ಅಂಕಣ ಸಂಗಾತಿ

ಸಿನಿ ಸಂಗಾತಿ

ಈ ಓ E O

ಸರ್ಕಸ್ ನಲ್ಲಿದ್ದ ಕತ್ತೆಯೆಂದು ಪ್ರಾಣಿ ದಯಾ ಸಂಘದ ಸಹಾಯದಿಂದ ಅಲ್ಲಿಂದ ಬಿಡುಗಡೆ ಹೊಂದುವ ಯೋಗ ಪಡೆಯುತ್ತದೆ , ಅಲ್ಲಿಂದ ಬಿಡುಗಡೆಗೊಂಡ ಕತ್ತೆಯ ಪಯಣ ಮನುಷ್ಯರ ಒಡನಾಟದಲ್ಲಿ ಮುಂದುವರೆಯುತ್ತದೆ, ಪೋಲೆಂಡ್ ನಿಂದ ಯುರೋಪಿನವರೆಗೆ ಸಾಗುವ ಕತ್ತೆಯ ಪಯಣವೇ ಈ ಪೊಲೀಷ್ ಭಾಷೆಯ ಚಿತ್ರ “E O.”
“ಈ ಓ “ಎಂಬ ಹೆಸರಿನ ಕತ್ತೆಯ ಒಡತಿ ಕಸಲ್ಡಾ,
ಸರ್ಕಸ್ ನಲ್ಲಿ ಅವರಿಬ್ಬರದು ಒಂದು ಆತ್ಮೀಯ ಸಂಬಂಧ ,ಸರ್ಕಸ್ ನಿಂದ ಬಿಡುಗಡೆಗೊಳ್ಳುವ ಕತ್ತೆ ಬೇರೆಡೆಗೆ ಸ್ಥಳಾಂತರಗೊಳ್ಳುವುದರಿಂದ ತನ್ನನ್ನು ಸಾಕಿದ ಒಡತಿಯಿಂದ ಅನಿವಾರ್ಯವಾಗಿ ದೂರವಾಗುತ್ತದೆ, ಅಲ್ಲಿಂದ ಮುಂದೆ ಹಲವಾರು ಜನರ ಸಂಪರ್ಕಕ್ಕೆ ಬರುತ್ತದೆ, ಕಾಡುಮೇಡಿ ನಲ್ಲಿ ಅಲೆದಾಡುತ್ತದೆ, ಒಂದೆಡೆಯಿಂದ ತಪ್ಪಿಸಿಕೊಂಡು ಮತ್ತೊಂದೆಡೆಗೆ, ಅಲ್ಲಿಂದ ಮಗದೊಂದೆಡೆಗೆ ಸಾಗುತ್ತಲೇ ಇರುತ್ತದೆ.
ಹಾಗೆಂದು ಇದು ಪ್ರಾಣಿಗಳ ಸಿನಿಮಾ ಅಲ್ಲ ಕತ್ತೆಯ ಸುಧೀರ್ಘ ಪಯಣದ ಚಿತ್ರಣವೇ ಇಲ್ಲಿದೆ.
ಇದು ಈ. ಓ. ಎಂಬ ಹೆಸರಿನ ಕತ್ತೆಯ ಕಥೆಯಾದರೂ, ಕತ್ತೆ ಇಲ್ಲಿ ಯಾರೊಂದಿಗೂ ಸಂಭಾಷಿಸುವುದಿಲ್ಲ, ಸ್ವಗತದಲ್ಲಿಯೂ ಮಾತನಾಡುವುದಿಲ್ಲ, ಆಗಾಗ ತನ್ನನ್ನು ಸಾಕಿದ ಒಡತಿಯನ್ನು ಮಾತ್ರ ನೆನಪಿಸಿಕೊಂಡು ಅದು ಕಣ್ಣೀರಿಡುತ್ತದೆ.
ದಾರಿಗುಂಟ ಸಾಗುವಾಗ ಕತ್ತೆಯ ಸಂಪರ್ಕಕ್ಕೆ ಬರುವ ವ್ಯಕ್ತಿಗಳ ಒಳ್ಳೆಯತನವೋ,ಕ್ರೌರ್ಯವೋ, ಕರುಣೆಯೋ ಹೀಗೆ ಹಲವು ಭಾವಗಳ ದರ್ಶನವೇ ಇಲ್ಲಿ ಲಭ್ಯ .ಹೊರ ಪ್ರಪಂಚದ ಸಂಪರ್ಕದಲ್ಲಿ ಕತ್ತೆಯ ಮೂಲಕ ನಮಗೆ ಕಾಣುವುದು ಮನುಷ್ಯ ಎಂಬ ಜೀವಿಯ ಹಲವು ಮುಖಗಳು.
ಈಓ(EO) ತಪ್ಪಿಸಿಕೊಂಡು ಬಂದಾಗ ಅದನ್ನು ಪ್ರೀತಿಯಿಂದ ಸವರಿ ಹುಲ್ಲು ಕೊಡುವವರು ಕೆಲವರಾದರೆ , ಈ ಓ (EO)ನ ಮೇಲೆ ಮಣಗಟ್ಟಲೆ ಭಾರವನ್ನು ಹೊರೆಸಿ ಹೊಡೆದು ಹೊಡೆದು ಹಿಂಸಿಸುವವರು ಕೆಲವರು, ಇಲ್ಲಿ ಎಲ್ಲಾ ಕಡೆಯೂ “ಈಓ” ಮೂಕ ಪ್ರೇಕ್ಷಕ, ಹಾಗೆ ಸಾಗುವ ಪಯಣದಲ್ಲಿ ಏಕತಾನತೆ ಇಲ್ಲ, ಅದು ಸಾಗುವ ಕಾಡಿನ ದೃಶ್ಯಗಳು ಅಮೋಘ ಕಾಡಿನ ನೀರವತೆ, ಸ್ವಚ್ಛತೆ ಯೂರೋಪ್ ನ ಸುಂದರ ದೃಶ್ಯ ತಾಣಗಳು ಕಣ್ಣುಗಳಿಗೆ ಹಿತಕರ.


ಹೀಗೆ ಬರುವಾಗ ಕತ್ತೆ ಮುಖಾಮುಖಿ ಆಗುವುದು ಒಂದು ಫುಟ್ಬಾಲ್ ಪಂದ್ಯಕ್ಕೆ ಅನಿರೀಕ್ಷಿತವಾಗಿ ಕತ್ತೆಯ ಒದೆತದಿಂದ ಗೆಲುವನ್ನು ಸಾಧಿಸುವ ಒಂದು ಫುಟ್ಬಾಲ್ ತಂಡ ಕತ್ತೆಯನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಿ ಹುಲ್ಲು ಕ್ಯಾರೆಟ್ ಕೊಟ್ಟು ಸಕಲಾತಿಥ್ಯ ತೋರಿಸಿದರೆ, ಸೋಲನ್ನ ಅನುಭವಿಸಿದ ಮತ್ತೊಂದು ತಂಡ ದವರು ಕತ್ತೆಯನ್ನು ಚೆನ್ನಾಗಿ ಹೊಡೆದು ಹಿಂಸೆ ನೀಡುತ್ತಾರೆ. ಹೀಗೆ ಮನುಷ್ಯನ ವ್ಯಕ್ತಿತ್ವದ ವೈರುಧ್ಯಗಳನ್ನು ಇಲ್ಲಿ ಸಿನಿಮಾದಲ್ಲಿ ನಾವು ಕಾಣಬಹುದಾಗಿದೆ.
ಜೂಜಿನಲ್ಲಿ ಹಣವನ್ನು ಕಳೆದುಕೊಂಡ ಜೂಜುಕೋರ ಮಗನೊಬ್ಬ ಕತ್ತೆಯ ಮೇಲೆ ಅಪಾರ ಪ್ರೀತಿಯನ್ನು ತೋರಿಸುತ್ತಾನೆ, ಈ ಓ ವನ್ನು ಹೊತ್ತು ಒಯ್ಯುವ ಲಾರಿಯ ಚಾಲಕ ಬಡ ಹೆಣ್ಣು ಮಗಳಿಗೆ ಆಹಾರ ನೀಡಿ, ತನ್ನ ಕಾಮ ತೃಷೆ ತೀರಿಸಿಕೊಳ್ಳಲು ಅವಳನ್ನು ಕರೆಯುತ್ತಾನೆ .ಇದೆಲ್ಲವನ್ನು ನೋಡುವ ಕತ್ತೆ ಮೌನ ಪ್ರೇಕ್ಷಕ.
ಹೀಗೆ ಸಾಗುವ ಈ ಓ ನ ಪಯಣದಲ್ಲಿ ಅವನಿಗೆ ಎದುರಾಗುವ ವ್ಯಕ್ತಿತ್ವಗಳ ಯಥಾವತ್ ಅನಾವರಣವನ್ನು ಈ ಸಿನಿಮಾದಲ್ಲಿ ಕಾಣಬಹುದಾಗಿದೆ.
EO- ಮನುಷ್ಯ ಪ್ರಾಣಿ ಸಂಬಂಧದ ಕಥೆಯನ್ನು ಹೇಳದಿದ್ದರೂ ಕರುಣೆ ಇಲ್ಲದ ಈ ಕ್ರೂರ ಜಗತ್ತಿನ ಒಳನೋಟ ಇಲ್ಲಿದೆ, ತನ್ನ ಸುತ್ತಲಿನ ಮನುಷ್ಯರ ಅಮಾನವೀಯ ನಡೆ ನುಡಿ ನಡುವಳಿಕೆಯನ್ನು ಈ ಓ ಗಮನಿಸುತ್ತಾನೆ.
ಈ ಓ ನ ಕಣ್ಣುಗಳ ಮೂಲಕ ನಾವು ಜೀವನದ ಏರಿಳಿತಗಳನ್ನು ಹಾಗೂ ಅವುಗಳನ್ನು ನಿಭಾಯಿಸ ಬೇಕಾಗುವ ಗುಣಗಳನ್ನು ಕಾಣುತ್ತೇವೆ.
ಈಓ ದ ಈ ಪಯಣದಲ್ಲಿ ಕಾಡಿನ ದೃಶ್ಯಗಳ ಕ್ಯಾಮರಾ ಕೈಚಳಕ ಎದ್ದು ಕಾಣುತ್ತದೆ, ಈ ಸಿನಿಮಾ ಯಾವುದೇ ನಿರ್ದಿಷ್ಟ ದಿಕ್ಕಿನಲ್ಲಿಕಥೆ ಸಾಗದಿದ್ದರೂ ಅದು ನೋಡುಗರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಸ್ವಲ್ಪ ನಿಧಾನಗತಿಯಲ್ಲಿ ಸಾಗುವ ಈ ಚಿತ್ರ ಒಂದು ವಿಭಿನ್ನ ಅನುಭವ ನೀಡುವ ಕಥಾ ಚಿತ್ರ.


ಚಿತ್ರದ ಸಿನಿಮಾ ಟೋಗ್ರಫಿ ಒಂದು ಅತ್ಯುತ್ತಮ
ಅಂಶ . ಕ್ಯಾಮೆರಾ ಸಹ ಪಾತ್ರದ ಮುಖ್ಯ ಅಂಶವಾಗಿ ಕಾಣುತ್ತದೆ ಹಾಗೆಯೇ ಸಿನಿಮಾವನ್ನು ಸುಂದರ ದೃಶ್ಯ ರೂಪವಾಗಿಸುವಲ್ಲಿ ಮೆರೆದಿದೆ, ಚಿತ್ರದ ಹಿನ್ನೆಲೆ ಸಂಗೀತ ಚಿತ್ರದ ಆತ್ಮದಂತೆ ಕೆಲಸ ಮಾಡಿದೆ.
EO ಒಂದು ಪ್ರಯೋಗಾತ್ಮಕ ಚಿತ್ರವಾಗಿದ್ದು ಜೀವನದ ಕಠೋರ ಸತ್ಯದರ್ಶನ ಮಾಡಿಸುತ್ತದೆ ಚಿತ್ರದ ಕಥೆಯು ಮಿತಿಯು ಹೌದು, ವಿಶೇಷವೂ ಹೌದು.
ಈ ಪೊಲೀಷ್ ಭಾಷೆಯ ಸಿನಿಮಾ ಅಸಾಂಪ್ರದಾಯಿಕ ನಿರೂಪಣೆಯಿಂದ ಎಲ್ಲರಿಗೂ ಹಿಡಿಸದಿದ್ದರೂ ಹೆಚ್ಚು ಸಂಭಾಷಣೆ ನಾಟಕೀಯತೆಯನ್ನು ಬಯಸದ ವೀಕ್ಷಕರಿಗೆ ಖಂಡಿತ ಹಿಡಿಸುತ್ತದೆ.
ಪ್ರಾಣಿಗಳನ್ನು ಹೆಚ್ಚು ದಯೆಯಿಂದ ಪ್ರೀತಿಯಿಂದ ಗೌರವದಿಂದ ಕಾಣಬೇಕೆಂಬ ಸಂದೇಶವನ್ನು ಈ ಸಿನಿಮಾ ನೀಡುತ್ತದೆ.
ಒಟ್ಟಾರೆಯಾಗಿ ಈ ಓ ಒಂದು ಶಕ್ತಿಯುತ ಮತ್ತು ಚಿಂತನೆಯ ಪ್ರಚೋದಕ ಚಲನಚಿತ್ರವಾಗಿದ್ದು ಕ್ಯಾನ್ ಚಲನಚಿತ್ರೋತ್ಸವದಲ್ಲಿ ಉತ್ತಮ ಚಿತ್ರವೆಂಬ ಪ್ರಶಸ್ತಿಯನ್ನು ಪಡೆದಿದೆ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.
ಅನೂಹ್ಯ ಸಂಬಂಧಗಳ ವಿಶೇಷ ಅನುಭೂತಿಯನ್ನು ಬಯಸುವವರಿಗೆ ಈ ಸಿನಿಮಾ ಮೆಚ್ಚಿಗೆ ಆಗುತ್ತದೆ. ತನ್ನ ಪಯಣ ದ ಮೂಲಕ ಈಓ ಮನುಷ್ಯನ ಹತ್ತು ಹಲವು ಮುಖಗಳನ್ನು ಪರಿಚಯಿಸುವ ಪರಿ ವಿಶೇಷ.
ಅಮೆಜಾನ್ ಪ್ರೈಮ್ ನಲ್ಲಿ ಚಿತ್ರ ವೀಕ್ಷಣೆಗೆ ಲಭ್ಯವಿದೆ ಚಿತ್ರದ ಕಾಲಾವಧಿ 1ಗಂಟೆ:40 ನಿಮಿಷ

ತಾರಾಗಣ. – ಸಾಂಡ್ರಾ ಡ್ರಜಿ ಮಲ್ಸಯ, ಲೋ ರೆಂಜೋ ಜರ್ಜೊಲೊ, ತೋಮಾಸ್ ಆರ್ಗನೆಸ್.
ನಿರ್ದೇಶನ – ಜೌರ್ಜಿ ಸ್ಕೋಲಿ ಮೊನ್ಸೀ
ಸಿನಿಮಾಟೋಗ್ರಾಫಿ- ಮೈ ಕೇಲ್ ಡೈಮೆಕ್ಸ್.
ಸಂಕಲನ ,-ಅಗ್ನಿ ಸ್ನೇಕ್ ಘಿರಿಸ್ಕ
ಸಂಗೀತ -ಪಾವಲ್ ಮ್ಯಾಕುಟ್ಯಮ್


ಕುಸುಮ ಮಂಜುನಾಥ್

ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಕುಸುಮಾ ಮಂಜುನಾಥ್ ರವರು ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತಿ ಯನ್ನು ಹೊಂದಿದ್ದಾರೆ. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ “ಸಾಧನ ವಿದ್ಯಾ” ಮಾಸ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ನಾಲ್ಕೈದು ವರ್ಷಗಳು ಕೆಲಸ ಮಾಡಿದ ಅನುಭವವಿದೆ. ರೋಟರಿ ಸಹಯೋಗದಲ್ಲಿ ಸಾಕ್ಷರತಾ ಮಿಷನ್ ಕಾರ್ಯಕ್ರಮದಡಿ ಕೂಲಿ ಕಾರ್ಮಿಕರಿಗೆ ಅಕ್ಷರ ಕಲಿಸುವ ಸೇವೆ ಮಾಡಿದ್ದಾರೆ. ಕಥೆ ,ಕವನ, ಲೇಖನ ಬರೆಯುವುದು ಇವರ ಹವ್ಯಾಸ. ಹಲವು ಬ್ಲಾಗ್ ಗಳಲ್ಲಿ ,ನಿಯತ ಕಾಲಿಕೆಗಳಲ್ಲಿ ಇವರ ಲೇಖನ ಪ್ರಕಟವಾಗಿದೆ. ಸಂಗೀತ ಕೇಳುವುದು ,ಪತ್ರಿಕೆ ಓದುವುದು ಇವರ ಇತರೆ ಹವ್ಯಾಸ.

Leave a Reply

Back To Top