ಕಾವ್ಯ ಸಂಗಾತಿ
ನಯನ ಭಟ್.
ಗಜಲ್
“ತರಹೀ ಗಜಲ್ : ಮಧುರಾ ಮೂರ್ತಿ ಅವರ ಊಲಾ ಮಿಸ್ರಾ“
ತರಹೀ ಗಜಲ್ : ಮಧುರಾ ಮೂರ್ತಿ ಅವರ ಊಲಾ ಮಿಸ್ರಾ”
ರಂಗು ರಂಗಿನ ಕನಸು ಕಾಣುವ ಮನದಲಿ ಕಾರ್ಮೋಡ ಕವಿದಿದೆ
ಹುಚ್ಚುಕಟ್ಟಿ ಪೋಣಿಸಿದ ಭವ್ಯ ಕನಸುಗಳಲಿ ಖೇದಭಾವ ನಿಂದಿದೆ
ಬಾಷ್ಪಗಳ ಕುಲುಮೆಯಲಿ ಹುದುಗಿಸಿರುವೆ ನೆಚ್ಚಿಕೊಂಡ ನೆಂಪುಗಳನು
ಇಂಚಿಂಚು ಸವೆದು ಕ್ಷಯಿಸಿರಲು ಮೋಹ ಕಂಗಳ ತುಡಿತ ಕುಸಿದಿದೆ
ಸಹ್ಯತೆ ತೋರಿದ ಭಾವಗಳೆಡೆಗೆ ನಿಷ್ಠೂರವಾದಿಯಾಗಬೇಕಿದೆ ಈಗೀಗ
ಸಹಬಾಳ್ವೆಯ ತತ್ವ ಧರೆಗುರುಳಿರಲು ಸಹನೆಯ ನಲಿದಾಟ ನೊಂದಿದೆ
ಬಾನಂಚಿನ ಚುಕ್ಕಿ ಮಿನುಗಿದಷ್ಟೂ ಅಚಿಂತ್ಯವೇ ಬದುಕಿನ ರಹದಾರಿಗೆ
ಆಸೆಗಳ ಹಯಕೆ ಪರಿಧಿಯನು ಚಿತ್ರಿಸಲು ನೀರಸತೆಯ ಸತ್ವ ಕಳೆದಿದೆ
ಧಾವಂತದಲಿ ಸಾಗುತಿಹ ಕಾಲಕೂ ನಿಯತಿಯೆಡೆಗೆ ಬದ್ಧತೆಯೊಂದಿದೆ
ನಯನಗಳ ದಿಟ್ಟಿ ಅನಂತವಾಗುತಿರಲು ಕ್ಷಣಗಳ ಸತ್ಯ ವಿಶದ ತಳೆದಿದೆ.