ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ
ಚಂದ್ರ ಅತ್ತಾಗ…
ಅದೊಂದು ಹುಣ್ಣಿಮೆ ರಾತ್ರಿ
ಪ್ರಶಾಂತ ಎಲ್ಲೆಡೆ..
ಭುವಿ ಬೆಳದಿಂಗಳನು
ಹಾಸಿ ಹೊದ್ದು ನಿದ್ರೆಗೆ
ಇಳಿದಳೇನೋ…
ಉರಿಯುತಿದೆ
ಮಂದ ಚಿಮಣಿಯೊಂದು
ಮುರುಕು ಗುಡಿಸಲೊಳಗೆ ;
ಹರಡಿದ ಹರಕು
ಚಾಪೆಯ ಮೇಲೆ
ಪುಟ್ಟ ಪೋರನ ಶಯನ..
ನೋಡುತಿಹ ನೆಟ್ಟ
ದಿಟ್ಟಿಯಲಿ ಪೋರ
ಅಲ್ಲಲ್ಲಿ ಕಿತ್ತು ಹೋದ
ಗುಡಿಸಲ ಚಪ್ಪರ
ಸಂದಿಯಿಂದ ಆಕಾಶದೆಡೆ…
ಬಾನಲಿ ನಗುತಲಿದ್ದ
ದುಂಡಗೆ ಬೆಳ್ಳನೆಯ ಚಂದ್ರ ;
ಕನವರಿಸಿ ಎದ್ದು
ರೊಟ್ಟಿಯ ಬುಟ್ಟಿಗೆ
ಕೈ ಹಾಕಿದ ಪೋರ ಹಿಗ್ಗಿ
ರೊಟ್ಟಿ ಇರಲೇ ಇಲ್ಲ….ಬರೀ ಬುಟ್ಟಿ..
ಕಣ್ಣೀರು ತುಂಬಿದ
ಕಂಗಳಿಂದ ನೋಡಿದ
ಪೋರ ಚಂದ್ರನೆಡೆಗೆ
ಅದು ರೊಟ್ಟಿಯೇ…ಉಂಹೂಂ..
ಕಸಿವಿಸಿಗೊಂಡ ಚಂದ್ರ
ತೇವವಾದ ಕಣ್ಣಂಚಿನೊಂದಿಗೆ
ಕರಿ ಮೋಡದಲಿ
ಗಕ್ಕನೆ ಮರೆಯಾಗಿಬಿಟ್ಟ….
ಬಡತನ ಹಸಿವು..
ಮನ ತಟ್ಟಿದ ಕವಿತೆ
ಧನ್ಯವಾದಗಳು ಮೆಚ್ಚುಗೆಗೆ ಮೇಡಂ.
ಅರ್ಥಪೂರ್ಣ ಕವಿತೆ.
ಧ್ವನಿಪೂರ್ಣ ಕವಿತೆ ಮೇಡಂ. ಹಸಿವೆಯೇ ಕವಿತೆಯುದ್ಧಕ್ಕೂ ಮಾತಾಡಿದೆ ಸಂಗಾತಿ ಬಳಗದಲ್ಲಿ ಉತ್ತಮ ಕಾವ್ಯಗಳು ಬರ್ತಿವೆ. ಸಂಪಾದಕರಿಗೂ ಅಭಿನಂದನೆಗಳು.
ಎಷ್ಟು ಹೃದ್ಯ ಕವಿತೆ…. ಮೇಡಂ…. ಒಂಥರಾ ಸಂಕಟವಾಯಿತು….
ನನ್ನ ಕವನ ಓದಿ ಮೆಚ್ಚುಗೆ ವ್ಯಕ್ತ ಪಡಿಸಿದ ಆತ್ಮೀಯರೆಲ್ಲರಿಗೂ ಧನ್ಯವಾದಗಳು. ಹಮೀದಾ ಬೇಗಂ.