ವಿಜಯಲಕ್ಷ್ಮಿ ಕೊಟಗಿ -ಗಜಲ್

ಕಾವ್ಯ ಸಂಗಾತಿ

ವಿಜಯಲಕ್ಷ್ಮಿ ಕೊಟಗಿ.

ಗಜಲ್

ಸಾಧಕನ ಸಾಧನೆ ಹೆಮ್ಮೆಯ ಪ್ರತೀಕವಾಗಬೇಕಿದೆ ಈ ಪ್ರತಿಮೆ
ಸಾಧಿಸಿದ್ದೇನು ಎಂತೆಂಬ ಮಹತೆಯ ಸಾರಬೇಕಿದೆ ಈ ಪ್ರತಿಮೆ

ಬೀದಿ ವೃತ್ತ ಬಿಸಿಲು ಮಳೆಯಲಿ ಒಬ್ಬಂಟಿಯಾಗಿ ನಿಲ್ಲಬೇಕಿಲ್ಲ
ಜನರ ಹೃದಯ ಸಿಂಹಾಸನದಲ್ಲಿ ವಿರಾಜಿಸಬೇಕಿದೆ ಈ ಪ್ರತಿಮೆ

ಕಲ್ಲು ಕಂಚೋ ರಜತ ಬಂಗಾರದಎರಕವೇ ಆಗಬೇಕಿಲ್ಲ
ನೆನೆಯುವ ಮುಗ್ಧ ಹೃನ್ಮಂದಿರದಿ ಮೂರ್ತಗೊಳ್ಳಬೇಕಿದೆ ಈ ಪ್ರತಿಮೆ

ಮತಾಂಧತೆ ಸಾರುವ ಅಸಹ್ಯ ಸೂತಕದ ಛಾಯೆಯಾಗಬೇಕಿಲ್ಲ
ಕೊಳಕು ಮನವನು ತೊಳೆಯುವ ನಿಜ ಮಾರ್ಜಕವಾಗಬೇಕಿದೆ ಈ ಪ್ರತಿಮೆ

ಕಬ್ಬಿಣದ ಕಟಕಟೆಯಲೂ ಅಂಗಾಂಗ ಛೇದನದ ಭಯಬೇಕಿಲ್ಲ
ಭಾವ ಕೆರಳಿಸುವ ಮಂದಿಯಿಂದ ಮುಕ್ತವಾಗಬೇಕಿದೆ ಈ ಪ್ರತಿಮೆ

ಗೊಂಬೆಗಾಗಿ ಹರಿಯುವ ನೆತ್ತರಿಗೆ ವಿಜಿಯು ದಾಖಲೆ ಕೊಡಬೇಕಿಲ್ಲ
ಮಾನವತೆಯ ಹೋರಾಟಕ್ಕೆ ಪ್ರೇರಣೆಯಾಗಬೇಕಿದೆ ಈ ಪ್ರತಿಮೆ.


Leave a Reply

Back To Top