್ಧ, ಕಂದನ ತೊಟ್ಟಿಲ ಮೇಲೆ ತೂಗುಬಿದ್ದ
ಘಟಸರ್ಪ; ಕಕ್ಕಿದರೂ ಕುಕ್ಕಿದರೂ ಆಪತ್ತೇ
ಬದುಕು ಕಸಿದಂತೆ, ಆಸೆ ಕುಸಿದಂತೆ
ಆಜೀವನ ನರಳಾಟ; ತಾಯಂದಿರ ಮಡಿಲಿಗೆ
ಹಾಲೂಡುವ ಎದೆಗೆ ಯುದ್ಧವೆಂಬುದು
ಯಾವತ್ತೂ ಅಮುಖ್ಯದಾಟ.

ಮಕರಂದಕಾಡುವ ದುಂಬಿಯಾಟ; ಮಳೆಮೋಡಕೆ
ತಡೆಯೊಡ್ಡುವ ಬೆಟ್ಟಸಾಲು, ಹಸಿದೊಡಲಿ ತುಂಬಿಸುವ
ಅವ್ವನ ರೊಟ್ಟಿ ದುಡಿಮೆಗಾರ ಅಪ್ಪನ ಗಟ್ಟಿ ರಟ್ಟೆ ನಡುವೆ
ಯುದ್ಧ ಮುಖ್ಯ ಎಂದದ್ದು ಯಾರು ಯಾವತ್ತಿಗೆ?!


Leave a Reply

Back To Top